Tirupati Laddu: ಲಡ್ಡುವಿನಲ್ಲಿ ಗುಟ್ಕಾ ಪೌಚ್ ಪತ್ತೆ: ಟಿಟಿಡಿ ಕೊಟ್ಟ ಸ್ಪಷ್ಟನೆ ಹೇಗಿದೆ ನೋಡಿ!
ಸಹಸ್ರಾರು ಭಕ್ತ ವೃಂದ ಹೊಂದಿರುವ ಆಂಧ್ರ ಪ್ರದೇಶದದ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಭಕ್ತರ ಪಾವಿತ್ರ್ಯಕ್ಕೆ ಧಕ್ಕೆ ತರುವ ಕೆಲಸ ಈಗಾಗಲೇ ನಡೆದು ಹೋಗಿದೆ. ಟಿಟಿಡಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಿಕೆ ಬೆನ್ನಲ್ಲೆ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೇಟ್ ಸಿಕ್ಕಿದೆ ಎಂದು ಸುದ್ದಿಯಾಗಿದೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ (ಟಿಟಿಡಿ) ಪ್ರತಿಕ್ರಿಯಿಸಿದೆ.
ಆಂಧ್ರ ಪ್ರದೇಶದ ರಾಜ್ಯದ ಖಮ್ಮಂ ಜಿಲ್ಲೆಯ ಗ್ರಾಮಾಂತರ ಮಂಡಲ ವ್ಯಾಪ್ತಿಯಲ್ಲಿ ಗೊಲ್ಲಗುಡೆಂ ಪಂಚಾಯಿತಿ ವ್ಯಾಪ್ತಿಯ ಭಕ್ತರೊಬ್ಬರು ಕಳೆದ ಸೆಪ್ಟಂಬರ್ 19ರಂದು ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಮಾಡಿದ್ದರು. ನಂತರ ಅವರು ಸನ್ನಿಧಾನದಿಂದ ಬರುವಾಗ ಪ್ರಸಾದ ಲಡ್ಡು ಅನ್ನು ತಂದಿದ್ದರು. ಅದನ್ನು ಸಂಬಂಧಿಕರಿಗೆ ಹಂಚುವಾಗ ಅದರಲ್ಲಿ ಗುಟ್ಕಾ ಪ್ಯಾಕೆಟ್ ಪತ್ತೆ ಆಗಿದೆ ಎಂಬ ಸುದ್ದಿ ಸಂಚಲನ ಮೂಡಿಸಿದೆ. ಇದು ಭಕ್ತರ ಆತಂಕಕ್ಕೂ ಕಾರಣವಾಗಿದೆ.

ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಯಿತು. ಸದ್ಯ ಈ ಕುರಿತು ಪ್ರತಿಕ್ರಿಯಿಸಿರುವ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿಯು, ಲಡ್ಡುವಿನಲ್ಲಿ ಗುಟ್ಕಾ ಪಾಕೇಟ್ ಪತ್ತೆ ಸತ್ಯಕ್ಕೆ ದೂರವಾದದ್ದರು. ಇದರಲ್ಲಿ ಸತ್ಯಾಂಶವಿಲ್ಲ ಎಂದು ತಿಳಿಸಿದೆ.
ಟಿಟಿಡಿ ಕೊಟ್ಟ ಸ್ಪಷ್ಟನೆ ಹೀಗಿದೆ
''ಶ್ರೀವಾರಿ ಲಡ್ಡು ಪ್ರಸಾದದಲ್ಲಿರುವ ಗುಟ್ಕಾ (ತಂಬಾಕು) ಪೌಚ್ ಪತ್ತೆ ಆದ ವಿಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ. ಶ್ರೀವಾರಿ ಲಡ್ಡು ಪ್ರಸಾದದಲ್ಲಿ ಗುಟ್ಕಾ ಪ್ಯಾಕೆಟ್ ಪತ್ತೆಯಾಗಿದೆ ಎಂದು ಕೆಲ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿರುವುದು ಸರಿಯಲ್ಲ ಎಂದು ಟಿಟಿಡಿ ಹೇಳಿದೆ.

ತಿರುಮಲದಲ್ಲಿ ಶ್ರೀ ವೈಷ್ಣವ ಬ್ರಾಹ್ಮಣರು ಬಹಳ ಭಕ್ತಿ, ಶಿಸ್ತು ಮತ್ತು ಸಾಂಪ್ರದಾಯಿಕ ಆಚರಣೆಗಳ ಅನುಸರಣೆಯೊಂದಿಗೆ ಲಡ್ಡುಗಳನ್ನು ಪ್ರತಿದಿನ ದೊಡ್ಡ ಪ್ರಮಾಣದಲ್ಲಿ ತಯಾರಿಸುತ್ತಾರೆ. ಈ ಲಡ್ಡುಗಳ ತಯಾರಿಕೆಯನ್ನು 360-ಡಿಗ್ರಿ CCTV ಕಣ್ಗಾವಲು ಮೂಲಕ ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.
ಅತ್ಯಂತ ಸಂಘಟಿತ ಮತ್ತು ಪವಿತ್ರವಾದ ಈ ತಯಾರಿ ಪ್ರಕ್ರಿಯೆಯಲ್ಲಿ ತಂಬಾಕು ಇರುವಿಕೆಯ ಬಗ್ಗೆ ಇಂತಹ ವದಂತಿಗಳು ಹರಡುತ್ತಿರುವುದು ದುರದೃಷ್ಟಕರ. ಆದ್ದರಿಂದ ದೇಗುಲಕ್ಕೆ ಬರುವ ಅಪಾರ ಭಕ್ತರು ಟಿಟಿಡಿ ಸ್ಪಷ್ಟನೆ ಗಮನಿಸಬೇಕು'' ಎಂದು ಮನವಿ ಮಾಡಲಾಗಿದೆ.
ಭಕ್ತರ ನಂಬಿಕೆ, ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ
ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬರು ಬಳಕೆ ಬಗ್ಗೆ ನೀಡಿದ ಹೇಳಿಕೆ ಸಾಕಷ್ಟು ಸಂಚಲನ ಮೂಡಿಸಿದೆ. ಅಪಾರ ನಂಬಿಕೆ, ಶ್ರದ್ಧೆಯಿಂದ ಶ್ರೀವಾರಿಗೆ ಬರುತ್ತಿದ್ದ ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆ ಆಗಿದೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವು ಜೋರಾಗಿದೆ.
ಮೀನಿನ ಎಣ್ಣೆ, ಹಂದಿ ಕೊಬ್ಬನ್ನು ತಿರುಪತಿ ಲಡ್ಡುವಿನಲ್ಲಿ ಬಳಕೆ ಮಾಡುತ್ತಿದ್ದಾರೆ ಎಂಬುದು ಲಡ್ಡು ಪರೀಕ್ಷೆಯಿಂದಲೂ ಸಾಬೀತಾಗಿದೆ. ಕಡಿಮೆ ಬೆಲೆಯ ತುಪ್ಪದಲ್ಲಿ ಈ ಕೊಬ್ಬನ್ನು ಸೇರಿಸಲಾಗುತ್ತದೆ. ಹೇಳಿಕೊಳ್ಳಲು ಶ್ರೀಮಂತ ದೇವಾಲಯ ಎನ್ನುವ ಟಿಟಿಡಿ ಹಣ ಉಳಿಸಲು ಇಂತಹ ದಾರಿಗೆ ಇಳಿಯಿತೇ ಎಂಬ ಅನುಮಾನವು ವ್ಯಕ್ತವಾಗುತ್ತಿದೆ. ಈ ಸುದ್ದಿ ಬಿತ್ತರವಾದಾಗಿನಿಂದ ತಿರುಪತಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಇಳಿಕೆ ಮುಖ ಆಗಿರುವುದು ಕಂಡು ಬಂದಿದೆ.












Click it and Unblock the Notifications