Krishna Passed Away : ತೆಲುಗು ನಟ ಮಹೇಶ್ ಬಾಬು ತಂದೆ ನಟ ಕೃಷ್ಣ ನಿಧನ
ಹೈದರಾಬಾದ್, ನವೆಂಬರ್ 15: ಅನಾರೋಗ್ಯದಿಂದ ಬಳಲುತ್ತಿದ್ದ ಮಹೇಶ್ ಬಾಬು ಅವರ ತಂದೆ ಹಾಗೂ ತೆಲುಗು ಚಿತ್ರರಂಗದ 'ಸೂಪರ್ ಸ್ಟಾರ್' ನಟ ಕೃಷ್ಣ ನಿಧನರಾಗಿದ್ದಾರೆ. ಮಂಗಳವಾರ ಮುಂಜಾನೆ 4 ಗಂಟೆಗೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅವರಿಗೆ 80 ವರ್ಷ ವಯಸ್ಸಾಗಿತ್ತು. ಸೋಮವಾರ ಅವರನ್ನು ಮುಂಜಾನೆ 1.15ಕ್ಕೆ ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ಕರೆತರಲಾಯಿತು. ತಕ್ಷಣವೇ ಅವರಿಗೆ ಸಿಪಿಆರ್ (ಕಾರ್ಡಿಯೋಪಲ್ಮನರಿ ರೆಸಸಿಟೇಶನ್) ನಡೆಸಲಾಯಿತು. ಅಲ್ಲದೆ ಐಸಿಯುಗೂ ದಾಖಲು ಮಾಡಲಾಯಿತು. ವೆಂಟಿಲೇಟರ್‌ನಲ್ಲಿ ಅವರಿಗೆ ಕೃತಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆ ವೇಳೆಗಾಗಲೇ ಅವರ ಆರೋಗ್ಯ ಸ್ಥಿತಿ ಹದಗೆಡುತ್ತ ಬಂದಿತು. ಆದರೆ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ವೈದ್ಯರು ತಿಳಿಸಿದರು.
ಕೃಷ್ಣ ಅವರ ಮೂಲ ಹೆಸರು ಘಟ್ಟಮನೇನಿ ಶಿವ ರಾಮ ಕೃಷ್ಣ ಮೂರ್ತಿ ಎಂಬುದಾಗಿತ್ತು. ಇವರು ಸುಮಾರು 350 ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಕಾಲದ ಅಗ್ರಗಣ್ಯ ನಟರಲ್ಲಿ ಇವರು ಒಬ್ಬರು. ಕೃಷ್ಣ ಅವರು ನಟ ಮಾತ್ರವಲ್ಲದೆ ಒಬ್ಬ ಯಶಸ್ವಿ ನಿರ್ದೇಶಕ ಹಾಗೂ ನಿರ್ಮಾಪಕ ಕೂಡ ಆಗಿದ್ದರು. ಅವರ ಚಿತ್ರರಂಗದ ಸೇವೆಯನ್ನು ಗುರುತಿಸಿ ಅವರಿಗೆ 2009ರಲ್ಲಿ ಪದ್ಮಭೂಷಣ ಪ್ರಶಸ್ತಿ ಕೂಡ ನೀಡಿ ಗೌರವಿಸಲಾಗಿತ್ತು.

ನಟ ಕೃಷ್ಣ ತೆಲುಗು ಸ್ಟಾರ್ ನಟ ಮಹೇಶ್ ಬಾಬು ಅವರ ತಂದೆ ಹಾಗೂ ಟಿಡಿಪಿ ನಾಯಕ ಜಯ್ ಗಲ್ಲಾ ಅವರ ಮಾವ ಕೂಡ ಆಗಿದ್ದಾರೆ. 1980ರ ದಶಕದಲ್ಲಿ ಅವರು ಕಾಂಗ್ರೆಸ್ ಪಕ್ಷ ಸೇರಿ ಸಂಸದರು ಆಗಿದ್ದರು. ಆದರೆ ಕೃಷ್ಣ ಅವರು ತಮಿಳುನಾಡಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯಾದ ಬಳಿಕ ರಾಜಕೀಯವನ್ನು ತೊರೆದಿದ್ದರು.

ಕೃಷ್ಣ ಅವರ ಪತ್ನಿ ಮತ್ತು ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಕೂಡ ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ನಿಧರರಾಗಿದ್ದರು. ಅವರ ಹಿರಿಯ ಮಗ ಮಹೇಶ್ ಬಾಬು ಅವರ ಅಣ್ಣ ರಮೇಶ್ ಬಾಬು ಜನವರಿಯಲ್ಲಿ ಮರಣ ಹೊಂದಿದ್ದರು. ಅವರ ಎರಡನೇ ಪತ್ನಿಯಾಗಿದ್ದ ನಟಿ ವಿಜಯ ನಿರ್ಮಲಾ ಅವರು 2019ರಲ್ಲಿ ನಿಧನರಾಗಿದ್ದರು.












Click it and Unblock the Notifications