Tirumala: ಮಳೆಗಾಲದಲ್ಲಿ ತಿರುಪತಿಯಲ್ಲಿ ನೀರಿನ ಸಮಸ್ಯೆ... 6 ದಿನಕ್ಕೊಮ್ಮೆ ನೀರು ಪೂರೈಕೆ!
ದೇಶದ ಹಲವೆಡೆ ಅಧಿಕ ಮಳೆಯಾಗುತ್ತಿದ್ದು, ಭೂಕುಸಿತ ಹಾಗೂ ಪ್ರವಾಹದಂತಹ ಘಟನೆಗಳು ವರದಿಯಾಗುತ್ತಿವೆ. ಆದರೆ ತಿರುಮಲದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು ಅಚ್ಚರಿಯನ್ನುಂಟುಮಾಡಿದೆ. ಹೀಗಾಗಿ ನೀರನ್ನು ಮಿತವಾಗಿ ಬಳಕೆ ಮಾಡುವಂತೆ ಟಿಟಿಡಿ ಸೂಚನೆ ನೀಡಿದೆ.
ಹೌದು... ತಿರುಪತಿಯ ಜಲ ಮೂಲಗಳಲ್ಲಿ ನೀರಿನ ಅಭಾವ ಕಂಡು ಬಂದಿದ್ದು, ಅದನ್ನು ಸರಿದೂಗಿಸಲು ಟಿಟಿಡಿ ಈ ನಿರ್ಧಾರ ತೆಗೆದುಕೊಂಡಿದೆ. ತಿರುಪತಿಗೆ ನೀರು ಪೂರೈಕೆ ಮಾಡುವ ಆಣೆಕಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಲಭ್ಯವಿಲ್ಲದ ಕಾರಣ ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ ತಿರುಮಲ ತಿರುಪತಿ ದೇವಸ್ಥಾನಂ (TTD) ಮಂಡಳಿಯು ತಿರುಮಲ ಬೆಟ್ಟದಲ್ಲಿ ನೀರನ್ನು ಮಿತವಾಗಿ ಬಳಸುವಂತೆ ಭಕ್ತರು ಮತ್ತು ಸ್ಥಳೀಯರಿಗೆ ತಿಳಿಸಿದೆ. ಅಲ್ಲದೆ ದೇವಸ್ಥಾನದ ಪ್ರದೇಶದಲ್ಲಿ 6 ದಿನಕ್ಕೊಮ್ಮೆ ನೀರು ಪೂರೈಕೆಯಾಗಲಿದೆ ಎಂದು ಟಿಟಿಡಿ ತಿಳಿಸಿದೆ.

6 ದಿನಕ್ಕೊಮ್ಮೆ ನೀರು ಪೂರೈಕೆ
ಶ್ರೀವಾರಿ ದೇವಸ್ಥಾನದ ಸುತ್ತಲು ಪ್ರದೇಶಗಳು ಹಾಗೂ ದೇವಸ್ಥಾನಕ್ಕೆ ಬರುವ ಭಕ್ತರು ಈ ಬಗ್ಗೆ ಗಮನ ಹರಿಸಬೇಕು ಎಂದು ಟಿಟಿಡಿ ತಿಳಿಸಿದೆ. ಜೊತೆಗೆ ಇನ್ಮುಂದೆ ವ್ಯಾಪಾರ ಸಂಕೀರ್ಣಗಳಿಗೆ 24 ಗಂಟೆ ನೀರು ಪೂರೈಕೆಯಾಗುವುದಿಲ್ಲ, ಬದಲಿಗೆ ಬೆಳಗ್ಗೆ 4 ಗಂಟೆ ಹಾಗೂ ಸಂಜೆ 4 ಗಂಟೆ ಮಾತ್ರ ನೀರು ಪೂರೈಕೆ ಮಾಡಲಾಗುವುದು. ಬೆಳಗ್ಗೆ 6ರಿಂದ 10ರವರೆಗೆ ಹಾಗೂ ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ದಿನದ 8 ಗಂಟೆ ಮಾತ್ರ ವ್ಯಾಪಾರ ಸಂಕೀರ್ಣಗಳಿಗೆ ನೀರು ಪೂರೈಕೆ ಮಾಡಲಾಗುವುದು ಎಂದು ಹೇಳಲಾಗಿದೆ. ಆಗಸ್ಟ್ 25ರಿಂದ ಈ ನಿಯಮಾವಳಿಗಳು ಜಾರಿಗೆ ಬರಲಿವೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.
ಒಂದು ವೇಳೆ ವ್ಯಾಪಾರಸ್ಥರಿಗೆ ಹೆಚ್ಚುವರಿ ನೀರು ಬೇಕಿದ್ದರೆ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುವಂತೆ ಟಿಟಿಡಿ ಸೂಚಿಸಿದೆ. ದಾನಿಗಳ ನೆರವಿನಿಂದ ತಿರುಮಲ ಬೆಟ್ಟದಲ್ಲಿ ನಿರ್ಮಿಸುತ್ತಿರುವ ಕಾಟೇಜ್‌ಗಳಿಗೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಟಿಟಿಡಿ ಹೇಳಿದೆ. ಹೀಗಾಗಿ ನಿರ್ಮಾಣ ಕಾಮಗಾರಿಗೆ ಟ್ಯಾಂಕರ್ ಮೂಲಕ ನೀರು ತರಬೇಕು. ಇದಕ್ಕಾಗಿ ವಿಜಿಲೆನ್ಸ್ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದು ಸ್ಪಷ್ಟಪಡಿಸಿದೆ.

ಸ್ಥಳೀಯರಿಗೆ, ಭಕ್ತರಿಗೆ ಟಿಟಿಡಿ ಮನವಿ
ಮುಂದಿನ ದಿನಗಳಲ್ಲಿ ತಿರುಮಲದಲ್ಲಿರುವ ಸ್ಥಳೀಯರು ಮತ್ತು ಯಾತ್ರಾರ್ಥಿಗಳ ನೀರಿನ ಅಗತ್ಯತೆಗಳನ್ನು ಪೂರೈಸಲು ತಿರುಮಲಕ್ಕೆ ಬರುವ ಪ್ರವಾಸಿಗರ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಟಿಟಿಡಿ ವಿವರಿಸಿದೆ. ಭಕ್ತರು ಮತ್ತು ಸ್ಥಳೀಯರು ನೀರನ್ನು ಅನಗತ್ಯವಾಗಿ ಪೋಲು ಮಾಡದೆ ಮಿತವಾಗಿ ಬಳಸುವಂತೆ ಟಿಟಿಡಿ ಮನವಿ ಮಾಡಿದೆ.
ತಿರುಮಲದಲ್ಲಿ ಈ ವರ್ಷ ಮಳೆಯ ಕೊರತೆಯಿಂದಾಗಿ ಬೆಟ್ಟದ ಮೇಲಿನ 5 ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಸಂಪನ್ಮೂಲ ಕಡಿಮೆಯಾಗಿದೆ ಎಂದು ಟಿಟಿಡಿ ತಿಳಿಸಿದೆ. ಇದಲ್ಲದೆ ವಾರ್ಷಿಕ ಬ್ರಹ್ಮೋತ್ಸವವು ಅಕ್ಟೋಬರ್ 4 ರಿಂದ 12 ರವರೆಗೆ ನಡೆಯಲಿದೆ. ಬ್ರಹ್ಮೋತ್ಸವದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ತಿರುಮಲಕ್ಕೆ ಆಗಮಿಸುತ್ತಾರೆ. ಅವರ ಹಿತದೃಷ್ಟಿಯಿಂದ ನೀರು ವ್ಯರ್ಥವಾಗುವುದನ್ನು ತಡೆಯಲು ಮತ್ತು ನೀರಿನ ಬಳಕೆಯನ್ನು ನಿಯಂತ್ರಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಲು ಟಿಟಿಡಿ ನಿರ್ಧರಿಸಿದೆ. ಇದಕ್ಕೆ ಭಕ್ತರು ಹಾಗೂ ಸ್ಥಳೀಯರು ಸಹಕರಿಸಬೇಕಾಗಿ ಕೋರಲಾಗಿದೆ.

ತಿರುಪತಿಯಲ್ಲಿ ಲಭ್ಯವಿರುವ ನೀರು
ತಿರುಮಲದಲ್ಲಿರುವ 5 ಪ್ರಮುಖ ಜಲಾಶಯಗಳಲ್ಲಿ ಸದ್ಯ ಲಭ್ಯವಿರುವ ನೀರು ಮುಂದಿನ 130 ದಿನಗಳಿಗೆ ಮಾತ್ರ ಸಾಕಾಗುತ್ತದೆ ಎಂದು ಟಿಟಿಡಿ ತಿಳಿಸಿದೆ. ತಿರುಮಲದಲ್ಲಿ ಪ್ರತಿನಿತ್ಯ 43 ಲಕ್ಷ ಗ್ಯಾಲನ್ ನೀರು ಬಳಕೆ ಆಗುತ್ತಿದ್ದು ಅದರಲ್ಲಿ 18 ಲಕ್ಷ ಗ್ಯಾಲನ್ ನೀರನ್ನು ತಿರುಮಲ ಅಣೆಕಟ್ಟುಗಳಿಂದ ಸಂಗ್ರಹಿಸಲಾಗುತ್ತದೆ ಮತ್ತು ಉಳಿದ ನೀರನ್ನು ತಿರುಪತಿಯ ಕಲ್ಯಾಣಿ ಅಣೆಕಟ್ಟಿನಿಂದ ಸಂಗ್ರಹಿಸಲಾಗುತ್ತದೆ.
ತಿರುಮಲದಲ್ಲಿರುವ ಕುಮಾರಧಾರ ಮತ್ತು ಕುಮಲಧಾರ ಅವಳಿ ಜಲಾಶಯಗಳ ಜೊತೆಗೆ ಗೋಗರ್ಭಂ, ಆಕಾಶ ಗಂಗಾ, ಪಾಪ ವಿನಾಶನಂ ಜಲಾಶಯಗಳ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯವು 14,304 ಲಕ್ಷ ಗ್ಯಾಲನ್‌ಗಳಾಗಿದ್ದು, ಪ್ರಸ್ತುತ ತಿರುಮಲದಲ್ಲಿ 5,800 ಲಕ್ಷ ಗ್ಯಾಲನ್‌ಗಳಷ್ಟು ನೀರು ಮಾತ್ರ ಲಭ್ಯವಿದೆ ಎಂದು ಟಿಟಿಡಿ ತಿಳಿಸಿದೆ.












Click it and Unblock the Notifications