ಕನ್ವರ್ ಯಾತ್ರೆ: ಅಂಗಡಿ ಸಿಬ್ಬಂದಿ ಹೆಸರು ಪ್ರದರ್ಶನ ಮಾಡಬೇಕೆಂದ ಉತ್ತರಾಖಂಡ, ಯುಪಿ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
ನವದೆಹಲಿ, ಜುಲೈ. 22: ಕನ್ವರ್ ಯಾತ್ರೆಯ ಹಾದಿಯಲ್ಲಿರುವ ಅಂಗಡಿ ಮಾಲೀಕರು ಮತ್ತು ಅಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಹೆಸರುಗಳನ್ನು ಬಹಿರಂಗಪಡಿಸಬೇಕು ಎಂಬ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳ ಆದೇಶಗಳ ಜಾರಿಗೆ ಸುಪ್ರೀಂ ಕೋರ್ಟ್ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ತಿಂಡಿ ತಿನಿಸು ಮಾರಾಟಗಾರರನ್ನು ಅಂಗಡಿಗಳ ಮಾಲೀಕರು ಅಥವಾ ಉದ್ಯೋಗಿಗಳ ಹೆಸರನ್ನು ನೀಡುವಂತೆ ಒತ್ತಾಯಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್ ಜುಲೈ 26 ರಂದು ವಿಚಾರಣೆಯನ್ನು ಮುಂದೂಡಿದೆ. ಅಸೋಸಿಯೇಷನ್ ಆಫ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಮತ್ತು ಟಿಎಂಸಿ ಸಂಸದ ಮಹುವಾ ಮೊಯಿತ್ರಾ ಮುಂತಾದ ಎನ್‌ಜಿಒಗಳು ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳ ಈ ಆದೇಶಗಳು ಸಮುದಾಯಗಳ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸುತ್ತವೆ ಎಂದು ವಾದಿಸಿ, ಟಿಎಂಸಿ ಸಂಸದ ಮಹುವಾ ಮೊಯಿತ್ರಾ ಅವರು ಮನವಿ ಸಲ್ಲಿಸಿದ್ದರು. ಈ ಆದೇಶಗಳಿಗೆ ತಡೆ ಹಾಕುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು.
ಕನ್ವರ್ ಯಾತ್ರಾ ಹೋಗುವ ರಸ್ತೆಯಲ್ಲಿರುವ ಅಂಗಡಿಗಳ ಅಲ್ಪಸಂಖ್ಯಾತರನ್ನು ಗುರುತಿಸಿ ಅವರನ್ನು ಆರ್ಥಿಕ ಬಹಿಷ್ಕಾರಕ್ಕೆ ಒಳಪಡಿಸುವ ಮೂಲಕ ಸಮುದಾಯಗಳಲ್ಲಿ ವಿಭಜನೆಗಳನ್ನು ಸೃಷ್ಟಿಸುತ್ತವೆ. ಈ ಆದೇಶಗಳು ರಾಜ್ಯದಲ್ಲಿ ಸಮಸ್ಯೆ ಉಂಟುಮಾಡುತ್ತವೆ ಎಂದು ಅರ್ಜಿದಾರರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿಯು ಸಿಂಗ್, ಈ ಆದೇಶಗಳಿಂದ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಬಡ ತರಕಾರಿ ಮತ್ತು ಟೀ ಸ್ಟಾಲ್ ಮಾಲೀಕರು ಸಂತ್ರಸ್ತರಾಗುತ್ತಾರೆ ಎಂದು ವಾದಿಸಿದ್ದಾರೆ. ಸರ್ಕಾರದ ಈ ಆದೇಶಗಳನ್ನು ಪಾಲಿಸಲು ವಿಫಲರಾದವರ ವಿರುದ್ಧ ಬುಲ್ಡೋಜರ್ ಕ್ರಮಗಳನ್ನು ತೆಗೆದುಕೊಳ್ಳುವ ಸಂಭವವಿದೆ ಎಂದು ಹೇಳಿದ್ದಾರೆ.

ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನು ಒಳಗೊಂಡ ನ್ಯಾಯಪೀಠ ಕೆಲವು ಅಂಶಗಳನ್ನು ಪ್ರಸ್ತಾಪಿಸಿದೆ. "ಮೇಲಿನ ಆದೇಶ ಜಾರಿಯನ್ನು ನಿಷೇಧಿಸುವ ಮಧ್ಯಂತರ ಆದೇಶವನ್ನು ರವಾನಿಸಲು ನಾವು ಸೂಕ್ತವೆಂದು ಪರಿಗಣಿಸುತ್ತೇವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಆಹಾರ ಮಾರಾಟಗಾರರು ಆಹಾರದ ಮೆನು ಪ್ರದರ್ಶನ ಮಾಡಬೇಕಾಗಬಹುದು, ಆದರೆ ಮಾಲೀಕರು, ಉದ್ಯೋಗಿಗಳ ಹೆಸರುಗಳನ್ನು ಪ್ರದರ್ಶಿಸಲು ಒತ್ತಾಯಿಸಬಾರದು" ಎಂದು ಪೀಠವು ಹೇಳಿದೆ.
ಕನ್ವರ್ ಯಾತ್ರೆಯ ವಿವಾದವೇನು?
ಮುಜಾಫರ್‌ನಗರ ಪೊಲೀಸರು ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ಅಂಗಡಿಗಳ ಮಾಲೀಕರ ತಮ್ಮ ಅಂಗಡಿ ಮುಂದೆ ತಮ್ಮ ಹೆಸರನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದರು. ನಂತರ, ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ರಾಜ್ಯಾದ್ಯಂತ ಆದೇಶವನ್ನು ವಿಸ್ತರಿಸಿದೆ.
ಭಾರತೀಯ ಜನತಾ ಪಕ್ಷದ ಆಡಳಿತವಿರುವ ಉತ್ತರಾಖಂಡ ಕೂಡ ಇದೇ ರೀತಿಯ ಆದೇಶಗಳನ್ನು ನೀಡಿದೆ. ಅವರಲ್ಲದೆ, ಬಿಜೆಪಿ ನೇತೃತ್ವದ ಉಜ್ಜಯಿನಿ ಮುನ್ಸಿಪಲ್ ಕಾರ್ಪೊರೇಷನ್ ಐತಿಹಾಸಿಕ ನಗರದಲ್ಲಿ ಅಂಗಡಿ ಮಾಲೀಕರಿಗೆ ತಮ್ಮ ಹೆಸರುಗಳು ಮತ್ತು ಮೊಬೈಲ್ ಸಂಖ್ಯೆಗಳನ್ನು ತಮ್ಮ ಅಂಗಡಿಗಳ ಹೊರಗೆ ಪ್ರದರ್ಶಿಸಲು ಸೂಚಿಸಿತ್ತು.
ಉಜ್ಜಯಿನಿ ಮೇಯರ್ ಮುಖೇಶ್ ತತ್ವಾಲ್ ಅವರು ಶನಿವಾರ ಈ ಆದೇಶ ಉಲ್ಲಂಘಿಸುವವರಿಗೆ ಮೊದಲ ಅಪರಾಧಕ್ಕೆ 2,000 ಮತ್ತು ನಂತರದ ಉಲ್ಲಂಘನೆಗಳಿಗೆ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ಆದೇಶವು ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸುವ ಉದ್ದೇಶವನ್ನು ಹೊಂದಿದೆಯೇ ಹೊರತು ಮುಸ್ಲಿಂ ಅಂಗಡಿಕಾರರನ್ನು ಗುರಿಯಾಗಿಸಲು ಅಲ್ಲ ಎಂದು ಮೇಯರ್ ಹೇಳಿದ್ದಾರೆ.
ಇವೆಲ್ಲದರ ನಡುವೆ, ಮಧ್ಯಪ್ರದೇಶ ಸರ್ಕಾರವು ರಾಜ್ಯದಲ್ಲಿ ಕನ್ವರ್ ಯಾತ್ರೆಯ ಮಾರ್ಗದಲ್ಲಿ ಅಂಗಡಿ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸಬೇಕು ಎಂದು ಯಾವುದೇ ಸೂಚನೆಗಳನ್ನು ನೀಡಿಲ್ಲ. ಯಾವ ಅಂಗಡಿಕಾರನಿಗೂ ಅಂತಹ ಯಾವುದೇ ಒತ್ತಾಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.












Click it and Unblock the Notifications