ತಪ್ಪಿತು ಮತ್ತೊಂದು ದುರಂತ: ವಿದ್ಯಾರ್ಥಿಗಳು ಬಚಾವ್
ಬೊಕಾರೊ (ಜಾರ್ಖಂಡ್), ಜೂನ್ 21: ಹಿಮಾಚಲ ಪ್ರದೇಶದ ಮನಾಲಿಯ ನದಿ ತೀರದರಲ್ಲಿ ಫೋಟೋ ಕ್ಲಿಕ್ಕಿಸಲು ಹೋಗಿ, ದಿಢೀರನೆ ನೀರು ನುಗ್ಗಿ 24 ವಿದ್ಯಾರ್ಥಿಗಳನ್ನು ಆಪೋಶನ ತೆಗೆದುಕೊಂಡಿರುವ ದುರಂತದ ತೇವ ಇನ್ನೂ ಆರಿಲ್ಲ. ಆಗಲೇ ಅಂತಹುದೇ ಮತ್ತೊಂದು ಸಂಭವಿಸುವುದರಲ್ಲಿತ್ತು. ಆದರೆ 10 ಮಂದಿ ವಿದ್ಯಾರ್ಥಿಗಳ ತಂಡವನ್ನು ಸ್ವಲ್ಪದರದಲ್ಲಿ ಬಚಾವಾಗಿದ್ದಾರೆ.
ಬೊಕಾರೊದ ಹೆಸರಾಂತ ದಾಮೋದರ ನದಿಯ ತೇನುಘಾಟ್ ಅಣೆಕಟ್ಟೆಯ ಹಿನ್ನೀರಿನಲ್ಲಿ ಶುಕ್ರವಾರ ಮಧ್ಯಾಹ್ನ ಮೀನು ಹಿಡಿಯಲೆಂದು 10 ವಿದ್ಯಾರ್ಥಿಗಳು ಹೋಗಿದ್ದರು. ಆದರೆ ಇದನ್ನು ಅರಿಯದ ಅಣೆಕಟ್ಟೆಯ ಅಧಿಕಾರಿಗಳು ದಿಢೀರನೆ ನಾಲೆಯ ತೂಬುಗಳನ್ನು ತೆರೆದು, ಅಪಾರ ನೀರನ್ನು ಹರಿಯಬಿಟ್ಟಿದ್ದಾರೆ.

ಆಗ ನೀರು ಭಾರೀ ಪ್ರಮಾಣದಲ್ಲಿ ಹೊರ ಹರಿದಿದೆ. ನಾಲೆಯಲ್ಲಿ ನೀರು ನುಗ್ಗಿ ಬರುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿಗಳು ಸಮಯಪ್ರಜ್ಞೆ ತೋರಿ ಕೈಗೆಟುಕುವಷ್ಟು ಮೇಲ್ಭಾಗದಲ್ಲಿದ್ದ ಸಿಮೆಂಟ್ ಕಟ್ಟೆಯನ್ನು (ಚಂದ್ರಾಪುರ ಉಷ್ಣ ವಿದ್ಯುತ್ ಸ್ಥಾವರದ ಸಿಮೆಂಟ್ ಕಟ್ಟೆ) ಹತ್ತಿ ಸುರಕ್ಷಿತವಾಗಿ ನಿಂತಿದ್ದಾರೆ. (ಪ್ರವಾಸಕ್ಕೆ ಹೋದ 24 ವಿದ್ಯಾರ್ಥಿಗಳು ಪ್ರವಾಹಕ್ಕೆ ಬಲಿ)
ಮುಂದೆ ... ಸುಮಾರು 8 ಗಂಟೆ ಕಾಲ ಮೃತ್ಯುರೂಪಿ ನೀರನ್ನು ನೋಡುತ್ತಾ ಪ್ರಾಣಭಯದಿಂದ ವಿದ್ಯಾರ್ಥಿಗಳು ಒಂದೇ ಸಮನೆ ಜೋರಾಗಿ ಕಿರುಚತೊಡಗಿದ್ದಾರೆ. ಬಾಲಕರ ಆರ್ತನಾದ ಕೇಳಿದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಅವರನ್ನು ರಕ್ಷಿಸಿದ್ದಾರೆ. ಈ ಮಧ್ಯೆ, ರಾಂಚಿಯಲ್ಲಿದ್ದ ಸೇನಾಪಡೆಗೂ ರಕ್ಷಣೆ ಕೋರಿ ಸಂದೇಶ ಕಳುಹಿಸಲಾಗಿತ್ತು. ಹೆಲಿಕಾಪ್ಟರಿನೊಂದಿಗೆ ಸೈನಿಕರು ಸ್ಥಳಕ್ಕೆ ಬರುಷ್ಟರಲ್ಲಿ ಸ್ಥಳೀಯರ ನೆರವಿನೊಂದಿಗೆ ಅಣೆಕಟ್ಟೆಯ ಅಧಿಕಾರಿಗಳು ನೀರಿನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಪಾರುಮಾಡಿದ್ದಾರೆ.
ದಾಮೋದರ ನದಿಯ ತೇನುಘಾಟ್ ಅಣೆಕಟ್ಟೆಯ ಹಿನ್ನೀರು ಪ್ರದೇಶ ಪ್ರವಾಸಿತಾಣವಾಗಿದ್ದು, ದಿನನಿತ್ಯ ನೂರಾರು ಮಂದಿ ಇಲ್ಲಿಗೆ ಭೇಟಿ ಕೊಡುತ್ತಾರೆ. ಆದರೂ ಇಲ್ಲಿನ ಅಣೆಕಟ್ಟೆಯ ಅಧಿಕಾರಿಗಳು ಮುಂಜಾಗ್ರತೆ ವಹಿಸಿದೆ ಮನಾಲಿ ಅಣೆಕಟ್ಟೆಯ ಅಧಿಕಾರಿಗಳಂತೆ ಬೇಜಾವಾಬ್ದಾರಿ ತೋರಿ, ಅಚಾತುರ್ಯ ಮೆರೆದಿದ್ದಾರೆ. ಆದರೆ ಬಾಲಕರು ಸ್ವಲ್ಪದರಲ್ಲಿ ಪಾರಾಗಿ, ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.



Click it and Unblock the Notifications
