Surendra Koli: ನಿಥಾರಿ ಹತ್ಯಾಕಾಂಡದ ಪ್ರಮುಖ ಆರೋಪಿ ಸುರೇಂದ್ರ ಕೋಲಿ ನೇಣಿಗೆ ಶರಣು
2006ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನೊಯ್ಡಾದ ಭೀಕರ ನಿಥಾರಿ ಹತ್ಯಾಕಾಂಡದ ಪ್ರಮುಖ ಆರೋಪಿಯಾಗಿದ್ದ ಸುರೇಂದ್ರ ಕೋಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುದೀರ್ಘ ಕಾಲ ಜೈಲು ಶಿಕ್ಷೆ ಅನುಭವಿಸಿ, ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ನಿಂದ ಎಲ್ಲಾ ಆರೋಪಗಳಿಂದ ಖುಲಾಸೆಯಾಗಿ ಬಿಡುಗಡೆಯಾಗಿದ್ದ ಕೋಲಿ, ಉತ್ತರಾಖಂಡದ ಪುಣ್ಯಕ್ಷೇತ್ರ ಹರಿದ್ವಾರದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.
ಹರಿದ್ವಾರದ ಟೀ ಸ್ಟಾಲ್‌ನಲ್ಲಿ ಶವ ಪತ್ತೆ
ಶುಕ್ರವಾರದಂದು ಹರಿದ್ವಾರದ ಉತ್ತರ ಭಾಗದಲ್ಲಿರುವ ಸಪ್ತ ಸರೋವರ್ ರಸ್ತೆಯಲ್ಲಿನ ಲಾಲ್ ಮಾತಾ ದೇವಾಲಯದ ಎದುರಿನ ಟೀ ಸ್ಟಾಲ್ ಒಂದರಲ್ಲಿ ಸುರೇಂದ್ರ ಕೋಲಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಳಿಗ್ಗೆ ಸ್ಥಳೀಯರು ಈ ದೃಶ್ಯವನ್ನ ಕಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ, ಸುರೇಂದ್ರ ಕೋಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ತನ್ನ ಕುಟುಂಬದಿಂದ ಪ್ರತ್ಯೇಕವಾಗಿ ಒಬ್ಬನೇ ವಾಸಿಸುತ್ತಿದ್ದ. ಕೇವಲ ಮೂರು ದಿನಗಳ ಹಿಂದೆಯಷ್ಟೇ ಆತ ಉದ್ಯೋಗ ಅರಸಿಕೊಂಡು ಹರಿದ್ವಾರಕ್ಕೆ ಬಂದಿದ್ದ ಎನ್ನಲಾಗಿದೆ.
ಬೇರೊಬ್ಬರ ಮಾಲೀಕತ್ವದ ಈ ಟೀ ಸ್ಟಾಲ್‌ನಲ್ಲಿ ಆತ ದಿನಗೂಲಿ ನೌಕರನಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಘಟನಾ ಸ್ಥಳವನ್ನ ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ಅಲ್ಲಿ ಯಾವುದೇ ರೀತಿಯ ಡೆತ್‌ನೋಟ್ ಪತ್ತೆಯಾಗಿಲ್ಲ ಎಂದು ಹರಿದ್ವಾರದ ಪೊಲೀಸರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನಿಂದ ಆರೋಪ ಮುಕ್ತನಾಗಿದ್ದ ಕೋಲಿ
ನಿಥಾರಿ ಸರಣಿ ಹತ್ಯೆ ಪ್ರಕರಣದಲ್ಲಿ ಸುರೇಂದ್ರ ಕೋಲಿ ವಿರುದ್ಧ ಸುಮಾರು ಒಂದೂವರೆ ದಶಕಗಳ ಕಾಲ ಸುದೀರ್ಘ ಕಾನೂನು ಹೋರಾಟ ನಡೆದಿತ್ತು. ಆದರೆ, 2025ರ ನವೆಂಬರ್ 11ರಂದು ಸುಪ್ರೀಂ ಕೋರ್ಟ್ ಆತನ ಕ್ಯುರೇಟಿವ್ ಅರ್ಜಿಯನ್ನ ಪುರಸ್ಕರಿಸಿ, ಆತನ ವಿರುದ್ಧ ಬಾಕಿ ಉಳಿದಿದ್ದ ಕೊನೆಯ ಪ್ರಕರಣದಲ್ಲೂ ದೋಷಮುಕ್ತಗೊಳಿಸಿತ್ತು.
ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠವು, ಕೋಲಿ ಈಗಾಗಲೇ 12 ಇತರ ಗಂಭೀರ ಪ್ರಕರಣಗಳಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಂಡಿರುವುದನ್ನ ಉಲ್ಲೇಖಿಸಿತ್ತು. ಆತನ ವಿರುದ್ಧ ಬೇರೆ ಯಾವುದೇ ಪ್ರಕರಣಗಳು ದಾಖಲಾಗದಿದ್ದರೆ ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು. ಜೈಲಿನಿಂದ ಬಿಡುಗಡೆಯಾದ ಬಳಿಕ ಆತ ಸಮಾಜದ ಮುಖ್ಯವಾಹಿನಿಗೆ ಮರಳಲು ಸಾಧ್ಯವಾಗದೆ, ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿ ಒಂಟಿ ಜೀವನ ನಡೆಸುತ್ತಿದ್ದ ಎಂದು ಹೇಳಲಾಗುತ್ತಿದೆ.
ಇಡೀ ದೇಶವನ್ನೇ ನಡುಗಿಸಿದ್ದ ಈ ನೊಯ್ಡಾ ಸರಣಿ ಹತ್ಯೆ
ನಿಥಾರಿ ಹತ್ಯಾಕಾಂಡವು ಭಾರತದ ಕ್ರೈಮ್ ಇತಿಹಾಸದಲ್ಲೇ ಅತ್ಯಂತ ಕ್ರೂರ ಘಟನೆಗಳಲ್ಲಿ ಒಂದು. 2006ರ ಡಿಸೆಂಬರ್‌ನಲ್ಲಿ ಈ ಸರಣಿ ಹತ್ಯೆಯ ಕರಾಳ ಸತ್ಯ ಬೆಳಕಿಗೆ ಬಂದಿತ್ತು. ನೊಯ್ಡಾದ ನಿಥಾರಿ ಗ್ರಾಮದಲ್ಲಿ ಶ್ರೀಮಂತ ಉದ್ಯಮಿ ಮೋನಿಂದರ್ ಸಿಂಗ್ ಪಂಧೇರ್ ಎಂಬಾತನ ಬಂಗಲೆಯ ಹಿಂದಿರುವ ಚರಂಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಅನೇಕ ಮುಗ್ಧ ಮಕ್ಕಳು ಮತ್ತು ಮಹಿಳೆಯರ ಅಸ್ಥಿಪಂಜರಗಳು, ತಲೆಬುರುಡೆಗಳು ಪತ್ತೆಯಾಗಿದ್ದವು. ಇದು ದೇಶಾದ್ಯಂತ ಭಾರಿ ಆಕ್ರೋಶಕ್ಕೆ, ಪ್ರತಿಭಟನೆಗೆ ಕಾರಣವಾಗಿತ್ತು.
ಪಂಧೇರ್ ಮನೆಯಲ್ಲಿ ಮನೆಗೆಲಸದಾಳಾಗಿದ್ದ ಸುರೇಂದ್ರ ಕೋಲಿಯೇ ಈ ಕೃತ್ಯಗಳ ರೂವಾರಿ ಎಂದು ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು. ಅತ್ಯಾಚಾರ, ಕೊಲೆ ಮತ್ತು ನರಭಕ್ಷಕತೆಯಂತಹ ಗಂಭೀರ ಆರೋಪಗಳು ಆತನ ಮೇಲಿದ್ದವು.
ಆರಂಭದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಮತ್ತು ಹೈಕೋರ್ಟ್ ಕೋಲಿಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದವು. ಆದರೆ, ವರ್ಷಗಳು ಕಳೆದಂತೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮೇಲ್ಮನವಿ ಹಂತದಲ್ಲಿ ನ್ಯಾಯಾಲಯಗಳು ಆತನನ್ನ ಬಿಡುಗಡೆಗೊಳಿಸಿದವು.
ಸುರೇಂದ್ರ ಕೋಲಿ ಹಿನ್ನೆಲೆ
ಸುರೇಂದ್ರ ಕೋಲಿ ಮೂಲತಃ ಉತ್ತರಾಖಂಡ ರಾಜ್ಯದ ಅಲ್ಮೋರಾ ಜಿಲ್ಲೆಯ ಭಿಕಿಯಾಸೇನ್ ಪ್ರದೇಶದ ಮಂಗ್ರುಖಲಾ ಎಂಬ ಕುಗ್ರಾಮದವನು. ಆತನ ಸಾವಿನ ಕುರಿತು ಪೊಲೀಸರು ಈಗಾಗಲೇ ಆತನ ಸಹೋದರನನ್ನ ಸಂಪರ್ಕಿಸಿ, ಕುಟುಂಬ ಸದಸ್ಯರಿಗೆ ಅಧಿಕೃತ ಮಾಹಿತಿ ರವಾನಿಸಿದ್ದಾರೆ. ಆತ ತನ್ನ ಸ್ವಂತ ಊರನ್ನ ಬಿಟ್ಟು ಹರಿದ್ವಾರಕ್ಕೆ ಬಂದ ಉದ್ದೇಶವೇನು? ಬಿಡುಗಡೆಯಾದ ನಂತರದ ಆತನ ದಿನಚರಿ ಹೇಗಿತ್ತು? ಮತ್ತು ಹರಿದ್ವಾರದಲ್ಲಿ ಆತ್ಮಹತ್ಯೆಗೆ ಶರಣಾಗಲು ನಿಖರ ಕಾರಣವೇನು? ಎಂಬುದನ್ನ ಪತ್ತೆಹಚ್ಚಲು ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಚುರುಕುಗೊಳಿಸಿದ್ದಾರೆ.
ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ಹಿಂದಿರುವ ನಿಖರ ಕಾರಣ ಬಯಲಾಗುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ದಶಕಗಳ ಕಾಲ ಜೈಲುವಾಸ ಅನುಭವಿಸಿ ಹೊರಬಂದಿದ್ದ ಸುರೇಂದ್ರ ಕೋಲಿಯ ಅಂತ್ಯವು ದುರಂತದಲ್ಲಿ ಮುಕ್ತಾಯವಾಗಿದೆ.


Click it and Unblock the Notifications
