ಮಹಾಕುಂಭ ಮೇಳಕ್ಕೂ ಕಾಲಿಟ್ಟ ಕರ್ನಾಟಕದ ಮುಂದಿನ ಸಿಎಂ ವಿಚಾರ
ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿದ್ದ ಮುಂದಿನ ಸಿಎಂ ವಿಚಾರವು ಇದೀಗ ದೂರದ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲೂ ಸದ್ದು ಮಾಡುತ್ತಿದೆ. ಕರ್ನಾಟಕದ ಮುಂದಿನ ಸಿಎಂ ಬಗ್ಗೆ ಮಹಾಕುಂಭ ಮೇಳದಲ್ಲಿ ಚರ್ಚೆಯಾಗಿದೆ. ಇಷ್ಟಕ್ಕೂ ಕಾಂಗ್ರೆಸ್ ಸಚಿವ ಸತೀಶ್ ಜಾರಕಿಹೊಳಿ ಅವರೇ ಮುಂದಿನ ಸಿಎಂ ಎನ್ನುವ ಪೋಸ್ಟರ್‌ವೊಂದು ಪ್ರಯಾಗ್‌ರಾಜ್‌ನಲ್ಲಿ ಗಮನ ಸೆಳೆದಿದೆ.
ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು ಮಹಾಕುಂಭ ಮೇಳಕ್ಕಾಗಿ ಪ್ರಯಾಗ್‌ರಾಜ್‌ಗೆ ತೆರಳಿದ್ದು, ಈ ವೇಳೆ ಸತೀಶ್ ಅವರ ಫೋಟೋ ಪ್ರದರ್ಶಿಸಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆ ಪೋಸ್ಟರ್‌ನಲ್ಲಿ ಸತೀಶ್ ಜಾರಕಿಹೊಳಿ ಅವರು ಮುಂದಿನ ಸಿಎಂ ಎಂದು ಬರೆಯಲಾಗಿದೆ.

ಅಲ್ಲದೆ ಮುಂದಿನ ಸಿಎಂ ಸತೀಶಣ್ಣ ಎಂದು ಘೋಷಣೆಗಳನ್ನು ಕೂಗುವ ಮೂಲಕ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು ಹರಕೆ ಹೊತ್ತಿದ್ದಾರೆ ಎನ್ನಲಾಗಿದೆ. ಕುಂಭಮೇಳಕ್ಕೆ ಭೇಟಿ ನೀಡಿರುವ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಅಲ್ಲಿನ ತ್ರಿವೇಣಿ ಸಂಗಮದಲ್ಲಿ ಸತೀಶ್ ಅವರ ಪೋಸ್ಟರ್ ಹಿಡಿದು ಪುಣ್ಯಸ್ನಾನ ಮಾಡಿದ್ದಾರೆ. ಬಳಿಕ ಕರ್ನಾಟಕಕ್ಕೆ ಸತೀಶಣ್ಣ ಮುಂದಿನ ಸಿಎಂ ಆಗಲಿ ಎಂದು ಹರಕೆ ಕಟ್ಟಿಕೊಂಡಿದ್ದಾರೆ.
ಬೆಳಗಾವಿ ಮಂದಿ ಮೊದಲಿನಿಂದಲೂ ಸತೀಶ್ ಜಾರಕಿಹೊಳಿ ಅವರೇ ಮುಂದಿನ ಸಿಎಂ ಎಂದು ಹಲವು ವೇದಿಕೆಗಳಲ್ಲಿ ಘೋಷಣೆಗಳನ್ನು ಕೂಗಿ ಅಭಿಮಾನ ಮೆರೆಯುತ್ತಿದ್ದರು. ಇತ್ತೀಚೆಗೆ ಸಿಗಂದೂರಿನಲ್ಲೂ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಮುಂದಿನ ಸಿಎಂ ಸತೀಶಣ್ಣ ಎಂಬ ಪೋಸ್ಟರ್ ಹಿಡಿದು ವಿಶೇಷ ಪೂಜೆ ಸಲ್ಲಿಸಿ ಗಮನ ಸೆಳೆದಿದ್ದರು. ಇದೀಗ ಪ್ರಯಾಗ್‌ರಾಜ್‌ನಲ್ಲೂ ಸತೀಶ್ ಅವರು ಸಿಎಂ ಆಗಲಿ ಎಂದು ಘೋಷಣೆಗಳನ್ನು ಕೂಗಿದ್ದಾರೆ ಅಭಿಮಾನಿಗಳು.

ಸತೀಶ್ ಜಾರಕಿಹೊಳಿ ಅವರೂ ಈ ಹಿಂದೆ ಹಲವು ಬಾರಿ ಸಿಎಂ ಆಗಬೇಕೆನ್ನುವ ತಮ್ಮ ಇಂಗಿತ ವ್ಯಕ್ತಪಡಿಸಿದ್ದರು. ನಾನು ಮುಖ್ಯಮಂತ್ರಿಯಾಗಲು ತಯಾರಿ ಏನಿಲ್ಲ, ನನಗೆ ಸಿಎಂ ಆಗಬೇಕು ಎನ್ನುವ ಆಸೆ ಇದ್ದರೂ ಅಂತಿಮವಾಗಿ ಹೈಕಮಾಂಡ್ ಒಪ್ಪಿದಾಗ ಮಾತ್ರ ಅದು ಸಾಧ್ಯವಾಗುತ್ತೆ. ಇದಕ್ಕೆ ಅವಸರ ಏನಿಲ್ಲ. ನಾನು ಮುಂದಿನ ಅವಧಿಗೆ ಸಿಎಂ ಸ್ಥಾನ ಕೇಳುತ್ತಿದ್ದೇನೆ ಎಂದಿದ್ದರು.
2028ಕ್ಕೆ ನಾನೇ ಸಿಎಂ ಅಭ್ಯರ್ಥಿ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಖುದ್ದಾಗಿ ಹೇಳಿ ಗಮನ ಸೆಳೆದಿದ್ದರು. ಈ ಅವಧಿಗೆ ನಾನು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಏಕೆಂದರೆ ಈಗ ರಾಜ್ಯದಲ್ಲಿ ಮುಖ್ಯಮಂತ್ರಿಗಳು ಇದ್ದಾರೆ. ಹಾಗಾಗಿ ಅಂತಹ ಪರಿಸ್ಥಿತಿ ಇಲ್ಲ. ಆದರೆ ಮುಂದಿನ ಅವಧಿಗೆ ನಾನು ಸಿಎಂ ಆಕಾಂಕ್ಷಿ ಎಂದು ಸತೀಶ್ ಹೇಳಿದ್ದರು.
ಈಗ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಇದಕ್ಕಾಗಿ ಕುಸ್ತಿ ಮಾಡುವ ಅವಶ್ಯಕತೆಯೂ ಇಲ್ಲ. ಅನೇಕರು ಸಿಎಂ ಆಗುವ ಬಗ್ಗೆ ತಮ್ಮ ಆಸೆ ಬಿಚ್ಚಿಟ್ಟಿದ್ದಾರೆ. ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಕೂಡ ಇಲ್ಲ. ಆದರೆ 2028ಕ್ಕೆ ಸಿಎಂ ಆಗುವ ತಯಾರಿಯಲ್ಲಿದ್ದೇನೆ. ಅಭಿಮಾನಿಗಳು ಅಲ್ಲಿವರೆಗೆ ಕಾಯುವುದು ಒಳ್ಳೆಯದು. ನಾನು ಸಿಎಂ ಆಗುವ ವಿಚಾರದ ಬಗ್ಗೆ ಮುಂದೆ ನೋಡೋಣ ಎಂದಿದ್ದರು.












Click it and Unblock the Notifications