Ram Mandir: ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಟೈಟ್ ಸೆಕ್ಯೂರಿಟಿ
ಅಯೋಧ್ಯೆ ಡಿಸೆಂಬರ್ 29: ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಲಿರುವುದರಿಂದ ನಗರಕ್ಕೆ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ. ಪ್ರಧಾನಿ ಮೋದಿ ಅವರು ಅಯೋಧ್ಯೆಗೆ ಭೇಟಿ ನೀಡಿ 15,000 ಕೋಟಿ ಮೌಲ್ಯದ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ಈ ಬಗ್ಗೆ ಮಾತನಾಡಿದ ಲಕ್ನೋ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿಯೂಷ್ ಮೊರ್ಡಿಯಾ ಅವರು, ನಗರದಲ್ಲಿ ಪ್ರಧಾನಿಯವರ ಭದ್ರತೆಗಾಗಿ ಉನ್ನತ ಮಟ್ಟದ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದಕ್ಕಾಗಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಸೇರಿದಂತೆ ಇತರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ವ್ಯವಸ್ಥೆಗಳ ಮೇಲ್ವಿಚಾರಣೆಗಾಗಿ ಇಂದು ಪ್ರಧಾನಿ ಮೋದಿಯವರ ರೋಡ್‌ಶೋ ಪೂರ್ವಾಭ್ಯಾಸ ಮಾಡಲಾಗುವುದು ಎಂದು ಅವರು ಹೇಳಿದರು.

ನಾವು ಡ್ರೋನ್‌ಗಳೊಂದಿಗೆ ಎಲ್ಲಾ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು, ಟ್ರಾಫಿಕ್ ಡೈವರ್ಶನ್ ಯೋಜನೆಯನ್ನು ಸಹ ಮಾಡಲಾಗಿದೆ. ಅಲ್ಲದೆ ಮೋದಿ ಅವರು ಆಗಮನದ ವೇಳೆ ಮೂವರು ಡಿಐಜಿ, 17 ಎಸ್ಪಿ, 38 ಹೆಚ್ಚುವರಿ ಎಸ್ಪಿ, 82 ಡೆಪ್ಯುಟಿ ಎಸ್ಪಿ, 90 ಇನ್ಸ್‌ಪೆಕ್ಟರ್, 325 ಸಬ್ ಇನ್ಸ್‌ಪೆಕ್ಟರ್, 35 ಮಹಿಳಾ ಸಬ್ ಇನ್‌ಸ್ಪೆಕ್ಟರ್, 2000 ಕಾನ್‌ಸ್ಟೆಬಲ್, 14 ಕಂಪನಿ ಪಿಎಸಿ, 6 ಕಂಪನಿ ಸಿಆರ್‌ಪಿಎಫ್‌ಗಳನ್ನು ಭದ್ರತೆಯ ಭಾಗವಾಗಿ ನಿಯೋಜಿಸಲಾಗುವುದು ಎಂದು ಎಡಿಜಿ ಮೊರ್ಡಿಯಾ ತಿಳಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ಭೇಟಿಗೂ ಮುನ್ನ ಭದ್ರತಾ ವ್ಯವಸ್ಥೆಗಳ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾರೆ. ಜೊತೆಗೆ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಮೂರು ದಿನಗಳ ಕಾಲ ಅಯೋಧ್ಯೆಯಲ್ಲಿ ಮೊಕ್ಕಾಂ ಹೂಡಿದ್ದು, ಪ್ರಧಾನಿ ಭೇಟಿಯ ಪೂರ್ವಭಾವಿ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿದ್ದಾರೆ.
ತಮ್ಮ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಅಯೋಧ್ಯೆ ಧಾಮ್ ಜಂಕ್ಷನ್ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಇದು ಮೂಲಸೌಕರ್ಯ ಮತ್ತು ಸಂಪರ್ಕವನ್ನು ಹೆಚ್ಚಿಸುವ ಸರ್ಕಾರದ ಬದ್ಧತೆಯ ಮಹತ್ವದ ಮೈಲಿಗಲ್ಲಾಗಿದೆ.
ಪ್ರಧಾನಮಂತ್ರಿಯವರು ಎರಡು ಅಮೃತ್ ಭಾರತ್ ರೈಲುಗಳನ್ನು ಉದ್ಘಾಟಿಸಲಿದ್ದಾರೆ. ಅವುಗಳು ದರ್ಭಾಂಗ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮತ್ತು ಮಾಲ್ಡಾ ಟೌನ್-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ (ಬೆಂಗಳೂರು) ಅಮೃತ್ ಭಾರತ್ ಎಕ್ಸ್‌ಪ್ರೆಸ್ ಆಗಿದೆ. ಹೆಚ್ಚುವರಿಯಾಗಿ ಆರು ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಇದು ರಾಷ್ಟ್ರದ ರೈಲು ಜಾಲಕ್ಕೆ ಕೊಡುಗೆ ನೀಡುತ್ತದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಅಯೋಧ್ಯೆ-ಆನಂದ ವಿಹಾರ್ ಟರ್ಮಿನಲ್, ಮಾತಾ ವೈಷ್ಣೋದೇವಿ ಕತ್ರಾ-ನವದೆಹಲಿ, ಅಮೃತಸರ-ದೆಹಲಿ, ಕೊಯಮತ್ತೂರು-ಬೆಂಗಳೂರು ಕ್ಯಾಂಟ್, ಮಂಗಳೂರು-ಮಡ್ಗಾಂವ್ ಮತ್ತು ಜಲ್ನಾ-ಮುಂಬೈ ಮಾರ್ಗಗಳನ್ನು ಒಳಗೊಂಡಿವೆ.
ಪ್ರಧಾನಿ ಮೋದಿಯವರ ಅಯೋಧ್ಯೆ ಭೇಟಿಯ ವೇಳೆ ಹೊಸದಾಗಿ ನಿರ್ಮಿಸಲಾದ ಅಯೋಧ್ಯೆ ವಿಮಾನ ನಿಲ್ದಾಣದ ಉದ್ಘಾಟನೆ ಮತ್ತು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿಲಿದ್ದಾರೆ. ಜೊತೆಗೆ ಪ್ರಧಾನಿಯವರು ರಾಜ್ಯದಲ್ಲಿ 15,700 ಕೋಟಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲಿದ್ದಾರೆ.
ಇವುಗಳಲ್ಲಿ ಅಯೋಧ್ಯೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಸುಮಾರು 11,100 ಕೋಟಿ ಮೌಲ್ಯದ ಯೋಜನೆಗಳು ಮತ್ತು ಉತ್ತರ ಪ್ರದೇಶದಾದ್ಯಂತ ಇತರ ಯೋಜನೆಗಳಿಗೆ ಸಂಬಂಧಿಸಿದ ಸುಮಾರು 4600 ಕೋಟಿ ಮೌಲ್ಯದ ಯೋಜನೆಗಳು ಸೇರಿವೆ.











Click it and Unblock the Notifications