
'ಬೂಸ್ಟರ್ ಲಸಿಕೆ ಆರಂಭಿಸುವ ಸಮಯ ಇದು': ಪಿ ಚಿದಂಬರಂ
ನವದೆಹಲಿ, ಡಿಸೆಂಬರ್ 23: "ಲಸಿಕೆಗಳು ಮೂರು ತಿಂಗಳುಗಳಿಗಿಂತ ಅಧಿಕ ಕಾಲ ಪರಿಣಾಮವನ್ನು ಹೊಂದಿರಲಾರದು ಎಂದು ಅಧ್ಯಯನಗಳೇ ಹೇಳಿದೆ. ಹೀಗಿರುವಾಗ ಇದು ಬೂಸ್ಟರ್ ಶಾಟ್ ನೀಡಿಕೆ ಆರಂಭ ಮಾಡಲು ಸಮಯ," ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ಸರಣಿ ಟ್ವೀಟ್ ಅನ್ನು ಮಾಡಿದ್ದಾರೆ. "ಬೂಸ್ಟರ್ ಶಾಟ್‌ಗಳು ಕಡ್ಡಾಯ ಎಂಬುವುದನ್ನು ಹಲವಾರು ಸಂಶೋಧನೆಗಳು ಹಾಗೂ ವರದಿಗಳು ಸಾಬೀತು ಮಾಡುತ್ತದೆ. ಕೋವಿಶೀಲ್ಡ್ ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಲ್ಯಾನ್ಸೆಟ್ ಸಂಶೋಧನೆ ಮಾಡಲಾಗಿದೆ. ಈ ಸಂಶೋಧನೆಯು ಕೋವಿಶೀಲ್ಡ್ ಮೂರು ತಿಂಗಳಿಗಿಂತ ಅಧಿಕ ಕಾಲ ಪರಿಣಾಮವನ್ನು ಹೊಂದಿರುವುದಿಲ್ಲ ಎಂದು ಹೇಳಿದೆ. ಈ ಮೂಲಕ ಎಚ್ಚರಿಕೆಯ ಕರೆಗಂಟೆಯನ್ನು ನೀಡಿದೆ. ಈಗ ಬೂಸ್ಟರ್ ಶಾಟ್‌ಗಳನ್ನು ನೀಡಲು ಆರಂಭ ಮಾಡಬೇಕಾದ ಸಮಯ," ಎಂದು ಮೊದಲ ಟ್ವೀಟ್‌ನಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ತಿಳಿಸಿದ್ದಾರೆ.
ಓಮಿಕ್ರಾನ್ ಆತಂಕ: ಬೂಸ್ಟರ್ ಶಾಟ್ ಬಗ್ಗೆ ಶೀಘ್ರ ನಿರ್ಧಾರ ಎಂದ ನೀತಿ ಆಯೋಗ
ಇನ್ನು ಇದೇ ಸಂದರ್ಭದಲ್ಲಿ ಬೇರೆ ಕೊರೊನಾ ಲಸಿಕೆಗಳನ್ನು ಕೂಡಾ ಬಳಸಬೇಕೆಂಬುವುದನ್ನು ಪಿ ಚಿದಂಬರಂ ಒತ್ತಿ ಹೇಳಿದ್ದಾರೆ. "ಫೈಜರ್ ಹಾಗೂ ಮಾಡರ್ನಾದಂತಹ ಅನುಮೋದಿತ ಕೋವಿಡ್ ಲಸಿಕೆಗಳನ್ನು ಬಳಕೆ ಮಾಡಲು ಅವಕಾಶ ನೀಡಲು ಕೂಡಾ ಇದು ಸಮಯವಾಗಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ ತನ್ನ ಉತ್ಸಾಹದ ಮೂಲಕ ಸರ್ಕಾರವು ಕೋವಿಡ್ ಲಸಿಕೆ ಹಾಕಿದ ಲಕ್ಷಾಂತರ ಮಂದಿಗೆ ಮರು ಸೋಂಕು ಬರುವಂತೆ ಮಾಡುತ್ತಿದೆ," ಎಂದು ಆರೋಪವನ್ನು ಪಿ ಚಿದಂಬರಂ ಮಾಡಿದ್ದಾರೆ.
"ಮೂರನೇ ಕೊರೊನಾ ವೈರಸ್ ಅಲೆಯು ಅಪ್ಪಳಿಸಿದರೆ, ಲಸಿಕೆ ಪಡೆದ ಭಾರತೀಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ತಗುಲಿದರೆ. ಸರ್ಕಾರವೇ ಇದನ್ನು ಎದುರಿಸಬೇಕಾಗುತ್ತದೆ ಹಾಗೂ ಸರ್ಕಾರವನ್ನೇ ನಾವು ದೂರಬೇಕಾಗುತ್ತದೆ," ಎಂದು ಕೂಡಾ ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಬೂಸ್ಟರ್ ಶಾಟ್ ಯಾವಾಗ ನೀಡುವುದು: ರಾಹುಲ್ ಗಾಂಧಿ
ಇನ್ನು ಕಾಂಗ್ರೆಸ್ ನಾಯಕ, ವಯನಾಡು ಸಂಸದ ರಾಹುಲ್ ಗಾಂಧಿ ಕೂಡಾ ಬೂಸ್ಟರ್ ಶಾಟ್ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. "ಕೊರೊನಾ ವೈರಸ್‌ನ ಮೂರನೇ ಅಲೆ ಬಾರದಂತೆ ತಡೆಯಲು ದೇಶದ ಜನತೆಗೆ ಬೂಸ್ಟರ್ ಡೋಸ್‌ನ ಅಗತ್ಯವಿದೆ, ಸರ್ಕಾರ ನೀಡುವುದು ಯಾವಾಗ," ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಕೊರೊನಾ ವೈರಸ್ ಮೂರನೇ ಅಲೆ ತಡೆಗಟ್ಟುವ ಹಿನ್ನಲೆಯಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಶೇ.60 ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡಬೇಕಿತ್ತು, ಆದರೆ ಕೇವಲ ಶೇ. 42 ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಪ್ರತಿದಿನ 55.3 ಮಿಲಿಯನ್ ಡೋಸ್ ಲಸಿಕೆ ಕೊರತೆಯಿದೆ. ದೇಶದ ಬಹಸಂಖ್ಯಾತ ಜನರಿಗೆ ಇನ್ನೂ ಲಸಿಕೆ ನೀಡಿಲ್ಲ, ಹೀಗಿರುವಾಗ ಭಾರತ ಸರ್ಕಾರ ಬೂಸ್ಟರ್ ಡೋಸ್ ಯಾವಾಗ ನೀಡಲಿದೆ ಎಂದು ಪ್ರಶ್ನಿಸಿದ್ದಾರೆ. ಮೂರನೇ ಅಲೆ ವಿರುದ್ಧ ಹೋರಾಡಲು ಡಿಸೆಂಬರ್ 2021ರ ವೇಳೆಗೆ ದೇಶದ ಶೇ. 60 ರಷ್ಚು ಜನರಿಗೆ ಲಸಿಕೆ ನೀಡಬೇಕಿತ್ತು, ಆದರೆ ಆಗಲಿಲ್ಲ, ಪ್ರತಿದಿನ ಲಸಿಕೆ ಕೊರತೆ ಎದುರಾಗುತ್ತಿದೆ ಎಂದು ದೂರಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ ಲಸಿಕೆ ನೀಡುವ ವೇಗವನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ.
ದೇಶದ ಜನತೆಗೆ ಬೂಸ್ಟರ್ ಡೋಸ್ ಸಿಗೋದು ಯಾವಾಗ?: ರಾಹುಲ್
ಬೂಸ್ಟರ್ ಶಾಟ್ ಬಗ್ಗೆ ಶೀಘ್ರ ನಿರ್ಧಾರ ಎಂದ ನೀತಿ ಆಯೋಗ
ಈ ನಡುವೆ ಇತ್ತೀಚೆಗೆ ನೀತಿ ಆಯೋಗವು ಬೂಸ್ಟರ್ ಶಾಟ್ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಭಾರತದಲ್ಲಿ ಲಭ್ಯವಿರುವ ಕೋವಿಡ್ ಲಸಿಕೆಗಳು ಕೊರೊನಾ ವೈರಸ್ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿವೆ ಮತ್ತು ಬೂಸ್ಟರ್ ಶಾಟ್‌ಗಳ ಕುರಿತು ವಿಜ್ಞಾನ ಆಧಾರಿತ ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಳ್ಳಲಾಗುವುದು ಎಂದು ನೀತಿ ಆಯೋಗ ಸದಸ್ಯ (ಆರೋಗ್ಯ) ಡಾ ವಿ ಕೆ ಪೌಲ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಓಮಿಕ್ರಾನ್ ಕೊರೊನಾವೈರಸ್ ರೂಪಾಂತರದ ಬೆದರಿಕೆ ಪ್ರತಿದಿನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪೂರ್ಣ ಲಸಿಕೆ ಪಡೆಯುವುದು, ಮಾಸ್ಕ್ ಧರಿಸುವುದು ಹಾಗೂ ದೊಡ್ಡ ಸಭೆಗಳನ್ನು ಸೇರುವುದನ್ನು ತಪ್ಪಿಸುವುದು ಬಹಳ ಮುಖ್ಯ ಎಂದು ತಿಳಿಸಿದ್ದಾರೆ. (ಒನ್‌ಇಂಡಿಯಾ)
There is enough research and scholarly writing to conclude that booster shots are an imperative
— P. Chidambaram (@PChidambaram_IN) December 22, 2021
The Lancet study on the efficacy of COVISHIELD — not more than three months — should ring the alarm bells
The time to allow booster shots is NOW