Super El Niño ಎಫೆಕ್ಟ್: ಭಾರತದಲ್ಲೇ 15,800ಕ್ಕೂ ಹೆಚ್ಚು ಸಾವು; 6 ತಿಂಗಳಲ್ಲಿ ವಿಶ್ವಕ್ಕೆ 4.51 ಲಕ್ಷ ಸಾವಿನ ಆತಂಕ
ನವದೆಹಲಿ: 2026ರ ಪ್ರಬಲ ಎಲ್ ನಿನೋ ವಿದ್ಯಮಾನದಿಂದ ಮುಂಬರುವ ಆರು ತಿಂಗಳಲ್ಲಿ ಭಾರತದಲ್ಲಿ ಸುಮಾರು 15,800 ಹೆಚ್ಚುವರಿ ಬಿಸಿಗಾಳಿ ಸಂಬಂಧಿತ ಸಾವುಗಳು ಸಂಭವಿಸಬಹುದು ಎಂದು ಚಿಕಾಗೋ ವಿಶ್ವವಿದ್ಯಾಲಯದ Climate Impact Lab ಅಧ್ಯಯನ ಅಂದಾಜಿಸಿದೆ.
ಬುಧವಾರ ಬಿಡುಗಡೆಯಾಗಿರುವ ಈ ಆತಂಕಕಾರಿ ವರದಿಯ ಪ್ರಕಾರ, ಮುಂದಿನ ಆರು ತಿಂಗಳಲ್ಲಿ ಜಾಗತಿಕವಾಗಿ ಸುಮಾರು 4,51,000 ಹೆಚ್ಚುವರಿ ಸಾವುಗಳು ಸಂಭವಿಸುವ ಭೀತಿಯಿದೆ. ಈ ಜಾಗತಿಕ ಹವಾಮಾನ ದುರಂತದಲ್ಲಿ ಭಾರತ ಒಂದರಲ್ಲೇ ಸುಮಾರು 15,800 ಜನರು ಅತಿಯಾದ ಶಾಖಕ್ಕೆ ಬಲಿಯಾಗಲಿದ್ದಾರೆ ಎಂದು ಅಧ್ಯಯನವು ಶಾಕಿಂಗ್ ಮಾಹಿತಿ ನೀಡಿದೆ.

Super El Niño: ಡಿಸೆಂಬರ್‌ನಿಂದ ಫೆಬ್ರವರಿಗೆ ಹೆಚ್ಚು ಅಪಾಯ
ಭಾರತದಲ್ಲಿ ಅಂದಾಜಿಸಲಾಗಿರುವ ಸಾವುಗಳ ಪೈಕಿ ಸುಮಾರು ಅರ್ಧದಷ್ಟು ಡಿಸೆಂಬರ್ 2026ರಿಂದ ಫೆಬ್ರವರಿ 2027ರ ಮೂರು ತಿಂಗಳ ಅವಧಿಯಲ್ಲಿ ಸಂಭವಿಸಬಹುದು ಎಂದು ಅಧ್ಯಯನ ತಿಳಿಸಿದೆ. ಬೇಸಿಗೆ ಆರಂಭವಾದ ಬಳಿಕವೂ ತಾಪಮಾನ ಸಂಬಂಧಿತ ಪರಿಣಾಮ ಮುಂದುವರಿಯುವ ಸಾಧ್ಯತೆಯನ್ನು ಸಂಶೋಧಕರು ಉಲ್ಲೇಖಿಸಿದ್ದಾರೆ.
ಅಧ್ಯಯನದ ಪ್ರಕಾರ, ಎಲ್ ನಿನೋ ಪರಿಣಾಮದಿಂದ ಮುಂಬರುವ ತಿಂಗಳಲ್ಲಿ ಜಾಗತಿಕ ಭೂಭಾಗದ ತಾಪಮಾನ ಸಾಮಾನ್ಯಕ್ಕಿಂತ ಸುಮಾರು 1.2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಬಹುದು. ಸಾಮಾನ್ಯ ವರ್ಷಕ್ಕೆ ಹೋಲಿಸಿದರೆ ಅತ್ಯಂತ ಬಿಸಿಯಾದ ದಿನಗಳ ಸಂಖ್ಯೆ ಸುಮಾರು 44% ಹೆಚ್ಚಾಗಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.
ಯಾವ ಪ್ರದೇಶಗಳಲ್ಲಿ ಹೆಚ್ಚು ಪರಿಣಾಮ?
ಎಲ್ ನಿನೋ ಎಂದರೆ ಪೂರ್ವ ಪೆಸಿಫಿಕ್ ಮಹಾಸಾಗರದ ಸಮುದ್ರ ಮೇಲ್ಮೈ ತಾಪಮಾನ ಅಸಾಮಾನ್ಯವಾಗಿ ಏರಿಕೆಯಾಗುವ ನೈಸರ್ಗಿಕ ಹವಾಮಾನ ವಿದ್ಯಮಾನ. ಇದು ಸಾಮಾನ್ಯವಾಗಿ ಎರಡುರಿಂದ ಏಳು ವರ್ಷಗಳ ಅಂತರದಲ್ಲಿ ಸಂಭವಿಸಬಹುದು ಮತ್ತು ಜಾಗತಿಕ ತಾಪಮಾನ ಹಾಗೂ ಮಳೆಯ ಮಾದರಿಗಳ ಮೇಲೆ ಪರಿಣಾಮ ಬೀರಬಹುದು.
ಅಧ್ಯಯನದ ಅಂದಾಜಿನ ಪ್ರಕಾರ, ಜಾಗತಿಕವಾಗಿ Global South ಪ್ರದೇಶಗಳು ಹೆಚ್ಚಿನ ಪರಿಣಾಮ ಎದುರಿಸಬಹುದು. ಆಫ್ರಿಕಾದ ಸಾಹೆಲ್ ಪ್ರದೇಶದಲ್ಲಿ ಸುಮಾರು 66,800 ಹೆಚ್ಚುವರಿ ಸಾವುಗಳು ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ. ಇದರಲ್ಲಿ ನೈಜೀರಿಯಾದಲ್ಲೇ ಸುಮಾರು 31,400 ಸಾವುಗಳ ಅಂದಾಜಿದೆ.
ಇದೇ ರೀತಿ ಫಿಲಿಪೈನ್ಸ್, ವಿಯೆಟ್ನಾಂ, ಥಾಯ್ಲೆಂಡ್ ಮತ್ತು ಕಾಂಬೋಡಿಯಾಗಳಲ್ಲಿ ಒಟ್ಟಾಗಿ ಸುಮಾರು 19,400, ಇಂಡೋನೇಷ್ಯಾದಲ್ಲಿ 19,300 ಮತ್ತು ಬ್ರೆಜಿಲ್‌ನಲ್ಲಿ ಸುಮಾರು 13,300 ಹೆಚ್ಚುವರಿ ಸಾವುಗಳ ಅಂದಾಜನ್ನು ಅಧ್ಯಯನ ನೀಡಿದೆ.
ಸಾವುಗಳನ್ನು ತಡೆಯಲು ಸಾಧ್ಯವೇ?
ಸಂಶೋಧಕರು ತಕ್ಷಣದ ಮುನ್ನೆಚ್ಚರಿಕಾ ಕ್ರಮಗಳಿಗೆ ಒತ್ತು ನೀಡಿದ್ದಾರೆ. ಮುಂಚಿತವಾಗಿ ಹೀಟ್‌ವೇವ್ ಎಚ್ಚರಿಕೆ ನೀಡುವುದು, ದುರ್ಬಲ ವರ್ಗಗಳಿಗೆ ಆರೋಗ್ಯ ಸೇವೆ ತಲುಪಿಸುವುದು, Cooling Centres ಮತ್ತು Hydration Stations ಸ್ಥಾಪಿಸುವುದು, ಹೊರಾಂಗಣದಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ರಕ್ಷಣೆ ನೀಡುವುದು ಹಾಗೂ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗಳ ಸಾಮರ್ಥ್ಯ ಹೆಚ್ಚಿಸುವುದು ಮುಂತಾದ ಕ್ರಮಗಳಿಂದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನ ತಿಳಿಸಿದೆ.
ಹೀಗಾಗಿ 15,800 ಮತ್ತು 4.51 ಲಕ್ಷ ಎಂಬ ಸಂಖ್ಯೆಗಳು ಭವಿಷ್ಯದಲ್ಲಿ ಖಚಿತವಾಗಿ ಸಂಭವಿಸುವ ಸಾವುಗಳ ಸಂಖ್ಯೆ ಎಂದು ಪರಿಗಣಿಸಬಾರದು. ಎಲ್ ನಿನೋದ ತೀವ್ರತೆ, ಸ್ಥಳೀಯ ತಾಪಮಾನ, ಸಾರ್ವಜನಿಕ ಆರೋಗ್ಯ ಸಿದ್ಧತೆ ಮತ್ತು ತುರ್ತು ಪ್ರತಿಕ್ರಿಯೆ ಸೇರಿದಂತೆ ಹಲವು ಅಂಶಗಳ ಮೇಲೆ ವಾಸ್ತವಿಕ ಪರಿಣಾಮ ಅವಲಂಬಿತವಾಗಿರುತ್ತದೆ.


Click it and Unblock the Notifications
