ಸುಶಾಂತ್ ಸಿಂಗ್ ಪ್ರಕರಣ: ಮುಂಬೈ ಪೊಲೀಸರಿಗೆ ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ
ನವದೆಹಲಿ, ಅಕ್ಟೋಬರ್ 14: ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಆತ್ಮಹತ್ಯೆಯಿಂದ ಸಂಭವಿಸಿದೆ ಎಂಬ ಏಮ್ಸ್ ವರದಿಯನ್ನು ಸುಶಾಂತ್ ಕುಟುಂಬದ ಪರ ವಕೀಲ ವಿಕಾಸ್ ಸಿಂಗ್ ತಳ್ಳಿಹಾಕಿದ ಬೆನ್ನಲ್ಲೇ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಮುಂಬೈ ಪೊಲೀಸರ ನಡೆಯನ್ನು ಪ್ರಶ್ನಿಸಿದ್ದಾರೆ.
ಸಾಯುವ ಮೊದಲು ಸುಶಾಂತ್ ಸಿಂಗ್ ರಜಪೂತ್ ಕಿತ್ತಳೆ ಜ್ಯೂಸ್ ಕುಡಿದಿದ್ದರು ಎಂದು ಹೇಳಲಾಗಿತ್ತು. ಈ ವಿಚಾರವಾಗಿ ಮುಂಬೈ ಪೊಲೀಸರು ಇಡೀ ಪ್ರಕರಣದ ತನಿಖೆ ನಡೆಸಿದ ಬಗೆಯನ್ನು ಸುಬ್ರಮಣಿಯನ್ ಸ್ವಾಮಿ ಅನುಮಾನಿಸಿದ್ದಾರೆ.
'ಬೆಳಿಗ್ಗೆ ಕಿತ್ತಳೆ ಜ್ಯೂಸ್. ಸುಶಾಂತ್ ಸಿಂಗ್ ಕಿತ್ತಳೆ ಜ್ಯೂಸ್ ಕುಡಿದ ಗ್ಲಾಸ್‌ಅನ್ನು ಏಕೆ ಸಂರಕ್ಷಿಸಿ ಇಡಲಿಲ್ಲ? ಅಸಹಜ ಸಾವಿನ ಪ್ರಕರಣಗಳಲ್ಲಿ ಕಡ್ಡಾಯವಾಗಿ ಮಾಡುವಂತೆ ಸುಶಾಂತ್ ಅವರ ಅಪಾರ್ಟ್‌ಮೆಂಟ್‌ಅನ್ನು ಮುಂಬೈ ಪೊಲೀಸರು ಸೀಲ್ ಮಾಡದೆ ಇರುವುದು ಅಚ್ಚರಿಯೇನೂ ಮೂಡಿಸುತ್ತಿಲ್ಲ' ಎಂದು ಸ್ವಾಮಿ ಹೇಳಿದ್ದಾರೆ.

'ಸುಶಾಂತ್ ಸಿಂಗ್ ಪ್ರಕರಣವನ್ನು ಆತ್ಮಹತ್ಯೆಗೆ ಪ್ರಚೋದನೆಯಿಂದ ಕೊಲೆ ಪ್ರಕರಣ ಎಂದು ಪರಿವರ್ತಿಸುವ ನಿರ್ಧಾರ ತೆಗೆದುಕೊಳ್ಳಲು ಸಿಬಿಐ ವಿಳಂಬ ಮಾಡುತ್ತಿರುವುದು ಹತಾಶೆ ಮೂಡಿಸುತ್ತಿದೆ. ಏಮ್ಸ್ ತಂಡದ ಭಾಗವಾಗಿದ್ದ ವೈದ್ಯರೊಬ್ಬರು ನಾನು ಕಳುಹಿಸಿದ್ದ ಫೋಟೊವನ್ನು ಪರಿಶೀಲಿಸಿ, ಇದು ಶೇ 200ರಷ್ಟು ಕತ್ತು ಹಿಸುಕಿ ಮಾಡಿದ ಕೊಲೆ, ಆತ್ಮಹತ್ಯೆಯಲ್ಲ ಎಂದು ಬಹಳ ಹಿಂದೆಯೇ ಹೇಳಿದ್ದರು' ಎಂದು ವಕೀಲ ವಿಕಾಸ್ ಸಿಂಗ್ ತಿಳಿಸಿದ್ದರು.
ಈ ನಡುವೆ ಸುಶಾಂತ್ ಸಿಂಗ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಆಂದೋಲನ ಆರಂಭಿಸಿದ್ದಾರೆ. 'ಸುಶಾಂತ್ ಪ್ರಕರಣದ ಸತ್ಯ ಮತ್ತು ನ್ಯಾಯಕ್ಕಾಗಿ ನಮ್ಮ ಧ್ವನಿಗಳನ್ನು ಎತ್ತಲು ಇದು ಸೂಕ್ತ ಅವಕಾಶ ಎನಿಸುತ್ತಿದೆ. ಈ ವಿಚಾರವಾಗಿ ನಾವು ಒಗ್ಗಟ್ಟಿನಿಂದ ಇರಬೇಕು ಮತ್ತು ಜನರು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ ಎಂಬುದನ್ನು ತೋರಿಸಬೇಕು' ಎಂದಿದ್ದಾರೆ.












Click it and Unblock the Notifications