ಅಯೋಧ್ಯೆಗೆ ಬರುತ್ತಿವೆ ಟನ್ ಗಟ್ಟಲೆ ಕೆತ್ತನೆ ಕಲ್ಲು? ಏಕೆ?
ಅಯೋಧ್ಯೆಗೆ ರಾಜಸ್ಥಾನದಿಂದ ದೇವಾಲಯ ಕಟ್ಟುವ ಕಲ್ಲುಗಳ ರವಾನೆ. ಟನ್ ಗಟ್ಟಲೆ ಬಂದು ಬೀಳುತ್ತಿರುವ ಕಲ್ಲುಗಳು. ಅಯೋಧ್ಯೆಯಲ್ಲಿರುವ ಆರೆಸ್ಸೆಸ್ ಗೋದಾಮಿನಲ್ಲಿ ಸಂಗ್ರಹವಾಗುತ್ತಿರುವ ಕಲ್ಲುಗಳು.
ಲಖ್ನೋ, ಜುಲೈ 7: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಆರ್ ಎಸ್ ಎಸ್ ಕಚೇರಿಯ ಬಳಿಯ ಗೋದಾಮಿಗೆ ರಾಜಸ್ಥಾನದಿಂದ ದೇಗುಲದ ಕೆತ್ತನೆ ಕಲ್ಲುಗಳ ಸ್ಟಾಕ್ ಬಂದಿಳಿಯುತ್ತಿರುವುದು ಸ್ಥಳೀಯರಲ್ಲಿ ಶೀಘ್ರವೇ ರಾಮಮಂದಿರ ನಿರ್ಮಾಣ ಆಗುವ ನಿರೀಕ್ಷೆ ಹುಟ್ಟಿಸಿದೆ.
ಸುಮಾರು 200 ಟನ್‌ನಷ್ಟು ಕಲ್ಲುಗಳು ಬಂದಿವೆ. ಅವನ್ನು ಕೆತ್ತನೆ ಕಾರ್ಯಾಗಾರದ ಬಳಿ ಇಳಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ತಿಳಿಸಿವೆ.

ಸುಮಾರು 15 ಟ್ರಕ್ ಗಳಲ್ಲಿ ಕಲ್ಲುಗಳು ಬಂದು ಜಮಾವಣೆಗೊಂಡಿವೆ ಎಂದು ಹೇಳಲಾಗಿದೆ. ಶೀಘ್ರದಲ್ಲೇ ಮತ್ತಷ್ಟು ಟನ್ ಗಳು ಅಯೋಧ್ಯೆಗೆ ಬರಲಿವೆ ಎಂದು ಹೆಸರನ್ನೇಳಲು ಇಚ್ಛಿಸದ ವಿಎಚ್ ಪಿ ನಾಯಕರೊಬ್ಬರು ತಿಳಿಸಿದ್ದಾರೆ. ಅಲ್ಲದೆ, ಗೋದಾಮಿನಲ್ಲಿ ಕಲ್ಲುಗಳ ಕೆತ್ತನೆ ಕಾರ್ಯ ಕೆಲಸವೂ ನಡೆಯುತ್ತಿದೆ ಎಂದೂ ಹೇಳಲಾಗಿದೆ.
ಆದರೆ, ಹೀಗೆ ಟನ್ ಗಟ್ಟಲೆ ಕಲ್ಲುಗಳು ಬಂದು ಬೀಳುತ್ತಿರುವುದರ ಬಗ್ಗೆ ಕೆಲ ಮುಸ್ಲಿಂ ಸಂಘಟನೆಗಳ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರಶ್ನಿಸಿದ ಮಾಧ್ಯಮಗಳಿಗೆ ಉತ್ತರಿಸಿದ ವಿಎಚ್ ಪಿ ವಕ್ತಾರ ಶರದ್ ಶರ್ಮಾ, ''1990ರಿಂದಲೂ ಇಲ್ಲಿಗೆ ಕಲ್ಲುಗಳನ್ನು ತರಲಾಗುತ್ತಿದೆ. ಕೆಲಸ ಮುಂದೆಯೂ ನಡೆಯಲಿದೆ. ಕಲ್ಲುಗಳನ್ನು ತರಲು ಯಾವುದೇ ನಿರ್ಬಂಧವಿಲ್ಲ'' ಎಂದು ಹೇಳಿದ್ದಾರೆ.












Click it and Unblock the Notifications