
ತಮಿಳುನಾಡು: ಹಿಂದೂಗಳ ಅಂಗಡಿಗಳಿಂದ ಮಾತ್ರ ವಸ್ತು ಖರೀದಿಸಿ- ಮನವಿ ಮಾಡಿದ ಕಾರ್ಯಕರ್ತ ಅರೆಸ್ಟ್
ಕರೂರು (ತಮಿಳುನಾಡು) ಅಕ್ಟೋಬರ್ 15: ತಮಿಳುನಾಡಿನ ಕರೂರಿನಲ್ಲಿ ಧಾರ್ಮಿಕ ಒಡಕು ಸೃಷ್ಟಿಸಲು ಯತ್ನಿಸಿದ ಹಿಂದೂ ಮುನ್ನಾನಿ ಕಾರ್ಯಕರ್ತನನ್ನು ಬಂಧಿಸಲಾಗಿದೆ. ಆರೋಪಿಯನ್ನು ವೆಂಗಮೇಡು ಜ್ಯೋತಿದಾರ್ ಸ್ಟ್ರೀಟ್ ನಿವಾಸಿ ಶಕ್ತಿ (32) ಎಂದು ಗುರುತಿಸಲಾಗಿದೆ.
ಹಿಂದೂ ಮುನ್ನಾನಿಯ ಕರೂರ್ ಜಿಲ್ಲಾ ಸಂಯೋಜಕ ಶಕ್ತಿ ಅವರು ದೀಪಾವಳಿ ಸಂದರ್ಭದಲ್ಲಿ ಹಿಂದೂ ಸಮುದಾಯದವರು ನಡೆಸುವ ಅಂಗಡಿಗಳಲ್ಲಿ ಮಾತ್ರ ಉತ್ಪನ್ನಗಳನ್ನು ಖರೀದಿಸುವಂತೆ ಹಿಂದೂಗಳಿಗೆ ಮನವಿ ಮಾಡುವ ಕರಪತ್ರಗಳನ್ನು ಹಂಚುತ್ತಿದ್ದರು. ಅಂಗಡಿಯಿಂದ ವಸ್ತುಗಳನ್ನು ಖರೀದಿಸುವ ಮೊದಲು ಅಂಗಡಿಗಳಲ್ಲಿ ಹಿಂದೂ ದೇವರುಗಳ ಚಿತ್ರಗಳನ್ನು ನೋಡಬೇಕೆಂದು ಅವರು ಗ್ರಾಹಕರನ್ನು ಒತ್ತಾಯಿಸಿದರು.
ಶಕ್ತಿ ವಿರುದ್ಧ IPC ಸೆಕ್ಷನ್ 153A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು) ಮತ್ತು IPC ಸೆಕ್ಷನ್ 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೂರಿನ ಆಧಾರದ ಮೇಲೆ ಕರೂರು ಜಿಲ್ಲೆ ವೆಂಗಮೇಡು ಪೊಲೀಸ್ ಠಾಣೆಯ ಸಹಾಯಕ ನಿರೀಕ್ಷಕ ಉದಯಕುಮಾರ್ ಪ್ರಕರಣ ದಾಖಲಿಸಿಕೊಂಡು ಶಕ್ತಿ ಎಂಬುವರನ್ನು ಬಂಧಿಸಿದ್ದಾರೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶಕ್ತಿ ಬಂಧನವನ್ನು ಖಂಡಿಸಿ ಹಿಂದೂ ಮುನ್ನಾನಿ ಕಾರ್ಯಕರ್ತರು ವೆಂಗಮೇಡುವಿನಲ್ಲಿ ಪ್ರತಿಭಟನೆ ನಡೆಸಿದರು.
ಯುಪಿಯಲ್ಲಿ ಇಂಥದ್ದೇ ಪ್ರಕರಣ:-
ಕರ್ವಾ ಚೌತ್ ಹಬ್ಬಕ್ಕೂ ಮುನ್ನ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಹಿಂದೂ ಮಹಿಳೆಯರ ಕೈಗೆ 'ಇತರ ಸಮುದಾಯ'ಕ್ಕೆ ಸೇರಿದ ಮೆಹಂದಿ ಕಲಾವಿದರು ಗೋರಂಟಿ ಹಚ್ಚಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹಿಂದೂ ಮಹಾಸಭಾದ ಸದಸ್ಯರು ಎಚ್ಚರಿಸಿದ್ದರು. ಮೆಹಂದಿ ಅಂಗಡಿಗಳನ್ನು ತೆರೆದಿರುವ ಮುಸ್ಲಿಂ ಯುವಕರ ಉದ್ದೇಶಗಳು "ವಿಭಿನ್ನ" ಮತ್ತು ಅವರ ಮನಸ್ಸಿನಲ್ಲಿ "ಲವ್ ಜಿಹಾದ್" ಇದೆ ಎಂದು ಖತೌಲಿಯ ಬಿಜೆಪಿ ಶಾಸಕ ವಿಕ್ರಮ್ ಸೈನಿ ಬುಧವಾರ (ಅಕ್ಟೋಬರ್ 13) ಹೇಳಿದ್ದರು.
"ಅವರು ಈ [ಮೆಹಂದಿ ಕೆಲಸದ] ನೆಪದಲ್ಲಿ ಲವ್ ಜಿಹಾದ್ ನಡೆಸುತ್ತಾರೆ. ಇಂತಹ ಹಲವು ಪ್ರಕರಣಗಳು ನಡೆದಿವೆ. ನನ್ನ ವಿನಂತಿ [ಹಿಂದೂ ಮಹಿಳೆಯರಿಗೆ] ಮನೆಯಲ್ಲಿ ಅಥವಾ ನಮ್ಮ ಸಮುದಾಯದವರು ತೆರೆದಿರುವ ಅಂಗಡಿಗಳು ಮತ್ತು ಬ್ಯೂಟಿ ಪಾರ್ಲರ್‌ಗಳಿಂದ ಮೆಹಂದಿಯನ್ನು ಹಚ್ಚಿಸಕೊಳ್ಳಬೇಕು" ಎಂದು ಸೈನಿ ಹೇಳಿದ್ದರು. ಈ ಹೇಳಿಕೆ ವಿವಾದವನ್ನು ಸೃಷ್ಟಿ ಮಾಡಿತ್ತು.