Tirupati Temple: ತಿರುಪತಿಯಲ್ಲಿ ನೈರ್ಮಲ್ಯ ಕಾಮಗಾರಿಗೆ ಟೆಂಡರ್ ಅಂತಿಮಗೊಳಿಸದಂತೆ ಟಿಟಿಡಿಗೆ ಹೈಕೋರ್ಟ್ ನಿರ್ದೇಶನ
ವಿಜಯವಾಡ ಡಿಸೆಂಬರ್ 14: ತಿರುಪತಿಯಲ್ಲಿ ನೈರ್ಮಲ್ಯ ಕಾಮಗಾರಿಗೆ ಟೆಂಡರ್ ಅಂತಿಮಗೊಳಿಸದಂತೆ ಟಿಟಿಡಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಹೌದು... ತಿರುಪತಿ ನಗರದಲ್ಲಿ ಅಂದಾಜು 100 ಕೋಟಿ ವೆಚ್ಚದ ನೈರ್ಮಲ್ಯ ಕಾಮಗಾರಿಗಳನ್ನು ಅಂತಿಮಗೊಳಿಸದಂತೆ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಟ್ರಸ್ಟ್ ಬೋರ್ಡ್‌ಗೆ ಆಂಧ್ರಪ್ರದೇಶ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.

ತಿರುಪತಿ ಮಹಾನಗರ ಪಾಲಿಕೆಯು ಇಡೀ ನಗರದ ನೈರ್ಮಲ್ಯಕ್ಕಾಗಿ ವರ್ಷಕ್ಕೆ 50 ಕೋಟಿ ರೂಪಾಯಿ ಖರ್ಚು ಮಾಡುತ್ತಿರುವಾಗ, ಟಿಟಿಡಿ ತನ್ನ ಸಂಸ್ಥೆಗಳ ನೈರ್ಮಲ್ಯ ನಿರ್ವಹಣೆಗೆ 100 ಕೋಟಿ ರೂಪಾಯಿ ಖರ್ಚು ಯಾಕೆ ಎಂದು ನ್ಯಾಯಾಲಯ ಆಶ್ಚರ್ಯಪಟ್ಟಿದೆ.
ದೇವಸ್ಥಾನಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಲ್ಲಿ ನೈರ್ಮಲ್ಯ ಕಾಪಾಡುವ ಹೆಸರಿನಲ್ಲಿ 100 ಕೋಟಿ ವೆಚ್ಚ ಮಾಡಲು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ನೀಡಿದ ಅನುಮೋದನೆಯನ್ನು ಪ್ರಶ್ನಿಸಿ ಟಿಟಿಡಿ ಮಾಜಿ ಸದಸ್ಯ ಮತ್ತು ಬಿಜೆಪಿ ಕಾರ್ಯಾಧ್ಯಕ್ಷ ಜಿ ಭಾನು ಪ್ರಕಾಶ್ ರೆಡ್ಡಿ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ತಿರುಪತಿ ಮಹಾನಗರ ಪಾಲಿಕೆ ಈಗಾಗಲೇ ನೈರ್ಮಲ್ಯಕ್ಕಾಗಿ ಹಣವನ್ನು ಖರ್ಚು ಮಾಡುವಾಗ ಟಿಟಿಡಿ ಈ ಪ್ರಮಾಣದ ಹಣವನ್ನು ಖರ್ಚು ಮಾಡುವುದು ಸರಿಯೇ ಎಂದು ಪ್ರಶ್ನಿಸಲಾಗಿದೆ. ಇದನ್ನು ಪರಿಶೀಲನೆ ಮಾಡಿದ ಕೋರ್ಟ್ 100 ಕೋಟಿ ವೆಚ್ಚದ ನೈರ್ಮಲ್ಯ ಕಾಮಗಾರಿಗಳನ್ನು ಅಂತಿಮಗೊಳಿಸದಂತೆ ಟಿಟಿಡಿಗೆ ಆದೇಶ ಹೊರಡಿಸಿದೆ.
ತಿರುಮಲ ತಿರುಪತಿ ದೇವಾಲಯವನ್ನು ಹಿಂದೂ ಧರ್ಮಗ್ರಂಥಗಳಲ್ಲಿ ವಿಷ್ಣು ದೇವನು ಕಲಿಯುಗದಲ್ಲಿ ವಾಸಿಸುವ ಐಹಿಕ ಸ್ಥಳವೆಂದು ವೈಭವಯುತವಾಗಿ ವಿವರಿಸಲಾಗಿದೆ. ತಿರುಪತಿ ಬಾಲಾಜಿ ಅಥವಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಹಿಂದೂ ಪುರಾಣದ ಅತ್ಯಂತ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾಗಿದೆ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಾವು ಈ ಅದ್ಭುತವಾದ ಹಾಗೂ ಪ್ರಭಾವಶಾಲಿಯಾದ ದೇವಾಲಯವನ್ನು ನೋಡಬಹುದು.
ವೈಕುಂಠ ದ್ವಾರ ದರ್ಶನ ಟಿಕೆಟ್ ಬಿಡುಗಡೆ
ತಿರುಪತಿಯ 9 ಕೇಂದ್ರಗಳಲ್ಲಿರುವ 100 ಕೌಂಟರ್‌ಗಳಲ್ಲಿ ಡಿಸೆಂಬರ್ 22 ರಂದು 10 ದಿನಗಳ ವೈಕುಂಠ ದ್ವಾರ ದರ್ಶನಕ್ಕಾಗಿ 4.25 ಲಕ್ಷ ಟೈಮ್ ಸ್ಲಾಟ್ ಸರ್ವದರ್ಶನ ಟೋಕನ್‌ಗಳನ್ನು ಬಿಡುಗಡೆ ಮಾಡಲಾಗುವುದು. ಇದಕ್ಕಾಗಿ ಡಿಸೆಂಬರ್ 23 ರಿಂದ ಜನವರಿ 1 ರವರೆಗೆ ಮಕ್ಕಳು, ಅಂಗವಿಕಲರು, ವೃದ್ಧರು ಮತ್ತು ಅನಿವಾಸಿ ಭಾರತೀಯರ ವಿಶೇಷ ದರ್ಶನವನ್ನು ರದ್ದುಗೊಳಿಸಲಾಗಿದೆ. ಭಕ್ತರು ಈ ವಿಷಯವನ್ನು ಗಮನಿಸಿ ಟಿಟಿಡಿಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.
ವೈಕುಂಠ ದ್ವಾರ ದರ್ಶನಕ್ಕಾಗಿ ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ಡಿಸೆಂಬರ್ 23 ರಿಂದ ಜನವರಿ 1ರವರೆಗೆ ದಿನಕ್ಕೆ 2000 ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಭಕ್ತರು ಶ್ರೀವಾರಿ ಟ್ರಸ್ಟ್ ಗೆ ರೂ.10 ಸಾವಿರ ದೇಣಿಗೆ ನೀಡಿ 300ರೂಪಾಯಿ ದರ್ಶನ ಟಿಕೆಟ್ ಖರೀದಿಸಬೇಕು. ಈ ಟಿಕೆಟ್‌ಗಳನ್ನು ಪಡೆಯುವ ಭಕ್ತರಿಗೆ ಮಹಾ ಲಘು ದರ್ಶನ (ಜಯ ವಿಜಯದಿಂದ ಮಾತ್ರ) ಇರುತ್ತದೆ.
ಅಲ್ಲದೆ ಅಲಿಪಿರಿ ವಾಕಿಂಗ್ ಪಾತ್‌ನಲ್ಲಿ ತಿರುಮಲಕ್ಕೆ ತೆರಳುವ ಭಕ್ತರು ಜಾಗೃತರಾಗಬೇಕು ಎಂದು ಟಿಟಿಡಿ ಇಒ ಸೂಚಿಸಿದ್ದಾರೆ. ಅಕ್ಟೋಬರ್ 24 ಮತ್ತು 27 ರ ನಡುವೆ ಶ್ರೀಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದ ರಿಪೀಟರ್ ಮಧ್ಯದ ಪ್ರದೇಶದಲ್ಲಿ ಎರಡು ಚಿರತೆಗಳು ಮತ್ತು ಕರಡಿ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಕಾಣಿಸಿಕೊಂಡಿವೆ. ಆದ್ದರಿಂದ ಪಾದಚಾರಿ ಮಾರ್ಗದ ಭಕ್ತರು ಜಾಗೃತರಾಗಿ ಗುಂಪು ಗುಂಪಾಗಿ ತೆರಳುವಂತೆ ಮನವಿ ಮಾಡಲಾಗಿದೆ.
ಇದಲ್ಲದೆ 2024 ರ ಡೈರಿಗಳು ಮತ್ತು ಕ್ಯಾಲೆಂಡರ್‌ಗಳು ತಿರುಮಲ ಮತ್ತು ತಿರುಪತಿಯಲ್ಲಿರುವ ಎಲ್ಲಾ ಟಿಟಿಡಿ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ. ಅದೇ ರೀತಿ ಭಕ್ತರು ttdevasthanams.ap.gov.in ವೆಬ್‌ಸೈಟ್ ಮೂಲಕ 12 ಪುಟಗಳ ಕ್ಯಾಲೆಂಡರ್‌ಗಳು, ಡೈರಿಗಳು ಮತ್ತು ಟೇಬಲ್ ಟಾಪ್ ಕ್ಯಾಲೆಂಡರ್‌ಗಳನ್ನು ಖರೀದಿಸಬಹುದು.












Click it and Unblock the Notifications