ದಕ್ಷಿಣ ಭಾರತದ ಮೊದಲ ಅಂತರ ರಾಜ್ಯ ಮೆಟ್ರೋ: ಬಿಡ್ ಆಹ್ವಾನಿಸಿದ ಚೆನ್ನೈ ಮೆಟ್ರೋ ರೈಲು ಕಾರ್ಪೊರೇಷನ್!
ಬೆಂಗಳೂರು, ಆಗಸ್ಟ್. 02: ದಕ್ಷಿಣ ಭಾರತದ ಮೊದಲ ಅಂತರ ರಾಜ್ಯ ಮೆಟ್ರೋ ರೈಲು ವ್ಯವಸ್ಥೆಗೆ ಅಡಿಪಾಯ ಹಾಕಲು ತಮಿಳುನಾಡಿನ ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ (CMRL) ಮುಂದಾಗಿದೆ. ಆಗಸ್ಟ್ 1 ರಂದು ಬೆಂಗಳೂರು ಮೆಟ್ರೋವನ್ನು ತಮಿಳುನಾಡಿನ ಹೊಸೂರಿಗೆ ವಿಸ್ತರಿಸಲು ಇರುವ ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸಲು ಟೆಂಡರ್ ಅನ್ನು ಆಹ್ವಾನಿಸಿದೆ.
ಕೈಗಾರಿಕಾ ಕೇಂದ್ರವಾದ ಹೊಸೂರಿನಿಂದ ಬೆಂಗಳೂರಿನ ಬೊಮ್ಮಸಂದ್ರವನ್ನು ಸಂಪರ್ಕಿಸುವ ಈ ಮೆಟ್ರೋ ಯೋಜನೆ ದಕ್ಷಿಣ ಭಾರತದ ಮೊದಲ ಅಂತರ ರಾಜ್ಯ ಮೆಟ್ರೋವಾಗಲಿದೆ. ಈ ವರ್ಷದ ಫೆಬ್ರವರಿಯಲ್ಲಿ ಕಾರ್ಯಸಾಧ್ಯತೆಯ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಇದಾಗಿ ಐದು ತಿಂಗಳ ನಂತರ ಟೆಂಡರ್ ಜಾಹೀರಾತು ನೀಡಲಾಗಿದೆ.

ಈ ಅಧ್ಯಯನಕ್ಕೆ ಧನಸಹಾಯ ನೀಡುತ್ತಿರುವ ತಮಿಳುನಾಡು ಸರ್ಕಾರವು ಮೆಟ್ರೋ ವ್ಯವಸ್ಥೆಯ ಮೂಲಕ ಹೊಸೂರನ್ನು ಬೆಂಗಳೂರಿನೊಂದಿಗೆ ಸಂಪರ್ಕಿಸುವ ಸಾಧ್ಯತೆಯನ್ನು ಅನ್ವೇಷಿಸಲು ಆಸಕ್ತಿಯನ್ನು ವ್ಯಕ್ತಪಡಿಸಿ ಕೇಂದ್ರಕ್ಕೆ ಪತ್ರ ಬರೆದಿತ್ತು. ಕಂದ್ರ ಸರ್ಕಾರದಿಂದ ಅನುಮೋದನೆ ದೊರೆತಿದೆ. ಟೆಂಡರ್ ದಾಖಲೆಯನ್ನು ಪ್ರಕಟಿಸುವ ಮೊದಲು ಇದನ್ನು ಬೆಂಗಳೂರು ಮೆಟ್ರೋ ಅಧಿಕಾರಿಗಳು ಸಹ ನೋಡಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಹೊಸೂರಿನಿಂದ ಬೆಂಗಳೂರಿನೊಂದಿಗೆ ಸಂಪರ್ಕ ಕಲ್ಪಿಸುವ ಬೃಹತ್ ಕ್ಷಿಪ್ರ ಸಾರಿಗೆ ವ್ಯವಸ್ಥೆಯನ್ನು ಪರಿಚಯಿಸಲು ವಿವರವಾದ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲು ಹೆಸರಾಂತ, ಅನುಭವಿ, ಆರ್ಥಿಕವಾಗಿ ಸದೃಢ ಮತ್ತು ಅರ್ಹ ಸಲಹೆಗಾರರು ಅರ್ಜಿ ಸಲ್ಲಿಸಬಹುದು ಎಂದು ಟೆಂಡರ್‌ನಲ್ಲಿ ಹೇಳಲಾಗಿದೆ. ಬಿಡ್‌ಗಳನ್ನು ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದ್ದು, ನಂತರ ಅವುಗಳನ್ನು ಸೆಪ್ಟೆಂಬರ್ 1 ರಂದು ಪರಿಶೀಲನೆಗಾಗಿ ತೆರೆಯಲಾಗುತ್ತದೆ.
ಅಶೋಕ್ ಲೇಲ್ಯಾಂಡ್, ಟೈಟಾನ್ ಮತ್ತು ಟಿವಿಎಸ್ ಮೋಟಾರ್ಸ್‌ನಂತಹ ಉನ್ನತ ವ್ಯಾಪಾರ ಸಂಸ್ಥೆಗಳಿಗೆ ನೆಲೆಯಾಗಿರುವ ಬೊಮ್ಮಸಂದ್ರ ನಿಲ್ದಾಣದಿಂದ ಹೊಸೂರಿಗೆ ಹೊಸ ಮೆಟ್ರೋ ಸಂಪರ್ಕವನ್ನು ನಿರ್ಮಿಸುವ ಯೋಜನೆ ಇದಾಗಿದೆ. ಈ ಯೋಜನೆ ಅಂದುಕೊಂಡಂತೆ ಆದರೆ ಬೆಂಗಳೂರು - ಹೊಸೂರು ಮೆಟ್ರೋ ಸಂಪರ್ಕವು ದಕ್ಷಿಣ ಭಾರತದ ಮೊದಲ ಅಂತರರಾಜ್ಯ ಮೆಟ್ರೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಬೆಂಗಳೂರು - ಹೊಸೂರು ಮೆಟ್ರೋ ಉದ್ದೇಶಿತ ವಿಸ್ತರಣೆಯು 20.5 ಕಿಮೀ ಉದ್ದವಿದ್ದು ಅದರಲ್ಲಿ 11.7 ಕಿಲೋಮೀಟರ್ ಕರ್ನಾಟಕದಲ್ಲಿದೆ. ಉಳಿದ 8.8 ಕಿಮೀ ತಮಿಳುನಾಡಿನಲ್ಲಿದೆ. ಇದು ಕಾರ್ಯಸಾಧ್ಯತೆಯ ಅಧ್ಯಯನಕ್ಕೆ ಧನಸಹಾಯ ನೀಡುತ್ತದೆ. ಹೊಸೂರು ಮತ್ತು ಬೆಂಗಳೂರು ನಡುವಿನ ಮೆಟ್ರೋ ಸಂಪರ್ಕವು 2,000 ಕ್ಕೂ ಹೆಚ್ಚು ಎಂಎಸ್‌ಎಂಇಗಳಿಗೆ ನೆಲೆಯಾಗಿರುವ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ ಎಂದು ತಮಿಳುನಾಡು ಸರ್ಕಾರ ಆಶಯ ವ್ಯಕ್ತಪಡಿಸಿದೆ.
ಕಾರ್ಯಸಾಧ್ಯತೆಯ ಅಧ್ಯಯನಕ್ಕೆ ತಮಿಳುನಾಡು ಸರ್ಕಾರವು ಶೇಕಡಾ 100 ರಷ್ಟು ಹಣವನ್ನು ನೀಡಲಿದೆ. ಆದರೆ ಮೆಟ್ರೋ ನೆಟ್ವರ್ಕ್‌ನ ಹಣಕಾಸಿನ ಮಾದರಿಯನ್ನು ಇನ್ನೂ ನಿರ್ಧರಿಸಲಾಗಿಲ್ಲ. ಆದರೂ, ಕರ್ನಾಟಕ ಮತ್ತು ತಮಿಳುನಾಡು ತಮ್ಮ ರಾಜ್ಯಗಳಲ್ಲಿನ ಯೋಜನೆಯ ಉದ್ದದ ವೆಚ್ಚವನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಜೊತೆಗೆ ಭರಿಸುವ ಸಾಧ್ಯತೆಯಿದೆ.
ಕರ್ನಾಟಕ ಸರ್ಕಾರವು 2022 ರಲ್ಲಿ ಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದು ಸಾವಿರಾರು ಜನರು ಹೊಸೂರು ಮತ್ತು ಬೆಂಗಳೂರು ನಡುವೆ ಹೆಚ್ಚು ತೊಂದರೆಯಿಲ್ಲದೆ ಪ್ರಯಾಣಿಸಲು ಸಹಾಯ ಮಾಡುವ ಯೋಜನೆಗೆ ತನ್ನ ಒಪ್ಪಿಗೆಯನ್ನು ನೀಡಿತ್ತು. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಸಿಎಂಆರ್‌ಎಲ್‌ಗೆ 75 ಲಕ್ಷ ರೂಪಾಯಿ ಮಂಜೂರು ಮಾಡಿ ಕಾರ್ಯಸಾಧ್ಯತಾ ಅಧ್ಯಯನ ನಡೆಸುವಂತೆ ಸೂಚಿಸಿತ್ತು. ಹೊಸೂರಿನಿಂದ ವಿಮಾನ ಸಂಪರ್ಕವನ್ನು ಪ್ರಾರಂಭಿಸಲು ತಮಿಳುನಾಡು ಸರ್ಕಾರ ಚಿಂತನೆ ನಡೆಸುತ್ತಿರುವ ಸಮಯದಲ್ಲಿಯೇ ಈ ಹೊಸ ಯೋಜನೆಯೊಂದರ ಕಾರ್ಯಸಾಧ್ಯತೆಯ ಅಧ್ಯಯನವು ಮುನ್ನೆಲೆಗೆ ಬಂದಿದೆ.












Click it and Unblock the Notifications