Tomato Price: ಉತ್ತರ ಭಾರತದಲ್ಲಿ ₹200 ಕ್ಕೆ ತಲುಪಿದ ಟೊಮೆಟೊ ದರ- ಭಾರೀ ಮಳೆಯಿಂದಾಗಿ ಮತ್ತಷ್ಟು ಏರಿಕೆ ಸಾಧ್ಯತೆ
ನವದೆಹಲಿ, ಜುಲೈ 10: ಉತ್ತರ ಭಾರತದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಆ ಹಿನ್ನೆಲೆಯಲ್ಲಿ ತರಕಾರಿಗಳ ದರಗಳಲ್ಲಿ ಭಾರೀ ಏರಿಕೆ ಕಂಡಿದೆ. ಅದರಲ್ಲೂ ಟೊಮೆಟೊ ದರವು ಐತಿಹಾಸಕ ದಾಖಲೆ ಸೃಷ್ಟಿಸಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವಾರು ನಗರಗಳಲ್ಲಿ ಟೊಮೆಟೊ ದರವು ಪ್ರತಿ ಕೆಜಿಗೆ ₹200 ಕ್ಕೆ ತಲುಪಿರುವ ಬಗ್ಗೆ ವರದಿಯಾಗಿದೆ.
ನಿರಂತರ ಮಳೆಯು ಟೊಮೆಟೊ ಪೂರೈಕೆಗೆ ಅಡ್ಡಿಪಡಿಸಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಟೊಮೊಟೊ ಅಲ್ಲದೇ ಇತರ ತರಕಾರಿಗಳ ದರಗಳು ಸಹ ಏರಿಕೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಟೊಮೊಟೊ ಉತ್ಪಾದಿಸುವ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಈ ಪ್ರದೇಶಗಳು ಜಲಾವೃತವಾಗಿವೆ. ಈ ಹಿನ್ನೆಲೆಯಲ್ಲಿ ಮಣ್ಣಿನ ಅಡಿಯಲ್ಲಿ ಬೆಳೆಗಳು ಕೊಳೆಯಲು ಆರಂಭಿಸಿವೆ ಎಂದು ತಿಳಿದುಬಂದಿವೆ. ವಿಶೇಷವಾಗಿ ಈರುಳ್ಳಿ ಮತ್ತು ಶುಂಠಿ ಹಾನಿಗೊಳಗಾಗುತ್ತವೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಸೋಮವಾರದಂದು ಅಖಿಲ ಭಾರತ ಸರಾಸರಿ ಚಿಲ್ಲರೆ ಟೊಮೆಟೊ ದರವು ಪ್ರತಿ ಕೆಜಿಗೆ 104.38 ರಷ್ಟಿತ್ತು. ಗರಿಷ್ಠ ಬೆಲೆಯು ಕೆಜಿಗೆ 200 ರೂ. ಆಗಿದೆ.
ಕೋಲ್ಕತ್ತಾದಲ್ಲಿ ಕೆಜಿಗೆ 149 ರೂ., ಮುಂಬೈನಲ್ಲಿ ಕೆಜಿಗೆ 135 ರೂ., ಚೆನ್ನೈನಲ್ಲಿ 123 ರೂ., ಮತ್ತು ದೆಹಲಿಯಲ್ಲಿ 200 ರೂ. ಎಂದು ಅಂಕಿಅಂಶಗಳು ತಿಳಿಸಿವೆ.

ಟೊಮೆಟೊ ಮತ್ತು ಇತರ ತರಕಾರಿಗಳ ಚಿಲ್ಲರೆ ಬೆಲೆಯು ಗುಣಮಟ್ಟ ಮತ್ತು ಅವುಗಳನ್ನು ಮಾರಾಟ ಮಾಡುವ ಸ್ಥಳಗಳನ್ನು ಮೇಲೆ ಬದಲಾಗುತ್ತವೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
'ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದೆಹಲಿಯಲ್ಲಿ ಟೊಮೆಟೊ ಪೂರೈಕೆಯಲ್ಲಿ ಮತ್ತಷ್ಟು ವ್ಯತ್ಯಯ ಉಂಟಾಗಿದೆ. ಭಾರೀ ಮಳೆ ಮುಂದುವರಿದರೆ, ಶೀಘ್ರದಲ್ಲೇ ಬೆಲೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಯಿದೆ' ಎಂದು ಆಜಾದ್‌ಪುರ ಟೊಮೇಟೊ ಸಂಘದ ಅಧ್ಯಕ್ಷ ಮತ್ತು ಸದಸ್ಯ ಅಶೋಕ್ ಕೌಶಿಕ್ 'ಪಿಟಿಐ'ಗೆ ಹೇಳಿದ್ದಾರೆ.
ಸೋಮವಾರ ಆಜಾದ್‌ಪುರ ಮಂಡಿಯಲ್ಲಿ ಟೊಮೆಟೊ ಸಗಟು ಬೆಲೆ ಕೆಜಿಗೆ 100-160 ರೂ. ಇತ್ತು. ಪ್ರಸ್ತುತ ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಿಂದ ಟೊಮೊಟೊಗಳನ್ನು ಪೂರೈಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿ ವರ್ಷವೂ ಮಳೆಗಾಲದಲ್ಲಿ ಹೆಚ್ಚಿನ ತರಕಾರಿಗಳ ಬೆಲೆಗಳು ಸ್ಥಿರವಾಗಿರುತ್ತವೆ. ಆದರೆ, ಕೆಲವು ಬೆಳೆಗಳು ನೀರಿನಿಂದಾಗಿ ಹಾನಿಗೊಳಗಾಗುತ್ತವೆ ಎಂದು ಕೌಶಿಕ್ ಹೇಳಿದ್ದಾರೆ.
'ನಾನು ಆಜಾದ್‌ಪುರ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 160 ರೂ.ಗೆ ಖರೀದಿಸಿದೆ. ಪ್ರತಿ ಕೆಜಿಗೆ 170 ರೂ.ಗೆ ಚಿಲ್ಲರೆ ಮಾರಾಟ ಮಾಡುತ್ತಿದ್ದೇನೆ. ಇತರ ಕೆಲವು ಮಾರಾಟಗಾರರು ದೆಹಲಿಯಲ್ಲಿ ಕೆಜಿಗೆ 200 ರೂ.ವರೆಗೆ ಮಾರಾಟ ಮಾಡುತ್ತಿದ್ದಾರೆ' ಎಂದು ಪಶ್ಚಿಮ ವಿಹಾರ್‌ನ ಸ್ಥಳೀಯ ಚಿಲ್ಲರೆ ಮಾರಾಟಗಾರ ಜ್ಯೋತಿಶ್ ಝಾ ತಿಳಿಸಿದ್ದಾರೆ.
ಫ್ರೆಂಚ್ ಬೀನ್ಸ್, ಹೂಕೋಸು, ಎಲೆಕೋಸು ಮತ್ತು ಶುಂಠಿಯಂತಹ ಇತರ ತರಕಾರಿಗಳ ಜೊತೆಗೆ ಈರುಳ್ಳಿ ಮತ್ತು ಆಲೂಗಡ್ಡೆಗಳ ಚಿಲ್ಲರೆ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ತರಕಾರಿಗಳು ಕೆಜಿಗೆ 60 ರೂ.ಗಿಂತ ಕಡಿಮೆಯಿಲ್ಲ. ಉದಾಹರಣೆಗೆ ಬೆಂಡಿಕಾಯಿ ಬೆಲೆ ಕೆಜಿಗೆ 80 ರೂ.ಗೆ ಮಾರಾಟವಾದರೆ, ಹಾಗಲಕಾಯಿ, ಬಾಟಲ್ ಸೋರೆಕಾಯಿ ಮತ್ತು ಸೌತೆಕಾಯಿ ಪ್ರತಿ ಕೆಜಿಗೆ 60 ರೂ.ಆಗಿದೆ. ಹೂಕೋಸು ಕೆಜಿಗೆ 180 ರೂ.ಗೆ ಮಾರಾಟವಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಕಳೆದ ಹದಿನೈದು ದಿನಗಳಲ್ಲಿ ಶುಂಠಿ ಬೆಲೆ ಕೆಜಿಗೆ 240 ರೂ.ನಿಂದ 300 ರೂ.ಗೆ ಏರಿಕೆಯಾಗಿದೆ. ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ.












Click it and Unblock the Notifications