TVK Vijay Thalapathy: ಕರೂರು ಕಾಲ್ತುಳಿತ ಕೇಸ್ ಸಿಬಿಐಗೆ: ಸಿಎಂಗೆ ಹಿನ್ನಡೆ, ಈ ವರೆಗಿನ ಬೆಳವಣಿಗೆಗಳೇನು?
Karur Stampede Case Updates: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದಿಂದ ತಮಿಳುನಾಡಿನ ಕರೂರಲ್ಲಿ ನಡೆದ ರಾಜಕೀಯ ರ್ಯಾಲಿ ವೇಳೆ ನಟ ವಿಜಯ್ ಥಳಪತಿ ನೋಡಲು ಜನ ಮುಗಿದ್ದು, ಕಾಳ್ತುಳಿತ ಸಂಭವಿಸಿತ್ತು. ಸುಮಾರು 41 ಮಂದಿ ಜೀವಬಿಟ್ಟಿದ್ದ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ವಹಿಸಿದೆ. ಈ ಘಟನೆ ಬಗ್ಗೆ ನೆನ್ನೆ ಬುಧವಾರ (ಅಕ್ಟೋಬರ್ 15) ತಮಿಳುನಾಡಿನ ಅಧಿವೇಶನದಲ್ಲಿ ಚರ್ಚೆ ಆಯಿತು. ಈ ಬಗ್ಗೆ ಸಿಎಂ ಎಂಕೆ. ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ. ಅಂದಿನಿಂದ ಈವರೆಗೆ ನಡೆದ ಬೆಳವಣಿಗೆಗಳ ಅಪ್ಡೇಟ್ಸ್ ಇಲ್ಲಿದೆ.
ಸೆಪ್ಟಂಬರ್ 27ರಂದು ನಡೆದ ಈ ಮಹಾದುರ್ಘಟನೆಯ ಕುರಿತು ದೇಶಾದ್ಯಂತ ಚರ್ಚೆ ಆಯಿತು. ಇದು ರಾಷ್ಟ್ರವನ್ನೆ ಬೆನ್ನಿಬೀಳಿಸಿದ ಘಟನೆ ಎಂದು ನ್ಯಾಯಾಲಯ ಸಹ ಅಭಿಪ್ರಾಯ ಹೊರಹಾಕಿದೆ. ಘಟನೆ ದಿನ ನಟ ವಿಜಯ್ ನೋಡಲು ನಿರೀಕ್ಷೆಗೂ ಮೀರಿ ಬಂದ ಜನಸಾಗರವು ಇದಕ್ಕೆ ಪ್ರಮುಖ ಕಾರಣ ಎನ್ನಲಾಯಿತು. ಇದನ್ನು ಹಲವು ರಾಜಕೀಯವಾಗಿ ಬಳಸಿಕೊಂಡರು ಬಳಿಕ ನಟ ವಿಜಯ್ ಪ್ರತಿಕ್ರಿಯಿಸಿದ್ದಾರೆ.

ಸಿಬಿಗೆ ತನಿಖೆ ವಹಿಸಿದ ಸುಪ್ರೀಂ ಕೊರ್ಟ್
ಪ್ರಕರಣದ ತನಿಖೆಗಾಗಿ ನಿವೃತ್ತ ನ್ಯಾಯಾಧೀಶರಾದ ಅಜಯ್ ರಸ್ತೋಗಿ ಅವರ ಅಧ್ಯಕ್ಷತೆಯಲ್ಲಿ ಮೂರು ಸದಸ್ಯರ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿತ್ತು. ಈ ಕಾಲ್ತುಳಿತ ಪ್ರಕರಣದಲ್ಲಿ ಸಾವು ನೋವಿನ ಸಂಖ್ಯೆ ಅಧಿಕವಾಗಿದೆ. ಈ ಬಗ್ಗೆ ನ್ಯಾಯಯುತ ಹಾಗೂ ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ ಎಂದು ಕೋರ್ಟ್ ಹೇಳಿತು ಆ ನಿಟ್ಟಿನಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಿದೆ.
ಸಿಎಂಗೆ ಹಿನ್ನಡೆ, ಎಂಕೆ ಸ್ಟಾಲಿನ್‌ಗೆ ಪ್ರತಿಕ್ರಿಯೆ
ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಒಂದಷ್ಟು ರಾಜಕೀಯ ಲೆಕ್ಕಾಚಾರ ಆಗಿದ್ದ ತಮಿಳುನಾಡಿನ ಸಿಎಂ ಎಂಕೆ ಸ್ಟಾಲಿನ್ ಅವರಿಗೆ ಹಿನ್ನಡೆ ಆಗಿದೆ. ಅದರ ಬೆನ್ನಲ್ಲೆ ನೆನ್ನೆ ತಮಿಳುನಾಡಿನ ವಿಧಾನಸಭೆ ಅಧಿವೇಶನದಲ್ಲಿ ಕರೂರು ಕಾಲ್ತುಳಿತ ಪ್ರಕರಣ ಪ್ರತಿಧ್ವನಿಸಿದೆ. ಕರೂರು ರ್ಯಾಲಿಯ ದಿವಸ ನಟ ವಿಜಯ್ ತಡವಾಗಿ ಬಂದಿದ್ದಕ್ಕೆನೇ ಕಾಲ್ತುಳಿತ ಸಂಭವಿಸಿತು ಎಂದು ಆರೋಪಿಸಿದರು. ಆಗ ವಿಪಕ್ಷಗಳಾದ ಬಿಜೆಪಿ ಮತ್ತು ಎಐಎಡಿಎಂಕೆ ಸಿಎಂ ವಿರುದ್ಧ ಸಭಾತ್ಯಗ ಮಾಡಿದರು.
ಟಿವಿಕೆ ಸಂಸ್ಥಾಪಕ ವಿಜಯ್ ಏಳು ಗಂಟೆ ತಡವಾಗಿ ಸ್ಥಳಕ್ಕೆ ಬಂದರು. ನೆರೆದಿದ್ದ ಜನರಿಗೆ ನೀರು, ಆಹಾರ ಪೂರೈಸಲು ಸಂಘಟಕರು ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಜನರನ್ನು ಚದುರಿಸುವ ನಿಟ್ಟಿನಲ್ಲಿ ವಿಜಯ್ ಮೊದಲು ಭಾಷಣ ಆರಂಭಿಸಲು ಎಂಬ ಪೊಲೀಸ್ ಮನವಿಗೆ ಸ್ಪಂದಿಸಿಲ್ಲ. ಅವರ ತಡವಾಗಿದ್ದ ಬಂದಿದ್ದಕ್ಕೆ ಈ ಘಟನೆ ಸಂಭವಿಸಿದೆ ಎಂದು ಸಿಎಂ ಸರ್ಕಾರದ ನಡೆ ಸಮರ್ಥಿಸಿಕೊಂಡಿದ್ದಾರೆ.

ಕಾಲ್ತುಳಿತ ಪ್ರಕರಣದ ಈವರೆಗಿನ ಅಪ್ಡೇಟ್ಸ್
ಕಾಲ್ತುಳಿತದಲ್ಲಿ ಹತ್ತಾರು ಮಂದಿ ಮೃತಪಡುತ್ತಿದ್ದಂತೆ ಘಟನೆಯನ್ನು ನಟ ವಿಜಯ್ ವಿರುದ್ಧ ಬಳಸಿಕೊಳ್ಳುವ ಒಂದಷ್ಟು ಕೆಲಸವು ಆಯಿತು. ಪ್ರಕರಣ ಸಂಬಂಧ ದೂರುಗಳು, ಕೋರ್ಟ್‌ಗೆ ಸಾರ್ವಜನಿಕ ಅರ್ಜಿ ಸಲ್ಲಿಕೆಯಾದವು. ನನ್ನ ಮೇಲೆ ನಿಮ್ಮ ಸರ್ಕಾರ ಯಾವಾಗ ಬೇಕಾದರೂ ಕ್ರಮ ಜರುಗಿಸಬಹುದು. ಆದರೆ ಜನಸಾಮಾನ್ಯರಿಗೆ ತೊಂದರೆ ಕೊಡದಂತೆ ನಟ ವಿಜಯ್ ಎಂಕೆ ಸ್ಟಾಲಿನ್ ಸರ್ಕಾರಕ್ಕೆ ಕೋರಿದರು. ಈ ಘಟನೆ ಆಗಬಾರದಿತ್ತು. ಇದರಿಂದ ನನ್ನ ಮನಸ್ಸಿಗೂ ನೋವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದರು.
ಮದ್ರಾಸ್ ಹೈಕೋರ್ಟ್ ಛೀಮಾರಿ
ಇನ್ನೂ ಅಕ್ಟೋಬರ್ 04ರಂದು ಪ್ರಕರಣ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ನ್ಯಾಯಪೀಠ ನಟ ವಿಜಯ್ ಹಾಗೂ ಟಿವಿಕೆ ಪಕ್ಷದ ವಿರುದ್ಧ ಕಿಡಿ ಕಾರಿತ್ತು. ಕಾಲ್ತುಳಿತ ಪ್ರಕರಣ ಸಂಭವಿಸುತ್ತಿದ್ದಂತೆ ನಟ ವಿಜಯ್ ಸ್ಥಳದಿಂದ ಓಡಿ ಹೋದಿರಿ. 41 ಮಂದಿ ಸಾವಿನ ಬಗ್ಗೆ ಸಂಸ್ಥಾಪಕರಿಗೆ, ಪಕ್ಷಕ್ಕೆ ಯಾವುದೇ ಪಶ್ಚಾತಾಪ ಭಾವನೆ ಇಲ್ಲ ಎಂದು ಹೇಳಿತು. ಈ ಬಗ್ಗೆ ವಿಷಾಧ ತೋರಲಿಲ್ಲ ಎಂದು ಅಸಮಾಧಾನ ಹೊರ ಹಾಕಿತ್ತು.
ನ್ಯಾಯಾಂಗ ನಿಂದನೆ, ಕೆಲವರ ಬಂಧನ
ಸಾಮಾಜಿಕ ಜಾಲತಾಣದಲ್ಲಿ ಕರೂರು ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಪೋಸ್ಟ್ ಮಾಡಿದ ಆರೋಪದ ಮೇಲೆ ರಾಜಕೀಯ ಕಾರ್ಯಕರ್ತ ಮತ್ತು ವಕೀಲ ಆರ್.ವರದರಾಜನ್ ಅವರನ್ನು ಸೈನರ್ ವಿಭಾಗದ ಪೊಲೀಸರು ಬಂಧಿಸಿದರು. ವರದರಾಜನ್ ಅವರು ನೇತಾಜಿ ಮಕ್ಕಳ್ ಕಚ್ಚಿ ಸಂಘಟನೆ ಸ್ಥಾಪಕ ಅಧ್ಯಕ್ಷರು ಆಗಿದ್ದಾರೆ. ಅಕ್ಟೋಬರ್ 04ರಂದು ನ್ಯಾಯಾಂಗ ನಿಂದನೆ ಮಾಡಿದ್ದ ಯೂಟ್ಯೂಬರ್ ಮಾರಿದಾಸ್ ಅವರನ್ನು ಬಂಧಿಸಲಾಗಿತ್ತು.
ವಿಜಯ್‌ಗೆ ನಟ ಶಿವಣ್ಣ ಮಹತ್ವದ ಸಲಹೆ
ಸ್ಯಾಂಡಲ್‌ವುಡ್ ಶಿವರಾಜ್ ಕುಮಾರ್ ಅವರು ಸಹ ಕರೂರು ಕಾಲ್ತುಳಿತ ಪ್ರಕರಣ ಕುರಿತು ಪ್ರತಿಕ್ರಿಯಿಸಿದ್ದರು. ಅವರು ತಿರುಚೆಂದೂರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದ್ದರು. 'ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಎಚ್ಚರಿಕೆ ಹೆಜ್ಜೆ ಇಡುವಂತೆ ಸಲಹೆ ನೀಡಿದ್ದರು. ಯಾವುದೇ ನಿರ್ಧಾರ ಕೈಗೊಳ್ಳುವಾಗ ಸ್ಪಷ್ಟವಾಗಿ ಯೋಚಿಸಬೇಕು. ನಿಮ್ಮ ರಾಜಕೀಯ ಜೀವನ ಯಶಸ್ವಿಯಾಗಲಿದೆ' ಎಂದು ನಟ ಶಿವಣ್ಣ ತಿಳಿಸಿದ್ದರು.
ಸದ್ಯ ಪ್ರಕರಣದ ತನಿಖೆಯು ತಮಿಳುನಾಡು ಸರ್ಕಾರದ ಪೊಲೀಸ್ ಇಲಾಖೆಯಿಂದ ಸಿಬಿಐಗೆ ಹಸ್ತಾಂತರಗೊಂಡಿದೆ. ತನಿಖೆ ಪ್ರಗತಿಯಲ್ಲಿದ್ದು, ಶೀಘ್ರವೇ ತಪ್ಪಿತಸ್ಥರು ಯಾರು, ನಿಖರ ಕಾರಣವೇನು? ಅಮಾಯಕ ಜೀವಗಳ ಬಲಿಯಾಗುವಲ್ಲಿ ಉಂಟಾದ ನಿರ್ಲಕ್ಷ್ಯವೇನು? ಎಂಬುದೆಲ್ಲವು ತಿಳಿದು ಬರಲಿದೆ.












Click it and Unblock the Notifications