ಇವರೆಂತ ಟೀಚರ್? 6 ವರ್ಷದ ಬಾಲಕನನ್ನು ಶಾಲೆಯ ಮೇಲ್ಛಾವಣಿಯಿಂದ ಎಸೆದ ಶಿಕ್ಷಕ!
ಪಾಟ್ನಾ ಮೇ 27: ಹೋಮ್‌ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕೆ 6 ವರ್ಷದ ಬಾಲಕನನ್ನು ಶಾಲೆಯ ಮೇಲ್ಛಾವಣಿಯಿಂದ ಎಸೆದ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಆರು ವರ್ಷದ ಬಾಲಕ ತನ್ನ ಹೋಮ್‌ವರ್ಕ್ ಅನ್ನು ಪೂರ್ಣಗೊಳಿಸದಿದ್ದಕ್ಕಾಗಿ ವಿಚಿತ್ರ ಶಿಕ್ಷೆಗೆ ಒಳಪಟ್ಟಿದ್ದಾನೆ. ಖಾಸಗಿ ಶಾಲೆಯ ಮೇಲ್ಛಾವಣಿಯಿಂದ ಬಾಲಕನನ್ನು ಶಿಕ್ಷಕ ಎಸೆದು ದರ್ಪ ತೋರಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಜಿಲ್ಲೆಯ ಕಲ್ಯಾಣಪುರದ ಬಜಾರ್ ಪ್ರದೇಶದ ಪ್ರಾಥಮಿಕ ಶಾಲೆಯೊಂದರಲ್ಲಿ ಆರು ವರ್ಷದ ವಿದ್ಯಾರ್ಥಿಯೊಬ್ಬ ಗುರುವಾರ ಶಿಕ್ಷಕರು ಕೊಟ್ಟ ಹೋಮ್‌ವರ್ಕ್ ಅನ್ನು ಪೂರ್ಣಗೊಳಿಸಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಶಿಕ್ಷಕರು ವಿದ್ಯಾರ್ಥಿಗೆ ಥಳಿಸಿ, ಮೇಲ್ಛಾವಣಿಗೆ ಕರೆದೊಯ್ದು ಕೆಳಗೆ ಎಸೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇನ್ನೂ ಮಗುವಿನ ಚಿಕ್ಕಪ್ಪ ಶಿಕ್ಷಕ ತಮ್ಮ ಮಗುವಿಗೆ ತೀವ್ರ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. "ಅವನ ದೇಹದ ಮೇಲೆ ಕೋಲಿನ ಗುರುತುಗಳಿವೆ. ಅವನು ಏನನ್ನು ಅನುಭವಿಸಿದನೆಂಬುದನ್ನು ನಾವು ಕಣ್ಣಾರೆ ನೋಡಬಹುದು" ಎಂದು ಚಿಕ್ಕಪ್ಪ ಹೇಳಿದ್ದಾರೆ.
ಸದ್ಯ ಮಗು ಚಿಕಿತ್ಸೆ ಪಡೆಯುತ್ತಿದೆ. ಓರ್ವ ಶಿಕ್ಷಕನನ್ನು ಬಂಧಿಸಲಾಗಿದ್ದು, ಮತ್ತೊಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇಶಪ್ರೇಮ ಬೆಳೆಸುವ, ಮುಂಬರುವ ಪ್ರತಿ ಪ್ರಜೆಗಳನ್ನು ತಿದ್ದಿ ತೀಡುವ ಶಿಲ್ಪಿಯಾಗಿ, ವೈವಿಧ್ಯಮಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ಪಾಠ ಹೇಳುವ ಶಿಕ್ಷಕ , ಶಿಕ್ಷಕಿಯರು ದೇವರ ಸಮಾನ ಅಂತಾರೆ. ವಿದ್ಯಾರ್ಥಿಗಳು ತಪ್ಪು ಮಾಡಿದಾಗ, ಪಾಠ ಸರಿಯಾಗಿ ಕಲಿಯದೇ ಇದ್ದಾಗ ಶಿಕ್ಷಕರು ಬೈಯ್ಯುವುದು, ಹೊಡೆಯುವುದು ಕಾಮನ್ ಆದರೆ ಶಿಕ್ಷಕರೇ ವಿದ್ಯಾರ್ಥಿಗಳೊಂದಿಗೆ ಗೂಂಡಾಗಳಂತೆ ವರ್ತಿಸುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಮೂಡಿದೆ.
ಜನವರಿಯಲ್ಲಿ ಶಿಕ್ಷಕರ ಗುಂಪೊಂದು ವಿದ್ಯಾರ್ಥಿಯೊಬ್ಬನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಪುಣೆ ಜಿಲ್ಲೆಯ ಜುನ್ನಾರ್ ತಾಲೂಕಿನ ಅಲೆಫಾಟಾದಲ್ಲಿ ನಡೆದಿತ್ತು. ಅಲ್ಲದೇ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. 11ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗೆ ಅಮಾನುಷವಾಗಿ ಥಳಿಸಿರುವ ಶಿಕ್ಷಕರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಜನವರಿ 21 ರಂದು ಅಲೆಯ ಜ್ಞಾನಮಂದಿರ ಜೂನಿಯರ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.
ವಿದ್ಯಾರ್ಥಿಯೊಬ್ಬ ಶಿಕ್ಷಕರನ್ನು ನಿಂದಿಸಿದ್ದಾನೆ ಎಂದು ತಪ್ಪಾಗಿ ಭಾವಿಸಿ ಕೆಲ ಶಿಕ್ಷಕರು ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದರು. ಕೆಲ ವಿದ್ಯಾರ್ಥಿಗಳ ಗುಂಪು ಶಿಕ್ಷಕರು ಹುಡುಗನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದರು.

ಶಿಕ್ಷಕನನ್ನು ನೋಡಿ ತಮಾಷೆ ಮಾಡಿದ ಎಂಬ ಕಾರಣಕ್ಕೆ ಹಿಂದೆ, ಮುಂದೆ ವಿಚಾರಿಸದೇ ಶಾಲೆಯ ಶಿಕ್ಷಕರ ಗುಂಪು ವಿದ್ಯಾರ್ಥಿಯ ತಲೆ ಕೂದಲು ಹಿಡಿದು ಎಳೆದಾಡಿ ಕಾಲಿನಿಂದ ಒದ್ದಿದ್ದರು. ಈ ವೇಳೆ ವಿದ್ಯಾರ್ಥಿ ತನ್ನ ತಪ್ಪಿಲ್ಲ ಬಿಟ್ಟು ಬಿಡಿ ಎಂದು ಮನವಿ ಮಾಡಿದರೂ ಬಿಡದೇ ಶಿಕ್ಷಕರು ಆತನ ಮೇಲೆ ಹಲ್ಲೆ ನಡೆಸಿದ್ದರು.
ಕಡಿಮೆ ಅಂಕ ನೀಡಿದ್ದಕ್ಕೆ ಶಿಕ್ಷಕನಿಗೆ ಥಳಿಸಿದ್ದ ವಿದ್ಯಾರ್ಥಿಗಳ ಗುಂಪು
ಇದಕ್ಕೆ ತದ್ವಿರುದ್ಧ ಎಂಬಂತೆ ಕೆಲ ತಿಂಗಳ ಹಿಂದೆ ಜಾರ್ಖಂಡ್ನ ದುಮ್ಕಾದ ಹಳ್ಳಿಯೊಂದರ ಶಾಲಾ ವಿದ್ಯಾರ್ಥಿಗಳು ಶಿಕ್ಷಕನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದರು. ತಮಗೆ ಶಿಕ್ಷಕರು ಕಡಿಮೆ ಅಂಕಗಳನ್ನು ನೀಡಿದರು ಎಂದು ಎಲ್ಲ ಶಿಕ್ಷಕರನ್ನು ಕರೆದು ಬಳಿಕ ಅವರನ್ನು ಮರಕ್ಕೆ ಕಟ್ಟಿಹಾಕಿ ಈ ನೀಚ ಕೃತ್ಯವೆಸಗಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿ ಹಲ್ಲೆಗೊಳಗಾದ ಶಿಕ್ಷಕ ಕುಮಾರ್ ಸುಮನ್, ವಿದ್ಯಾರ್ಥಿಗಳು ಸಭೆ ನಡೆಸುವ ನೆಪದಲ್ಲಿ ನಮಗೆ ಕರೆ ಮಾಡಿದರು. ಬಳಿಕ ಜಮಾಯಿಸಿದ್ದ ಎಲ್ಲ ಮಕ್ಕಳು ಪರೀಕ್ಷೆಯಲ್ಲಿ ನಪಾಸಾಗಿದ್ದೇವೆ. ಪ್ರಾಯೋಗಿಕ ಅಂಕಗಳನ್ನು ಕಡಿಮೆ ನೀಡಿದ್ದೇ ಇದಕ್ಕೆ ಕಾರಣ ಎಂದು ದೂರಿದ್ದರು.












Click it and Unblock the Notifications