ಪೊಲೀಸರಿಂದ ಐದು ರೈಫಲ್ ಕಸಿದೊಯ್ದ ಉಗ್ರಗಾಮಿಗಳು
ಜಮ್ಮು-ಕಾಶ್ಮೀರ, ಅಕ್ಟೋಬರ್ 17: ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಪೊಲೀಸರಿಂದ ಐದು ರೈಫಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಅನಂತ್ ನಾಗ್ ಜಿಲ್ಲೆಯ ಟಿವಿ ಟವರ್ ನ ಪಹರೆಯಲ್ಲಿದ್ದ ಪೊಲೀಸರಿಂದ ಭಾನುವಾರ ರಾತ್ರಿ ರೈಫಲ್ ಕಸಿದಿದ್ದು, ಆ ನಂತರ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ.
ಈ ಕೃತ್ಯದಲ್ಲಿ ಎಷ್ಟು ಉಗ್ರರು ಪಾಲ್ಗೊಂಡಿದ್ದರು ಎಂಬುದು ತಿಳಿದುಬಂದಿಲ್ಲ. ಆದರೆ ಇದು ಪೂರ್ವನಿಯೋಜಿತ ಕೃತ್ಯದಂತಿದೆ. ಇದರಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಈ ತಿಂಗಳಲ್ಲಿ ನಡೆಯುತ್ತಿರುವ ಎರಡನೇ ಕೃತ್ಯ ಇದಾಗಿದ್ದು, ಅಕ್ಟೋಬರ್ 3ರಂದು ಕುಲ್ಗಾಂನಲ್ಲಿ ಉಗ್ರಗಾಮಿಗಳು ಪೊಲೀಸರೊಬ್ಬರಿಂದ ರೈಫಲ್ ಕಸಿದುಕೊಂಡು ಹೋಗಿದ್ದರು.[ಉಗ್ರರ ದಾಳಿಯಲ್ಲಿ ಯೋಧ ಸಾವು, ಎಂಟು ಮಂದಿಗೆ ಗಾಯ]

ಪೊಲೀಸರಿಂದ 250 ಸುತ್ತಿನ ಗುಂಡು, ಹತ್ತು ಮ್ಯಾಗಜೈನ್ ಹಾಗೂ ಐದು ರೈಫಲ್ ಅನ್ನು ಉಗ್ರರು ಹೊತ್ತೊಯ್ದಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸೆಪ್ಟೆಂಬರ್ 8ರಂದು ನಡೆದ ಘಟನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಕಸಿದು ಒಯ್ದಿದ್ದರು. ಜುಲೈ 9ರಂದು ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದೀನ್ ನ ಉಗ್ರಗಾಮಿ ಬುಹ್ರಾನ್ ವನಿ ಎನ್ ಕೌಂಟರ್ ಆಗಿತ್ತು. ಆ ನಂತರ ಇಂಥ ಹಲವು ಕೃತ್ಯಗಳು ವರದಿಯಾಗಿವೆ.[ಉಗ್ರರ ಭೀತಿ: 4 ರಾಜ್ಯಗಳ 22 ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್!]
ಉಗ್ರಗಾಮಿ ಸಂಘಟನೆ ಶಿಬಿರಗಳನ್ನು ಸೇರುವವರ ಸಂಖ್ಯೆ ಹೆಚ್ಚಾಗಿದೆ. ಅವರಿಗೆ ಶಸ್ತ್ರಾಸ್ತ್ರಗಳ ಕೊರತೆ ಅಗಿರುವುದರಿಂದ ಭದ್ರತಾ ಪಡೆಯವರಿಂದ ಶಸ್ತಾಸ್ತ್ರ ಕಸಿಯುವ ಇಂಥ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications