Tirupati Tirumala: ವಿಐಪಿ ದರ್ಶನದ ಕುರಿತು ಟಿಟಿಡಿ ಮಹತ್ವದ ಘೋಷಣೆ
ತಿರುಪತಿ, ಸೆಪ್ಟೆಂಬರ್, 01: ತಿರುಮಲದಲ್ಲಿ ನಡೆಯುವ ಬ್ರಹ್ಮೋತ್ಸವದ ವೇಳೆ ವಿಐಪಿ ಬ್ರೇಕ್ ದರ್ಶನಕ್ಕೆ ಶಿಫಾರಸು ಪತ್ರಗಳನ್ನು ಸ್ವೀಕರಿಸುವುದಿಲ್ಲ ಎಂದು ತಿರುಮಲ ತಿರುಪತಿ ದೇವಸ್ತಾಸ್ಥಾನ (ಟಿಟಿಡಿ) ಟ್ರಸ್ಟ್ ಬೋರ್ಡ್ ಅಧ್ಯಕ್ಷ ಬಿ.ಕರುಣಾಕರ್ ರೆಡ್ಡಿ ತಿಳಿಸಿದ್ದಾರೆ.
ಬುಧವಾರ ತಿರುಮಲ ದೇವಸ್ಥಾನದ ಮುಂಭಾಗದಲ್ಲಿ ನಡೆದ ಬ್ರಹ್ಮೋತ್ಸವದ ಪುಸ್ತಕವನ್ನು ಟಿಟಿಡಿ ಇಒ ಎ.ವಿ.ಧರ್ಮ ರೆಡ್ಡಿ ಬಿಡುಗಡೆಗೊಳಿಸಿ ಮಾತನಾಡಿ, ವಾಹನ ನಿಲುಗಡೆ ಸೇವೆಗಳು, ಕೊಠಡಿಗಳು ಮತ್ತು ಅನ್ನಪ್ರಸಾದ, ಲಡ್ಡುಗಳು ಮತ್ತು ಸಾಮಾನ್ಯ ಭಕ್ತರಿಗೆ ಭದ್ರತೆ ಒದಗಿಸಲು ಟಿಟಿಡಿ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಹೇಳಿದರು.

ತಿರುಪತಿಯ ತಿರುಮಲ ತಿಮ್ಮಪ್ಪನಿಗೆ ಈ ವರ್ಷ ಎರಡು ಬಾರಿ ಬ್ರಹ್ಮೋತ್ಸವ ನಡೆಯಲಿದೆ. ಅಧಿಕಮಾಸ ಹಿನ್ನೆಲೆ ಸೆಪ್ಟೆಂಬರ್ 18ರಿಂದ 26ರವರೆಗೂ ವಾರ್ಷಿಕ ಬ್ರಹ್ಮೋತ್ಸವ ನಡೆಯಲಿದೆ. ಬಳಿಕ ಆಕ್ಟೋಬರ್ 15ರಿಂದ 23ರ ವರೆಗೂ ನವರಾತ್ರಿ ಬ್ರಹೋತ್ಸವ ನಡೆಯಲಿದೆ. ಈ ವೇಳೆ ವಿಐಪಿ ಬ್ರೇಕ್ ದರ್ಶನಕ್ಕೆ ಶಿಫಾರಸು ಪತ್ರಗಳನ್ನು ಸ್ವೀಕರಿಸುವುದಿಲ್ಲ ಎಂದು ಟಿಟಿಡಿ ಟ್ರಸ್ಟ್ ಬೋರ್ಡ್ ಅಧ್ಯಕ್ಷ ಬಿ.ಕರುಣಾಕರ್ ರೆಡ್ಡಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಟಿಟಿಡಿ ಅಧ್ಯಕ್ಷರು, ಸೆಪ್ಟೆಂಬರ್ 18ರಂದು ವಾರ್ಷಿಕ ಬ್ರಹ್ಮೋತ್ಸವದ ಮೊದಲ ದಿನದಂದು ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಶ್ರೀಗಳಿಗೆ ರೇಷ್ಮೆ ವಸ್ತ್ರವನ್ನು ಅರ್ಪಿಸಲಿದ್ದಾರೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಎರಡು ಬೃಹತ್ ಧಾರ್ಮಿಕ ಕಾರ್ಯಕ್ರಮಗಳಿಗೆ ಟಿಟಿಡಿಯ ಎಲ್ಲಾ ಇಲಾಖೆಗಳಿಂದ ವ್ಯವಸ್ಥೆಗಳು ನಡೆಯುತ್ತಿವೆ ಎಂದು ಹೇಳಿದರು.
ಟಿಟಿಡಿ ಸದಸ್ಯರು ಪ್ರಮಾಣ ವಚನ ಸ್ವೀಕಾರ
ಅಲ್ಲದೆ ಈ ವೇಳೆ ಮಾಜಿ ಸಚಿವ ಸಿದ್ದ ರಾಘವ ರಾವ್ ಅವರ ಪುತ್ರ ಸಿದ್ದ ಸುಧೀರ್ ಕುಮಾರ್ ಸೇರಿದಂತೆ ಇನ್ನೂ ಆರು ಸದಸ್ಯರು ತಿರುಮಲ ದೇವಸ್ಥಾನದಲ್ಲಿ ಟಿಟಿಡಿ ಟ್ರಸ್ಟ್ ಬೋರ್ಡ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ಕುಟುಂಬ ಸದಸ್ಯರೊಂದಿಗೆ ಸರದಿಯ ಮೂಲಕ ಗರ್ಭಗುಡಿಗೆ ಬಂದ ಸುಧೀರ್ ಕುಮಾರ್ ಅವರನ್ನು ಮಹಾದ್ವಾರದಲ್ಲಿ ಟಿಟಿಡಿ ಅಧಿಕಾರಿಗಳು ಸ್ವಾಗತಿಸಿದರು.
ಸುಧೀರ್ ಕುಮಾರ್ ಅವರು ವೆಂಕಟೇಶ್ವರ, ವಕುಲ ಮಠ, ವಿಮಾನ ವೆಂಕಟೇಶ್ವರ ಸ್ವಾಮಿ, ಶ್ರೀ ಭಾಷ್ಯಕರ್ಲ ಸನ್ನಿಧಿ ಮತ್ತು ಶ್ರೀ ಯೋಗ ನರಸಿಂಹ ಸ್ವಾಮಿಯ ದರ್ಶನ ಪಡೆದು, ರಂಗನಾಯಕುಲ ಮಂಟಪದಲ್ಲಿ ವೇದಾಶೀರ್ವಚನ ನೀಡಿದರು. ನಂತರ ಸುಧೀರ್ ಕುಮಾರ್ ಅವರಿಗೆ ಟಿಟಿಡಿ ಕರುಣಾಕರ ರೆಡ್ಡಿ ಅವರು ತೀರ್ಥ ಪ್ರಸಾದಗಳನ್ನು ನೀಡಿ ಶ್ರೀಗಳ ಭಾವಚಿತ್ರಗಳನ್ನು ನೀಡಿದರು.
ಟಿಟಿಡಿ ಜೆಇಒ ವೀರಬ್ರಹ್ಮಮ್ ಅವರು ವಳವೆನ್, ಯೆಲ್ಲರೆಡ್ಡಿಗರಿ ಸೀತಾರಾಮ ರೆಡ್ಡಿ, ಬಾಲಸುಬ್ರಮಣಿಯನ್ ಪಳನಿಸಾಮಿ, ಆರ್.ವೆಂಕಟ ಸುಬ್ಬಾ ರೆಡ್ಡಿ, ಸಿದ್ದವತಂ ಯಾನಾದಯ್ಯ ಮತ್ತು ಸುಧೀರ್ ಕುಮಾರ್ ಸೇರಿದಂತೆ ಎಲ್ಲಾ ಆರು ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ಬ್ರಹ್ಮೋತ್ಸವದ ಸಂದರ್ಭದಲ್ಲಿ ಸೆಪ್ಟೆಂಬರ್ 18 ರಿಂದ 26 ಮತ್ತು ಅಕ್ಟೋಬರ್ 15 ರಿಂದ 23 ರವರೆಗೆ ಅಷ್ಟದಳಪಾದ ಪದ್ಮಾರಾಧನೆ, ತಿರುಪ್ಪವಾದ, ಕಲ್ಯಾಣೋತ್ಸವ, ಸಹಸ್ರದೀಪಾಲಂಕಾರ ಮತ್ತು ಊಂಜಾಲ್ ಸೇವೆಗಳನ್ನು ಟಿಟಿಡಿ ರದ್ದುಗೊಳಿಸಿದೆ. ಉಳಿದಂತೆ ಮುಂಗಡ ಕಾಯ್ದಿರಿಸಲಾದ ಬ್ರಹ್ಮೋತ್ಸವಂ ಸೇವಾ ಟಿಕೆಟ್‌ಗಳನ್ನು ಗೊತ್ತುಪಡಿಸಿದ ಸೇವೆಗಳಿಗೆ ಮಾತ್ರ ಅನುಮತಿಸಲಾಗುತ್ತದೆ ಎನ್ನುವ ಮಾಹಿತಿ ಇದೆ.












Click it and Unblock the Notifications