ಶ್ರೀರಂಗಪಟ್ಟಣ- ಅರಸೀಕೆರೆ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿ: ಹೆಚ್ ಡಿ ಕುಮಾರಸ್ವಾಮಿ
ನವದೆಹಲಿ, ಜನವರಿ 09: ಐತಿಹಾಸಿಕ ಪ್ರವಾಸಿ ತಾಣ ಶ್ರೀರಂಗಪಟ್ಟಣ - ಅರಸಿಕೆರೆ ನಡುವಿನ ರಾಜ್ಯ ಹೆದ್ದಾರಿ 7 ಅನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಒಪ್ಪಿಗೆ ನೀಡಿದ್ದಾರೆ.
ಕೆ ಆರ್ ಪೇಟೆ ಶಾಸಕ ಹೆಚ್.ಟಿ.ಮಂಜುನಾಥ್ ಅವರ ಮನವಿ ಮೇರೆಗೆ ಗಡ್ಕರಿ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದ ಮಂಡ್ಯ ಸಂಸದರು ಆಗಿರುವ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಯೋಜನೆಯ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದರು. ಶ್ರೀರಂಗಪಟ್ಟಣ - ಕೆ.ಆರ್.ಪೇಟೆ - ಪಾಂಡವಪುರ - ಚನ್ನರಾಯಪಟ್ಟಣ - ಅರಸಿಕೆರೆ ನಡುವಿನ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.

ಈ ರಸ್ತೆಯು ತಾಲೂಕು ಕೇಂದ್ರಗಳಿಂದ ನಗರಗಳಿಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದ್ದು, ಆರ್ಥಿಕವಾಗಿ ದೊಡ್ಡ ಕೊಡುಗೆಯನ್ನು ನೀಡಲಿದೆ. ಮುಖ್ಯವಾಗಿ ಈ ಭಾಗದಲ್ಲಿ ಪ್ರವಾಸೋದ್ಯಮ, ಕೃಷಿ, ಕೈಗಾರಿಕೆ ಕ್ಷೇತ್ರಗಳಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಕೇಂದ್ರ ಸಚಿವರು ನಿತಿನ್ ಗಡ್ಕರಿ ಅವರಿಗೆ ಮನವರಿಕೆ ಮಾಡಿಕೊಟ್ಟರು. ಅಲ್ಲದೆ, ಕೃಷಿ ಉತ್ಪನ್ನಗಳಾದ ಹಾಲು, ತರಕಾರಿ ಮುಂತಾದವುಗಳನ್ನು ಗ್ರಾಮೀಣ ಪ್ರದೇಶಗಳಿಂದ ಮೈಸೂರು, ಬೆಂಗಳೂರು, ಹಾಸನ ಮತ್ತಿತರೆ ನಗರಗಳಿಗೆ ಪೂರೈಸಲು ಅನುಕೂಲವಾಗಲಿದೆ. ಜತೆಗೆ, ಶ್ರೀರಂಗಪಟ್ಟಣ, ಜಗದ್ವಿಖ್ಯಾತ ಪಕ್ಷಿಧಾಮ ರಂಗನತಿಟ್ಟು ಸೇರಿದಂತೆ ಹಲವಾರು ಪ್ರವಾಸಿ ತಾಣಗಳನ್ನು ತಲುಪಲು ಜನತೆಗೆ ಅನುಕೂಲವಾಗುತ್ತದೆ ಎಂಬ ಅಂಶವನ್ನು ಕುಮಾರಸ್ವಾಮಿ ಅವರು ಸಾರಿಗೆ ಸಚಿವರ ಗಮನಕ್ಕೆ ತಂದರು.
ಈ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಅಭಿವೃದ್ಧಿ ಮಾಡಿದರೆ ಮೈಸೂರು, ಮಂಡ್ಯ, ಹಾಸನ ಜಿಲ್ಲೆಯ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಈ ಬಗ್ಗೆ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅವರು ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನೂ ಗಣಿಗಾರಿಕೆ ಮೇಲೆ ಕರ್ನಾಟಕ ಸರಕಾರ ಹಲವು ಪಟ್ಟು ಹೆಚ್ಚುವರಿ ತೆರಿಗೆ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಗಣಿ ಮತ್ತು ಉಕ್ಕು ವಲಯಗಳ ಮೇಲೆ ಬೀರಬಹುದಾದ ಪ್ರತಿಕೂಲಕರ ಪರಿಣಾಮಗಳ ಬಗ್ಗೆ ಕೇಂದ್ರದ ಉಕ್ಕು ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದ ಕೇಂದ್ರದ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರೊಂದಿಗೆ ಮಹತ್ವದ ಸಭೆ ನಡೆಸಿದರು. ನವದೆಹಲಿಯ ಬೃಹತ್ ಕೈಗಾರಿಕೆ ಸಚಿವಾಲಯದಲ್ಲಿ ಗುರುವಾರ ನಡೆದ ಈ ಸಭೆಯಲ್ಲಿ ಉಕ್ಕು ಸಚಿವಾಲಯದ ಕಾರ್ಯದರ್ಶಿ ಸಂದೀಪ್ ಪೌಂಡ್ರಿಕ್, ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮದ ಅಧ್ಯಕ್ಷ ಅಮಿತವ್ ಮುಖರ್ಜಿ, ಕಾನೂನು ಸಚಿವಾಲಯದ ಅಧಿಕಾರಿಗಳು ಹಾಗೂ ಹಲವು ಗಣಿ ಕಂಪನಿಗಳ ಉನ್ನತಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ರಾಜ್ಯ ಸರ್ಕಾರ ಹೆಚ್ಚುವರಿ ತೆರಿಗೆ ವಿಧಿಸುತ್ತಿರುವ ಪರಿಣಾಮ ದೇಶಿಯ ಉಕ್ಕು ಮತ್ತು ಗಣಿ ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಒಟ್ಟಾರೆ ಸಾಧಕ ಬಾಧಕಗಳ ಬಗ್ಗೆ ಸಚಿವ ಮೇಘವಾಲ್ ಅವರೊಂದಿಗೆ ಮಾಹಿತಿ ಹಂಚಿಕೊಂಡರು. ಸಭೆಯಲ್ಲಿ ಕೇಂದ್ರದ ಉಕ್ಕು ಸಚಿವರು ಹಲವು ಮಹತ್ವದ ಅಂಶಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. 2047ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತ ಸಾಕಾರ ಮಾಡುವ ಗುರಿ ಹೊಂದಿದ್ದಾರೆ. ಜಗತ್ತಿನ ಮೂರನೇ ಬೃಹತ್ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮುವ ಬಗ್ಗೆ ಪ್ರಧಾನಿಗಳು ನಿರ್ಣಾಯಕ ಹೆಜ್ಜೆಗಳನ್ನು ಇಡುತ್ತಿದ್ದಾರೆ.
ಮುಖ್ಯವಾಗಿ 2030ನೇ ವರ್ಷದ ವೇಳೆಗೆ ಭಾರತವು ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡುವ ಗುರಿಯನ್ನು ನಿಗದಿ ಮಾಡಿದ್ದಾರೆ. ಇಂಥ ಮಹತ್ವಾಕಾಂಕ್ಷೆ ಗುರಿಗಳು ನಮ್ಮ ಮುಂದೆ ಇರುವಾಗ ಗಣಿ ಮತ್ತು ಉಕ್ಕು ಕ್ಷೇತ್ರದಲ್ಲಿರುವ ಅಡೆತಡೆಗಳನ್ನು ನಿವಾರಣೆ ಮಾಡಿಕೊಳ್ಳಬೇಕಾಗಿದೆ ಎಂದು ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.












Click it and Unblock the Notifications