ವಾಹನ ತೆರಿಗೆ ಕೇಸ್ : ಬಹುಭಾಷಾ ನಟಿಗೆ ನಿರೀಕ್ಷಣಾ ಜಾಮೀನು
ಕೊಚ್ಚಿ, ಜನವರಿ 17 : ಐಷಾರಾಮಿ ವಾಹನ ತೆರಿಗೆ ವಂಚನೆ ಪ್ರಕರಣದಲ್ಲಿ ಬಹುಭಾಷಾ ನಟಿ ಅಮಲಾ ಪೌಲ್ ಅವರಿಗೆ ಇಂದು ಕೇರಳ ಹೈಕೋರ್ಟಿನಿಂದ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಕೇರಳ ರಾಜ್ಯದ ರಸ್ತೆ ತೆರಿಗೆ ಕಟ್ಟದ ಕಾರಣ ನೋಟಿಸ್ ನೀಡಲಾಗಿತ್ತು.
ಕೇರಳಕ್ಕೆ ರಸ್ತೆ ತೆರಿಗೆ ನೀಡದೆ ಪುದುಚೇರಿಯಲ್ಲಿ ಅಮಲಾ ಅವರು ತಮ್ಮ ಕಾರಿನ ನೋಂದಣಿ ಮಾಡಿಸಿಕೊಂಡಿದ್ದರು. ಈ ಬಗ್ಗೆ ಪ್ರಶ್ನೆಗಳು ಎದ್ದಿತ್ತು. ಪ್ರಕರಣ ಪೊಲೀಸ್ ಠಾಣೆ ತಲುಪಿ, ತನಿಖೆ ಆರಂಭಗೊಂಡಿತ್ತು. ಅಮಲಾಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.

ಸೋಮವಾರದಂದು ಪೊಲೀಸರ ಮುಂದೆ ಹಾಜರಾಗಿದ್ದರು. ಈ ವೇಳೆ ಅಮಲಾ ಅವರು ನೀಡಿದ್ದ ದಾಖಲೆಗಳು ನಕಲಿ ಎಂದು ತಿಳಿದು ಬಂದಿತ್ತು. ಪುದುಚೇರಿಯ ನಿವಾಸಿ ಎಂದು ನಕಲಿ ಬಾಡಿಗೆ ಷರತ್ತುಪತ್ರಗಳನ್ನು ನೀಡಿರುವುದು ಕಂಡು ಬಂದಿತ್ತು. ಆದರೆ, ಶೂಟಿಂಗ್ ವೇಳೆಯಲ್ಲಿ ಈ ಬಾಡಿಗೆ ಮನೆಯಲ್ಲಿ ವಾಸಿಸುತ್ತೇನೆ ಎಂದು ಅಮಲಾ ವಾದಿಸಿದ್ದರು.
ಆದರೆ, ಅಮಲಾ ಅವರ ವಾದವನ್ನು ಒಪ್ಪದ ಪೊಲೀಸರು, ಬಂಧಿಸಿ ವಿಚಾರಣೆಗೆ ಅನುವು ಮಾಡಿಕೊಡುವಂತೆ ಕೋರಿದ್ದರು. ಬಂಧನದ ಅಗತ್ಯವಿಲ್ಲ ಎಂದು ಹೇಳಿದ ಕೇರಳ ಹೈಕೋರ್ಟ್, 1 ಲಕ್ಷ ರು ಬಾಂಡ್, ಇಬ್ಬರ ಶ್ಯೂರಿಟಿ, ವಿಚಾರಣೆಗೆ ಹೇಳಿ ಕಳಿಸಿದಾಗ ತನಿಖಾಧಿಕಾರಿ ಮುಂದೆ ಹಾಜರಾಗಬೇಕು ಮುಂತಾದ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಇತ್ತೀಚೆಗೆ ನಟ, ನಿರ್ದೇಶಕ ಫಹದ್ ಫಾಸಿಲ್ ಅವರು ಕೂಡಾ ಇದೇ ರೀತಿಯ ಪ್ರಕರಣದಲ್ಲಿ ಸಿಲುಕಿ, ಜಾಮೀನು ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications