Uttar Pradesh: ಕದಿಯಲು ಹೋಗಿ ನಿದ್ದೆಗೆ ಜಾರಿದ ಕಳ್ಳ: ಬೆಳಗ್ಗೆ ಎದ್ದಾಗ ಕಂಗಾಲು!
ಲಕ್ನೋ ಜೂನ್ 3: ಉತ್ತರಪ್ರದೇಶದ ರಾಜಧಾನಿ ಲಕ್ನೋದ ಇಂದಿರಾನಗರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕಳ್ಳತನ ಮಾಡಲು ಬಂದ ಕಳ್ಳನೊಬ್ಬ ನಿದ್ದೆಗೆ ಜಾರಿದ ಘಟನೆ ನಡೆದಿದೆ.
ಹೌದು... ಪಾನಮತ್ತ ಕಳ್ಳನೊಬ್ಬ ಕಳ್ಳತನ ಮಾಡುವ ಉದ್ದೇಶದಿಂದ ಬೀಗ ಹಾಕಿರುವ ಮನೆಗೆ ನುಗ್ಗಿ ಗೃಹೋಪಯೋಗಿ ವಸ್ತುಗಳನ್ನು ಸಂಗ್ರಹಿಸಿ ನಂತರ ಅಲ್ಲೇ ಮಲಗಿದ್ದಾನೆ. ಬೆಳಗ್ಗೆ ಎದ್ದಾಗ ಪೋಲೀಸರು ಎದುರು ನಿಂತಿರುವುದನ್ನು ಕಂಡು ಕಂಗಾಲಾಗಿದ್ದಾನೆ. ಕಪಿಲ್ ಕಶ್ಯಪ್ ಎಂಬ ಕಳ್ಳನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ವಾಸ್ತವವಾಗಿ ಈ ಘಟನೆ ಇಂದಿರಾ ನಗರ ಪ್ರದೇಶದಲ್ಲಿ ನಡೆದಿದೆ. ಶನಿವಾರ ರಾತ್ರಿ ಡಾ.ಸುನೀಲ್ ಪಾಂಡೆ ಅವರ ಮನೆಗೆ ಕಳ್ಳ ನುಗ್ಗಿದ್ದಾನೆ. ಈ ಮನೆಯಲ್ಲಿ ಡಾ.ಪಾಂಡೆ ಇರಲಿಲ್ಲ. ಇದರಿಂದಾಗಿ ಮನೆಗೆ ಬೀಗ ಹಾಕಲಾಗಿತ್ತು. ಶನಿವಾರ ಮಧ್ಯರಾತ್ರಿ ಕಳ್ಳ ಕಪಿಲ್ ಕಶ್ಯಪ್ ಕುಡಿದ ಅಮಲಿನಲ್ಲಿ ಬೀಗ ಮುರಿದು ಮನೆಗೆ ನುಗ್ಗಿದ್ದಾನೆ.
ಕಪಿಲ್ ಮನೆಯಲ್ಲಿಟ್ಟಿದ್ದ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿ ನಂತರ ಅಲ್ಲೇ ಮಲಗಿಬಿಟ್ಟಿದ್ದಾನೆ. ಬೆಳಗ್ಗೆ ಬೀಗ ಒಡೆದಿರುವುದನ್ನು ಕಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದಾಗ ಕಳ್ಳನಿಗೆ ಎಚ್ಚರವಾಗಿದೆ. ಆ ಕ್ಷಣದಲ್ಲಿಯೇ ಆತನನ್ನು ಬಂಧಿಸಲಾಗಿದೆ.
ಈಗಾಗಲೇ ಆರು ಕಳ್ಳತನ ಪ್ರಕರಣಗಳನ್ನು ಹೊಂದಿದ ಕಳ್ಳ
ಈ ಬಗ್ಗೆ ಮಾಹಿತಿ ಹಂಚಿಕೊಂಡ ಎಸಿಪಿ ಘಾಜಿಪುರ ವಿಕಾಸ್ ಜೈಸ್ವಾಲ್, ಆರೋಪಿ ಕಪಿಲ್ ವಿರುದ್ಧ ಈಗಾಗಲೇ ಆರು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದಿರಾನಗರ ಬಿ ಬ್ಲಾಕ್‌ನಲ್ಲಿರುವ ಡಾ.ಸುನೀಲ್ ಪಾಂಡೆ ಎಂಬುವವರ ಬೀಗ ಹಾಕಿರುವ ಮನೆಗೆ ಕಳ್ಳನೊಬ್ಬ ಕಳ್ಳತನ ಮಾಡುವ ಉದ್ದೇಶದಿಂದ ನುಗ್ಗಿದ್ದನು.
ಕಳ್ಳತನ ಮಾಡಿದ ನಂತರ ಕಳ್ಳ ಅಲ್ಲೇ ಮಲಗಿದ್ದಾನೆ. ಭಾನುವಾರ ಬೆಳಗ್ಗೆ ನೆರೆಹೊರೆಯವರು ನೋಡಿದಾಗ ಮನೆಯ ಬಾಗಿಲು ತೆರೆದಿದ್ದು, ಬೀಗ ಮುರಿದಿರುವುದು ಕಂಡು ಬಂದಿದೆ. ಅವರು ಒಳಗೆ ಹೋದಾಗ ಒಬ್ಬ ಹುಡುಗ ಮಲಗಿದ್ದನ್ನು ನೋಡಿದ್ದಾರೆ. ಬಳಿಕ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಕಳ್ಳ ಕಪಿಲ್‌ನನ್ನು ಬಂಧಿಸಿದ್ದಾರೆ.
ಕಳ್ಳತನ ಮಾಡುವಾಗ ಪಾನಮತ್ತನಾಗಿದ್ದ ಕಳ್ಳ
ಎಸಿಪಿ ಪ್ರಕಾರ, ಸಮದಿಪುರ ಗ್ರಾಮದ ನಿವಾಸಿ ಕಪಿಲ್ ಕಶ್ಯಪ್ ಕಳ್ಳತನದ ಉದ್ದೇಶದಿಂದ ಪ್ರವೇಶಿಸಿದಾಗ ಕುಡಿದ ಅಮಲಿನಲ್ಲಿದ್ದ. ಕಳ್ಳತನ ಮಾಡಿ ಸ್ವಲ್ಪ ಹೊತ್ತು ನಿರಾಳವಾಗಿ ನಿದ್ದೆಗೆ ಜಾರಿದ್ದನು. ಮನೆಯ ವಸ್ತುಗಳನ್ನು ಕದಿಯಲು ಕಪಿಲ್ ಮನೆಯನ್ನು ಚೆಲ್ಲಾಪಿಲ್ಲಿ ಮಾಡಿದ್ದನು. ಕಳ್ಳತನದ ನಂತರ ಕಳ್ಳ ಮನೆಯಲ್ಲಿ ಮಲಗಿರುವ ಚಿತ್ರವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.












Click it and Unblock the Notifications