ವೀಕೆಂಡ್‌ನಲ್ಲಿ ಸರ್ಕಾರಿ ರಜೆ ಬಂದರೆ ಸೋಮವಾರ ರಜೆ: ಸ್ವಿಗ್ಗಿ ಕಂಪನಿಯ ಲೀಲ್ ಪಾಲಿಸಿಗೆ ನೆಟ್ಟಿಗರ ಭಾರಿ ಮೆಚ್ಚುಗೆ
ಬೆಂಗಳೂರು: ಉದ್ಯೋಗಿಗಳಿಗೆ ಸಿಗುವ ಸೌಲಭ್ಯಗಳು ಹಾಗೂ ರಜೆಗಳ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಹೆಚ್ಚಿನ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ರಜೆ ಪಡೆಯುವುದೇ ಒಂದು ಸವಾಲಿನ ಕೆಲಸ. ಆದರೆ, ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿ ತನ್ನ ಉದ್ಯೋಗಿಗಳಿಗಾಗಿ ಜಾರಿಗೆ ತಂದಿರುವ ವಿಶೇಷ ಲೀವ್ ಪಾಲಿಸಿ ಇದೀಗ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ ನೋಡಿ.
ಸ್ವಿಗ್ಗಿ ಕಂಪನಿಯ ಈ ವಿಶೇಷ ನಿಯಮದ ಬಗ್ಗೆ ಸಂಸ್ಥೆಯ ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಹಾಗೂ ಡಿಸೈನ್ ವಿಭಾಗದ ಮುಖ್ಯಸ್ಥರಾದ ಸಪ್ತರ್ಷಿ ಪ್ರಕಾಶ್ ಅವರು ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಯಾವುದೇ ಸಾರ್ವಜನಿಕ ರಜೆಯು ವಾರಾಂತ್ಯದಲ್ಲಿ ಅಂದರೆ ಶನಿವಾರ ಅಥವಾ ಭಾನುವಾರ ಬಂದರೆ, ಉದ್ಯೋಗಿಗಳಿಗೆ ಅದರ ಬದಲಾಗಿ ಮುಂದಿನ ಸೋಮವಾರ ರಜೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ಬೇರೆ ಕಂಪನಿಗಳಲ್ಲಿ, ಉದ್ಯೋಗಿಗಳು ರಜಾ ದಿನದಂದು ಕಡ್ಡಾಯವಾಗಿ ಕೆಲಸ ಮಾಡಿದರೆ ಮಾತ್ರ ಅವರಿಗೆ ಪರ್ಯಾಯವಾಗಿ 'ಕಾಂಪ್-ಆಫ್' ನೀಡಲಾಗುತ್ತದೆ. ಆದರೆ ಸ್ವಿಗ್ಗಿಯ ಈ ನಿಯಮವು ಭಿನ್ನವಾಗಿದೆ. ಸಾರ್ವಜನಿಕ ರಜೆಯೊಂದು ವೀಕೆಂಡ್‌ನಲ್ಲಿ ಬಂದರೆ ಆ ರಜೆಯ ಲಾಭವನ್ನ ಉದ್ಯೋಗಿಗಳು ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಸೋಮವಾರ ರಜೆ ನೀಡಲಾಗುತ್ತದೆ.
ಸಪ್ತರ್ಷಿ ಪ್ರಕಾಶ್ ಅವರು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ (ಆಗಸ್ಟ್ 15) ಶನಿವಾರ ಬಂದಿದ್ದರಿಂದ, ಸೋಮವಾರ ರಜೆ ಪಡೆದು ತಮ್ಮ ಮಗಳೊಂದಿಗೆ ಸಮಯ ಕಳೆದ ಬಗ್ಗೆ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಕೇವಲ ದೊಡ್ಡ ಭರವಸೆಗಳಿಗಿಂತ ಇಂತಹ ಸಣ್ಣ, ಆದರೆ ಅರ್ಥಪೂರ್ಣ ನೀತಿಗಳು ಉದ್ಯೋಗಿಗಳ ಮೇಲೆ ಹೆಚ್ಚು ಸಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಉದ್ಯೋಗಿಗಳ ಪ್ರತಿಕ್ರಿಯೆ
ಸಪ್ತರ್ಷಿ ಪ್ರಕಾಶ್ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅನೇಕ ವೃತ್ತಿಪರರು ಈ ನಿಯಮವನ್ನು ಕೊಂಡಾಡಿದ್ದು, ಈ ನಿಯಮವನ್ನಾ ಸಂಪೂರ್ಣವಾಗಿ ಒಪ್ಪುವುದಾಗಿ ಕಮೆಂಟ್ ಮಾಡಿದ್ದಾರೆ. ಕೇವಲ ಕ್ಲೈಂಟ್ ಕೆಲಸಗಳ ಹೆಸರಿನಲ್ಲಿ ರಾತ್ರಿ 11 ಗಂಟೆಯವರೆಗೆ ಕೆಲಸ ಮಾಡಿಸುವ ಹಾಗೂ ಉದ್ಯೋಗಿಗಳನ್ನ ಮತ್ತೆ ಕಚೇರಿಗೆ ಕರೆಯಿಸುವ ಇಂದಿನ ಕಾರ್ಪೊರೇಟ್ ಸಂಸ್ಕೃತಿಯ ನಡುವೆ, ಉದ್ಯೋಗಿಗಳ ಯೋಗಕ್ಷೇಮವನ್ನ ಕಾಪಾಡುವ ಇಂತಹ ಪಾಲಿಸಿಗಳು ನಿಜಕ್ಕೂ ಆಶಾದಾಯಕವಾಗಿವೆ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.
ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಮಾಡಿಕೊಡುವ ಇಂತಹ ಉದ್ಯೋಗಿ ಸ್ನೇಹಿ ನೀತಿಗಳನ್ನ ದೇಶಾದ್ಯಂತ ಎಲ್ಲಾ ಸಂಸ್ಥೆಗಳಲ್ಲೂ ಕಡ್ಡಾಯಗೊಳಿಸಬೇಕು ಎಂಬ ಒತ್ತಾಯವೂ ಅನೇಕ ಕಮೆಂಟ್‌ಗಳ ಮೂಲಕ ಕೇಳಿಬಂದಿದೆ. ಒಟ್ಟಾರೆಯಾಗಿ, ಉದ್ಯೋಗಿಗಳಿಗೆ ಉತ್ತಮ ಜೀವನವನ್ನ ಒದಗಿಸುವ ಸ್ವಿಗ್ಗಿಯ ಈ ನಡೆ ಇತರ ಕಾರ್ಪೊರೇಟ್ ಕಂಪನಿಗಳಿಗೂ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.


Click it and Unblock the Notifications
