Jammu & Kashmir: ಕಮರಿಗೆ ಬಿದ್ದ ಬಸ್; ಚುನಾವಣಾ ಕರ್ತವ್ಯದಲ್ಲಿದ್ದ ಮೂವರು ಬಿಎಸ್‌ಎಫ್ ಯೋಧರ ಸಾವು
ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಬ್ರೆಲ್ ವಾಟರ್‌ಹೇಲ್ ಪ್ರದೇಶದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೂವರು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ 32 ಮಂದಿ ಗಾಯಗೊಂಡಿರುವುದಾಗಿದೆ ವರದಿಯಾಗಿದೆ. ಗುಡ್ಡಗಾಡು ರಸ್ತೆಯಿಂದ ಆಯತಪ್ಪಿ ಕಮರಿಗೆ ಬಸ್ ಬಿದ್ದ ಕಾರಣ ಭೀಕರ ಅಪಘಾತ ಸಂಭವಿಸಿದೆ. 35 ಬಿಎಸ್‌ಎಫ್ ಸಿಬ್ಬಂದಿಗಳಲ್ಲಿ ಆರು ಮಂದಿಗೆ ಗಂಭೀರ ಗಾಯಗಳಾಗಿವೆ.
ಗಾಯಗೊಂಡವರಲ್ಲಿ ಬಿಎಸ್‌ಎಫ್ ಸಿಬ್ಬಂದಿ ಮಾತ್ರವಲ್ಲದೆ ನಾಗರಿಕ ಚಾಲಕ ಕೂಡ ಸೇರಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಎರಡನೇ ಹಂತದ ಚುನಾವಣೆಯಲ್ಲಿ ಕರ್ತವ್ಯಕ್ಕಾಗಿ ಕರೆದೊಯ್ಯುತ್ತಿದ್ದ ಬಸ್ ವತರ್ಹಾಲ್‌ನ ಬ್ರೆಲ್ ಬಳಿ ಅಪಘಾತಕ್ಕೀಡಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಎರಡನೇ ಹಂತದ ಚುನಾವಣೆಗೆ ಸಿದ್ಧತೆ
ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕಗಳ ಬಳಿಕ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಸೆಪ್ಟೆಂಬರ್ 18 ರಂದು 24 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಇದೀಗ ಎರಡನೇ ಹಂತದ ಚುನಾವಣೆಗಾಗಿ ಸಿದ್ಧತೆ ನಡೆಯುತ್ತಿದೆ.
ಎರಡನೇ ಹಂತದಲ್ಲಿ 26 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಸೆಪ್ಟೆಂಬರ್ 25 ರಂದು ನಡೆಯಲಿದೆ. ಉಳಿದ 40 ಕ್ಷೇತ್ರಗಳಲ್ಲಿ ಅಕ್ಟೋಬರ್ 1 ರಂದು ಮೂರನೇ ಮತ್ತು ಅಂತಿಮ ಹಂತದ ಚುನಾವಣೆ ನಡೆಯಲಿದೆ.
ಭಾರಿ ಬಿಗಿ ಭದ್ರತೆ
ಮತದಾನ ನಡೆಯುವ ಹಿನ್ನಲೆಯಲ್ಲಿ 26 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರಿ ಬಿಗಿ ಭದ್ರತೆ ನೀಡಲಾಗುತ್ತಿದೆ. ಈಗಾಗಲೇ ಕೇಂದ್ರ ಸಶಸ್ತ್ರ ಅರೆಸೇನಾ ಪಡೆಗಳು (ಸಿಎಪಿಎಫ್) ಮತ್ತು ಬಿಎಸ್‌ಎಫ್ ಸಿಬ್ಬಂದಿ ರಜೌರಿಯತ್ತ ತೆರಳುತ್ತಿವೆ. ರಜೌರಿಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸೆಪ್ಟೆಂಬರ್ 25 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ.
ಚುನಾವಣೆಗಳ ಫಲಿತಾಂಶ ಪ್ರಕಟಣೆಯ ದಿನಾಂಕವನ್ನು ಚುನಾವಣಾ ಆಯೋಗ ಬದಲಾಯಿಸಿದೆ. ಈ ಮೊದಲು ಅಕ್ಟೋಬರ್ 4 ರಂದು ಫಲಿತಾಂಶ ಪ್ರಕಟಿಸುವುದಾಗಿ ಹೇಳಿತ್ತು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications