ಕ್ರಿಶ್ಚಿಯನ್‌ಗೆ ಮತಾಂತರಗೊಳ್ಳುವ ಹಿಂದೂಗಳಿಗೆ ಮೀಸಲಾತಿ ನಿಲ್ಲಿಸಿ; ವಿಎಚ್‌ಪಿ
ನವದೆಹಲಿ, ಅ.20: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವ ಹಿಂದೂಗಳಿಗೆ ಮೀಸಲಾತಿಯ ಪ್ರಯೋಜನವನ್ನು ನಿಲ್ಲಿಸುವಂತೆ ವಿಶ್ವ ಹಿಂದೂ ಪರಿಷತ್ ಸಂಘಟನೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿಜಯ್ ಶಂಕರ್ ತಿವಾರಿ ಪ್ರಕಾರ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರು ಇನ್ನೂ ತಮ್ಮ ಹಿಂದೂ ಹೆಸರುಗಳು ಮತ್ತು ರುಜುವಾತುಗಳನ್ನು ದಾಖಲೆಗಳಲ್ಲಿ ಬಳಸುತ್ತಿದ್ದಾರೆ. ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ನೀಡಿರುವ ಮೀಸಲಾತಿಯಿಂದ ಲಾಭ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
"ಕೇಂದ್ರ ಸರ್ಕಾರವು ಎಸ್‌ಸಿ ಮತ್ತು ಎಸ್‌ಟಿ ಸಮುದಾಯದಿಂದ ಬಂದವರು ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದಾಗ ಮೀಸಲಾತಿ ಪ್ರಯೋಜನಗಳನ್ನು ಪಡೆಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಯೋಜನೆಯನ್ನು ರೂಪಿಸಬೇಕು ಮತ್ತು ಸಮೀಕ್ಷೆ ಮಾಡಬೇಕು" ಎಂದು ವಿಜಯ್ ಶಂಕರ್ ತಿವಾರಿ ಹೇಳಿದ್ದಾರೆ.

ಮತಾಂತರವಾಗಿ ಹಿಂದೂ ಧರ್ಮ ಬಿಟ್ಟು ಕ್ರಿಶ್ಚಿಯನ್ ಧರ್ಮಕ್ಕೆ ಹೋಗುವವರು ಪಡೆಯುತ್ತಿರುವ ಮೀಸಲಾತಿ ತೆಗೆಯುವಂತೆ ಮುಂದಿನ ದಿನಗಳಲ್ಲಿ ತಮ್ಮ ವಿಶ್ವ ಹಿಂದೂ ಪರಿಷತ್ ಸಂಘಟನೆ ಜಾಗೃತಿ ಅಭಿಯಾನವನ್ನು ಕೈಗೊಳ್ಳಲಿದೆ ಎಂದು ವಿಜಯ್ ಶಂಕರ್ ತಿವಾರಿ ಹೇಳಿದ್ದಾರೆ.
ವಿಎಚ್‌ಪಿಯ ಸ್ಥಳೀಯ ವಕ್ತಾರ ಪ್ರಭಾತ್ ಶರ್ಮಾ ಮಾತನಾಡಿ, "ಎಸ್‌ಸಿ ಮತ್ತು ಎಸ್‌ಟಿ ವರ್ಗದ ಜನರು ಕ್ರಿಶ್ಚಿಯನ್ ಧರ್ಮವನ್ನು ಅಳವಡಿಸಿಕೊಂಡಿದ್ದರೂ ಹೆಸರು ಮತ್ತು ಇತರ ರುಜುವಾತುಗಳನ್ನು ಬದಲಾಯಿಸದ ಅನೇಕ ಪ್ರಕರಣಗಳಿವೆ. ಈ ದಾಖಲೆಗಳ ಆಧಾರದ ಮೇಲೆ ಅವರು ಮೀಸಲಾತಿ ಪಡೆಯುತ್ತಿದ್ದಾರೆ. ಇದನ್ನು ನಿಲ್ಲಿಸಬೇಕು," ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇತ್ತಿಚೆಗೆ ಈ ಬಗ್ಗೆ ಮಾತನಾಡಿದ್ದ ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಕೇಂದ್ರ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ಎಸ್‌ಸಿ/ಎಸ್‌ಟಿಗಳ ಕಾನೂನುಬದ್ಧ ಹಕ್ಕುಗಳನ್ನು ಮತಾಂತರದಿಂದ ಕಸಿದುಕೊಳ್ಳಲು ವಿಎಚ್‌ಪಿ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು.
ಮತಾಂತರಗೊಂಡ ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿ ನೀಡುವ ಪಿತೂರಿಗಳನ್ನು ಬಯಲಿಗೆಳೆಯಲು ವಿಎಚ್‌ಪಿ ದೇಶಾದ್ಯಂತ ವ್ಯಾಪಕ ಜನಜಾಗೃತಿ ಅಭಿಯಾನವನ್ನು ಕೈಗೊಳ್ಳಲು ಯೋಜಿಸುತ್ತಿದೆ ಎಂದು ಅಲೋಕ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.












Click it and Unblock the Notifications