South India Alcohol Trend: ಮದ್ಯ ಪ್ರಿಯರಲ್ಲಿ ದಕ್ಷಿಣ ಭಾರತೀಯರೇ ಮುಂಚೂಣಿ: ಟ್ರೆಂಡ್‌ನಲ್ಲೂ ಬೆಂಗಳೂರು ನಂ.1 ಯಾಕೆ?
ದಕ್ಷಿಣ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿಯೇ ಅತೀ ಹೆಚ್ಚು ಮದ್ಯ ಮಾರಾಟವಾಗುತ್ತಿದೆ. ದಕ್ಷಿಣ ಭಾರತದ ಪಂಚ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಮದ್ಯ ಪ್ರಿಯರ ಸಂಖ್ಯೆ ದೊಡ್ಡದಿದೆ. ಭಾರತದ ಒಟ್ಟು ಜನಸಂಖ್ಯೆಯ ಕೇವಲ ಶೇ 18% ರಷ್ಟಿದ್ದರೂ, ದೇಶದ ಸಂಘಟಿತ ಮದ್ಯ ಮಾರುಕಟ್ಟೆಯ ಒಟ್ಟು ಮೌಲ್ಯ ಮತ್ತು ಮಾರಾಟ ಪ್ರಮಾಣದಲ್ಲಿ ಶೇ.58ಕ್ಕೂ ಹೆಚ್ಚಿನ ಪಾಲು ದಕ್ಷಿಣ ಭಾರತದ್ದೇ ಇದೆ!
ಭಾರತೀಯ ಮದ್ಯಪಾನ ಕಂಪನಿಗಳ ಒಕ್ಕೂಟ (CIABC)ಈಚೆಗೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಭಾರತವು ವಾರ್ಷಿಕವಾಗಿ ಸುಮಾರು 40 ಕೋಟಿ ಕೇಸ್‌ಗಳಷ್ಟು ಭಾರತೀಯ ನಿರ್ಮಿತ ವಿದೇಶಿ ಮದ್ಯವನ್ನು (IMFL) ಬಳಸುತ್ತದೆ. ಇದು 2 ಲಕ್ಷ ಕೋಟಿ ರೂ. ಗಿಂತ ಹೆಚ್ಚು ಮೌಲ್ಯದ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ. ಸುಮಾರು 24 ಕೋಟಿ ಜನರಿರುವ ಉತ್ತರ ಪ್ರದೇಶದಲ್ಲಿ ವಾರ್ಷಿಕವಾಗಿ ಸುಮಾರು 2.5 ಕೋಟಿ ಕೇಸ್‌ಗಳಷ್ಟು ಮದ್ಯ ಮಾರಾಟವಾಗುತ್ತದೆ. ಆದರೆ, 8 ಕೋಟಿ ಜನರಿರುವ ತಮಿಳುನಾಡು, ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಅಂದರೆ 2.5 ಪಟ್ಟು ಹೆಚ್ಚು 6.47 ಕೋಟಿ ಕೇಸ್‌ಗಳಷ್ಟು ಮದ್ಯ ಮಾರಾಟವಾಗುತ್ತದೆ.

ದಕ್ಷಿಣ ಭಾರತದಲ್ಲಿ ಮದ್ಯ ಮಾರಾಟ ಹೆಚ್ಚು ಯಾಕೆ ?
ದಕ್ಷಿಣ ಭಾರತದಲ್ಲಿ ಮದ್ಯ ಮಾರಾಟ ಹೆಚ್ಚಾಗಿ ಮದ್ಯ ಮಾರಾಟವಾಗುವುದರ ಹಿಂದೆ ಈ ರಾಜ್ಯಗಳ ಕಾನೂನು ಮತ್ತು ನಿಖರ ದಾಖಲೆಗಳು ಸಹ ಮುಖ್ಯ ಕಾರಣವಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಮುಂಬೈ ಸೇರಿದಂತೆ ದೊಡ್ಡ ನಗರಗಳು ಮದ್ಯದ, ವಿಶೇಷವಾಗಿ ಪ್ರೀಮಿಯಂ ಬ್ರ್ಯಾಂಡ್‌ಗಳ ಪ್ರಮುಖ ಮಾರುಕಟ್ಟೆಗಳಾಗಿವೆ.
1. ಮದ್ಯ ಮಾರಾಟದಲ್ಲಿ ಸರ್ಕಾರದ ನಿಯಂತ್ರಣ: ದಕ್ಷಿಣ ಭಾರತದಲ್ಲಿ ಮದ್ಯ ಮಾರಾಟದ ವಿಚಾರದಲ್ಲಿ ಸರ್ಕಾರದ ನಿಯಂತ್ರ ಹೆಚ್ಚು ಹಾಗೂ ವ್ಯವಸ್ಥಿತವಾಗಿದೆ. ಸರ್ಕಾರಗಳೇ ಮದ್ಯದ ಚಿಲ್ಲರೆ ಮಾರಾಟವನ್ನು ನೇರವಾಗಿ ನಿಯಂತ್ರಿಸುತ್ತವೆ. ತಮಿಳುನಾಡಿನ TASMAC ಮತ್ತು ಕರ್ನಾಟಕದ KSBCL ಇದಕ್ಕೆ ಉದಾಹರಣೆ. ಇದರಿಂದ ಅಕ್ರಮ ಮಾರಾಟ ಕಡಿಮೆಯಾಗುತ್ತದೆ ಮತ್ತು ಮದ್ಯವನ್ನು ಪರಿಣಾಮಕಾರಿಯಾಗಿ ಪೂರೈಸಲು ಉತ್ತಮ ವಿತರಣಾ ವ್ಯವಸ್ಥೆ ಇಲ್ಲಿದೆ.
2. ಪ್ರಮುಖ ಆದಾಯ ಮೂಲ: ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಮದ್ಯ ಪ್ರಮುಖ ಆದಾಯ ಮೂಲವಾಗಿದೆ. ಮದ್ಯದ ಅಬಕಾರಿ ತೆರಿಗೆಯು GST ಹೊರಗೆ ತೆರಿಗೆ ಆದಾಯದ ನಿರ್ಣಾಯಕ ಮೂಲವಾಗಿದೆ.
3. ದಕ್ಷಿಣ ಭಾರತದ ನಗರೀಕರಣ - ಐಟಿ ಬಿಟಿಯೂ ಕಾರಣ: ದಕ್ಷಿಣ ಭಾರತದ ಪ್ರಮುಖ ಮುಂದುವರಿದ ನಗರಗಳಲ್ಲಿ ಅತಿಯಾದ ನಗರೀಕರಣ ಮತ್ತು ಐಟಿ - ಬಿಟಿಯಂತಹ ಪ್ರತಿಷ್ಠಿತ ಉದ್ಯೋಗ ಕ್ಷೇತ್ರಗಳು ಸಹ ಮದ್ಯ ಹೆಚ್ಚು ಮಾರಾಟಕ್ಕೆ ಕಾರಣವಾಗಿದೆ. ಬೆಂಗಳೂರು ಮತ್ತು ಹೈದರಾಬಾದ್‌ನಂತಹ ತಂತ್ರಜ್ಞಾನ ಕೇಂದ್ರಿತ ನಗರಗಳಲ್ಲಿ ಮದ್ಯ ಮಾರಾಟ ಹೆಚ್ಚು. ಪ್ರೀಮಿಯಂ ಮದ್ಯವನ್ನು ಸೇವಿಸುವವರ ಪ್ರಮಾಣ ಹೆಚ್ಚಾಗಿದೆ.
4. ದೈನಂದಿನ ಬಳಕೆ ಹೆಚ್ಚು: ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜನ ನಿತ್ಯವೂ ಮದ್ಯ ಸೇವನೆ ಮಾಡುವುದು ಇದೆ. NFHS-5 ದತ್ತಾಂಶವು ತೆಲಂಗಾಣದಂತಹ ರಾಜ್ಯಗಳಲ್ಲಿ ಪುರುಷ ಮದ್ಯ ಸೇವನೆಯ ದರವು ಶೇ. 43.3% ಹೊಂದಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಶೇ 18.8% ಹೆಚ್ಚಾಗಿದೆ.
ಮದ್ಯ ಮಾರಾಟದ ಪ್ರಮಾಣ ಹಾಗೂ ದಕ್ಷಿಣ ಭಾರತಕ್ಕೆ ಇದರಿಂದ ಬರುತ್ತಿರುವ ಆದಾಯ
ರಾಜ್ಯ ಮಾರಾಟದ ಮಾದರಿ ಕಾನೂನುಬದ್ಧ ವಯಸ್ಸು
ಕರ್ನಾಟಕ ಸರ್ಕಾರಿ (MSIL) + ಖಾಸಗಿ 21 ವರ್ಷ
ತಮಿಳುನಾಡು ಸಂಪೂರ್ಣ ಸರ್ಕಾರಿ (TASMAC) 21 ವರ್ಷ
ಕೇರಳ ಸಂಪೂರ್ಣ ಸರ್ಕಾರಿ (Bevco) 21 ವರ್ಷ
ತೆಲಂಗಾಣ ಖಾಸಗಿ ಲೈಸೆನ್ಸ್ ವ್ಯವಸ್ಥೆ 21 ವರ್ಷ
ಆಂಧ್ರಪ್ರದೇಶ ನಿಯಂತ್ರಿತ ಖಾಸಗಿ/ಸರ್ಕಾರಿ ವ್ಯವಸ್ಥೆ 21 ವರ್ಷ

ವಿಸ್ಕಿ, ರಮ್, ವೋಡ್ಕಾ, ಬ್ರಾಂಡಿ ಮತ್ತು ಜಿನ್ ಸೇರಿದಂತೆ ಭಾರತೀಯ ನಿರ್ಮಿತ ವಿದೇಶಿ ಮದ್ಯದ (IMFL) ಭಾರತದ ಮಾರುಕಟ್ಟೆಯು ವಿಶ್ವದ ಅತಿದೊಡ್ಡ ಸ್ಪಿರಿಟ್ ಮಾರುಕಟ್ಟೆಗಳಲ್ಲಿ ಒಂದಾಗಿ ಅಭಿವೃದ್ಧಿಗೊಂಡಿದೆ. ಕರ್ನಾಟಕವು ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಐಎಂಎಫ್ಎಲ್ ಸೇವಿಸುವ ರಾಜ್ಯವಾಗಿದೆ. ಇತ್ತೀಚಿನ ಹಣಕಾಸು ವರ್ಷದಲ್ಲಿ ಮಾರಾಟವು ಸುಮಾರು 6.88 ಕೋಟಿ ಪ್ರಕರಣಗಳೆಂದು ಅಂದಾಜಿಸಲಾಗಿದೆ.
ಭಾರತದಲ್ಲಿ ಯಾವ ರಾಜ್ಯದಲ್ಲಿ ಹೆಚ್ಚು ಮದ್ಯ ಸೇವಿಸುತ್ತಾರೆ ?
ಇನ್ನು ಭಾರತದಲ್ಲಿ ಹೆಚ್ಚು ಮದ್ಯ ಸೇವನೆ ಮಾಡುವವರಲ್ಲಿ ದಕ್ಷಿಣ ಭಾರತೀಯರು ಮುಂಚೂಣಿಯಲ್ಲಿದ್ದಾರೆ. ಸಾಮಾನ್ಯವಾಗಿ ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳಲ್ಲೇ ಮದ್ಯ ಸೇವನೆ ಹೆಚ್ಚು ಇರಬಹುದು ಎಂದು ಅನಿಸಬಹುದು. ಆದರೆ ಲಭ್ಯವಿರುವ ಅಂಕಿ- ಅಂಶಗಳು ಬೇರೆ ಚಿತ್ರಣವನ್ನೇ ನೀಡುತ್ತವೆ. ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಮದ್ಯ ಸೇವನೆ ಹೆಚ್ಚಾಗಿದೆ. ಇದಕ್ಕೆ ಆದಾಯ, ನಗರೀಕರಣ, ತೆರಿಗೆ ನೀತಿ ಮತ್ತು ಮದ್ಯ ಮಾರಾಟದ ವ್ಯವಸ್ಥೆ ಪ್ರಮುಖ ಕಾರಣಗಳಾಗಿವೆ.
ದಕ್ಷಿಣ ಭಾರತದಲ್ಲಿ ಹೆಚ್ಚು ಮದ್ಯ ಬಳಕೆ
ಭಾರತದ ಮದ್ಯ ಮಾರುಕಟ್ಟೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಪಾಲು ಗಮನಾರ್ಹವಾಗಿ ಹೆಚ್ಚಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕೇರಳ ಒಟ್ಟಾಗಿ ದೇಶದ ಸಂಘಟಿತ IMFL ಮಾರಾಟದ ಅರ್ಧಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿವೆ. ಇದಕ್ಕೆ ದೊಡ್ಡ ನಗರಗಳ ಸಂಖ್ಯೆ, ಜನರ ಖರೀದಿ ಸಾಮರ್ಥ್ಯ ಮತ್ತು ಸರ್ಕಾರದ ನಿಯಂತ್ರಣದಲ್ಲಿರುವ ಮದ್ಯ ಮಾರಾಟ ವ್ಯವಸ್ಥೆಗಳು ಪ್ರಮುಖ ಕಾರಣಗಳಾಗಿವೆ.
ಕರ್ನಾಟಕವೇ ಮೊದಲ ಸ್ಥಾನದಲ್ಲಿ
ಕರ್ನಾಟಕವು ದೇಶದಲ್ಲಿ ಅತಿ ಹೆಚ್ಚು IMFL ಮಾರಾಟವಾಗುವ ರಾಜ್ಯವಾಗಿದೆ. ಇತ್ತೀಚಿನ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ ಸುಮಾರು 6.88 ಕೋಟಿ ಕೇಸ್‌ಗಳ IMFL ಮಾರಾಟವಾಗಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ಕೇಂದ್ರಿತ ನಗರ ಆರ್ಥಿಕತೆ ಮತ್ತು ರಾಜ್ಯದ ಉತ್ತಮ ಮದ್ಯ ಮಾರಾಟ ಜಾಲ ಇದಕ್ಕೆ ಪ್ರಮುಖ ಕಾರಣಗಳಾಗಿವೆ.
ತಮಿಳುನಾಡು ಸುಮಾರು 6.47 ಕೋಟಿ ಕೇಸ್‌ಗಳ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ ಮದ್ಯ ಮಾರಾಟವು ಮುಖ್ಯವಾಗಿ ಸರ್ಕಾರದ ಟಾಸ್ಕ್‌ಮಾರ್ಕ್ ವ್ಯವಸ್ಥೆಯ ಮೂಲಕ ನಡೆಯುತ್ತದೆ. ಕರ್ನಾಟಕ ಮತ್ತು ತಮಿಳುನಾಡು ಎರಡೂ ಸೇರಿ ದೇಶದ ಒಟ್ಟು IMFL ಬಳಕೆಯ ಸುಮಾರು ಮೂರನೇ ಒಂದು ಭಾಗವನ್ನು ಹೊಂದಿವೆ.
ದಕ್ಷಿಣ ಭಾರತದದಲ್ಲಿ ಯಾವ ರಾಜ್ಯದಲ್ಲಿ ಎಷ್ಟು ಮದ್ಯ ಖರೀದಿ
ರಾಜ್ಯ; ಕೇಸ್ ಮದ್ಯ ಮಾರಾಟ
ಕರ್ನಾಟಕ 6.88 ಕೋಟಿ ಕೇಸ್‌ಗಳು
ತಮಿಳುನಾಡು 6.47 ಕೋಟಿ ಕೇಸ್‌ಗಳು
ತೆಲಂಗಾಣ: 3.71 ಕೋಟಿ ಕೇಸ್‌ಗಳು
ಆಂಧ್ರಪ್ರದೇಶ: 3.55 ಕೋಟಿ ಕೇಸ್‌ಗಳು
ಕೇರಳ: 2.29 ಕೋಟಿ ಕೇಸ್‌ಗಳು

ದಕ್ಷಿಣ ಭಾರತದಲ್ಲಿ ಯಾವ ರಾಜ್ಯದಲ್ಲಿ ಹೇಗಿದೆ ಮದ್ಯ ಸೇವನೆ ಪದ್ಧತಿ!
ಇನ್ನು ಭಾರತದಲ್ಲಿಯೇ ದಕ್ಷಿಣ ಭಾರತದಲ್ಲಿ ಮದ್ಯ ಸೇವನೆ ವಿಭಿನ್ನವಾಗಿದೆ. ಕರ್ನಾಟಕದಲ್ಲಿ ಹೊಸ ವರ್ಷ ಮೊದಲ ದಿನ ಹಾಗೂ ವರ್ಷಾಂತ್ಯದ ಕೊನೆಯ ದಿನ. ಕ್ರಿಸ್ಮಸ್ ಹಾಗೂ ರಜಾ ದಿನಗಳಲ್ಲಿ ಅತೀ ಹೆಚ್ಚು ಮದ್ಯ ಮಾರಾಟವಾಗುತ್ತದೆ. ಕೇರಳದಲ್ಲಿ ಓಣಂ, ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ದಿನ ಭಾರೀ ಮದ್ಯ ಮಾರಾಟವಾಗುತ್ತದೆ.
ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮದ್ಯ ಸೇವನೆ ಭಿನ್ನವಾಗಿದೆ. ಆಂಧ್ರಪ್ರದೇಶದಲ್ಲಿ ಮದ್ಯ ಬಳಕೆ ಮದ್ಯಮವಾಗಿದ್ದರೆ, ತೆಲಂಗಾಣದಲ್ಲಿ ಮದ್ಯ ಸೇವನೆ ಜಾಸ್ತಿ ಇದೆ. ತೆಲಂಗಾಣದಲ್ಲಿ ಮದುವೆ ಹಾಗೂ ಶುಭ ಸಮಾರಂಭಗಳಲ್ಲಿ ಮದ್ಯ ಸೇವನೆಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಇರುವಷ್ಟು ಪ್ರಸಿದ್ಧವಾಗಿದೆ! ಅಳಿಯನಿಗೆ ಮಾವ ಮದ್ಯ ಖರೀದಿ ಮಾಡಿಕೊಡುವುದು ಇಲ್ಲಿ ವಿಶೇಷ. ಮದುವೆಯಲ್ಲಿ ಮದ್ಯ ಸೇವನೆ ಇದೆ.
ಅಲ್ಲದೆ ಕೆಲವು ಮಹಿಳೆಯರು ಸಹ ವಿಶೇಷ ದಿನಗಳಲ್ಲಿ ಮದ್ಯ ಸೇವನೆ ಮಾಡುವುದು ತೆಲಂಗಾಣದಲ್ಲಿದೆ. ಉಳಿದಂತೆ ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ದಸರಾ, ಯುಗಾದಿ, ಹೊಸ ವರ್ಷದ ಸಂಭ್ರಮದಲ್ಲಿ ಭಾರೀ ಹೆಚ್ಚು ಮದ್ಯ ಮಾರಾಟವಾಗುತ್ತದೆ. ತಮಿಳುನಾಡಿನಲ್ಲೂ ಹೊಸ ವರ್ಷ ಹಾಗೂ ವರ್ಷಾಂತ್ಯದಲ್ಲಿ ಹೆಚ್ಚು ಮದ್ಯ ಮಾರಾಟವಾಗುತ್ತದೆ. ಅದೇ ರೀತಿ ಪೊಂಗಲ್ ಹಬ್ಬ / ಸಂಕ್ರಾಂತಿ ಸಂಭ್ರಮದಲ್ಲೂ ಮದ್ಯ ಬೇಡಿಕೆ ಹೆಚ್ಚು.
ಮದ್ಯ ಮಾರಾಟವೇ ಪ್ರಮುಖ ಆದಾಯ ಮೂಲ
ದಕ್ಷಿಣ ಭಾರತದ ರಾಜ್ಯಗಳು ಮದ್ಯ ಮಾರಾಟದಿಂದ ವಾರ್ಷಿಕವಾಗಿ ಎಷ್ಟು ಆದಾಯ ಗಳಿಸುತ್ತವೆ. ದಕ್ಷಿಣ ಭಾರತದ ರಾಜ್ಯಗಳು ಮದ್ಯ ಮಾರಾಟ ಮತ್ತು ಅಬಕಾರಿ ಸುಂಕದಿಂದ ವಾರ್ಷಿಕವಾಗಿ ಅಂದಾಜು 1.25 ಲಕ್ಷ ಕೋಟಿ ರೂ. ಹೆಚ್ಚು ಅಧಿಕ ಆದಾಯವನ್ನು ಗಳಿಸುತ್ತಿವೆ.
ರಾಜ್ಯ ವಾರ್ಷಿಕ ಅಂದಾಜು ಆದಾಯ (ಕೋಟಿ ರೂ.ಗಳಲ್ಲಿ)
ತಮಿಳುನಾಡು 40,000 - 44,000 ಕೋಟಿ ರೂ.
ಕರ್ನಾಟಕ 36,000 - 40,000 ಕೋಟಿ ರೂ.
ತೆಲಂಗಾಣ 20,000 - 24,000 ಕೋಟಿ ರೂ.
ಆಂಧ್ರಪ್ರದೇಶ 14,000 17,500 ಕೋಟಿ ರೂ.
ಕೇರಳ 8,500 - 12,000 ಕೋಟಿ ರೂ.
ತಮಿಳುನಾಡು - ಕೇರಳಂದಲ್ಲಿ ಮದ್ಯ ಮಾರಾಟ ಕರ್ನಾಟಕದಷ್ಟು ಮುಕ್ತವಾಗಿಲ್ಲ!
ಇನ್ನು ತಮಿಳುನಾಡು ಹಾಗೂ ಕೇರಳಂರ ರಾಜ್ಯಗಳಲ್ಲಿ ಮದ್ಯ ಮಾರಾಟವು ಕರ್ನಾಟಕದಷ್ಟು ಮುಕ್ತವಾಗಿಲ್ಲ. ತಮಿಳುನಾಡಿನಲ್ಲಿ ಸ್ಟಾರ್ ಹೋಟೆಲ್ ಹಾಗೂ ಕೆಲವು ನಿರ್ದಿಷ್ಟ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶವಿದೆ. ತಮಿಳುನಾಡಿನಲ್ಲಿ ರೀಟೆಲ್ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ. ಸರ್ಕಾರವೇ ಲೈಸೆನ್ಸ್ ಕೊಡುವುದು ಹಾಗೂ ಸರ್ಕಾರದ ನಿಗದಿತ ಅಂಗಡಿಗಳ ಮೂಲಕ ಮಾತ್ರ ಮದ್ಯ ಮಾರಾಟವಾಗುತ್ತದೆ. ಯಾವ ಕಂಪನಿಯಿಂದ ಖರೀದಿ ಮಾಡಬೇಕು ಎಂದು ಸರ್ಕಾರ ನಿಗದಿ ಮಾಡುತ್ತದೆಯೋ ಅಲ್ಲಿಂದಲೇ ಮದ್ಯ ಖರೀದಿಯನ್ನು ಬಾರ್‌ಗಳು ಖರೀದಿ ಮಾಡುತ್ತವೆ. ತಮಿಳುನಾಡಿನಲ್ಲಿನ ಮದ್ಯ ಮಾರಾಟದ ರುಚಿ ಅಥವಾ ಟೇಸ್ಟ್ ಕಡಿಮೆ ಒಗರು ಒಗರಾಗಿರುತ್ತದೆ ಎನ್ನುವ ವಾದವೂ ಇದೆ ಎನ್ನುತ್ತಾರೆ Oneindia Tamilನ ಸಂಪಾದಕರಾದ ವೀರ ಕುಮಾರ್.
ಮದ್ಯ ಮಾರಾಟವು ತಮಿಳುನಾಡು ಸರ್ಕಾರಕ್ಕೆ ಪ್ರಮುಖ ಆದಾಯ ಮೂಲವಾಗಿದೆ. ಇದೀಗ ತಮಿಳುನಾಡಿನಲ್ಲಿ ಹಲವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವುದರಿಂದ ಮದ್ಯ ಮಾರಾಟದ ರೆವಿನ್ಯೂ ಮೇಲೆ ಅವಲಂಬನೆಯೂ ಹೆಚ್ಚಾಗಿದೆ. ಕೇಂದ್ರ ಸರ್ಕಾರವು ಜಿಎಸ್‌ಟಿ ಜಾರಿ ಮಾಡಿದ ಮೇಲೆ ರಾಜ್ಯಗಳ ಆದಾಯ ಕುಸಿತ ಕಂಡಿದೆ. ಹೀಗಾಗಿ, ಮದ್ಯ ಮಾರಾಟಕ್ಕೆ ಹೆಚ್ಚು ಅವಕಾಶ ನೀಡಬಾರದು ಎನ್ನುವ ಒತ್ತಡವಿದ್ದರೂ, ದೊಡ್ಡ ಮಟ್ಟದಲ್ಲಿ ಬಾರ್‌ಗಳನ್ನು ಮುಚ್ಚುವಂತಹ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ವೀರ ಕುಮಾರ್ ಅವರು ಹೇಳಿದ್ದಾರೆ.

ಬೆಂಗಳೂರಲ್ಲಿ ಮದ್ಯ ಮಾರಾಟವು ಏಷ್ಯಾದಲ್ಲೇ ಅತ್ಯುತ್ತಮ
ಬೆಂಗಳೂರಿನಲ್ಲಿ ಮದ್ಯ ಮಾರಾಟ ವ್ಯವಸ್ಥೆಯು ಏಷ್ಯಾದಲ್ಲೇ ಅತ್ಯುತ್ತಮವಾಗಿದೆ ಎನ್ನುತ್ತಾರೆ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಗೌರವಾಧ್ಯಕ್ಷ ಪಿ.ಸಿ ರಾವ್. ಭಾರತದಲ್ಲಿ ಮಾತ್ರವಲ್ಲ ಏಷ್ಯಾದಲ್ಲೇ ಅತ್ಯುತ್ತಮ ಬಾರ್ ಅಂಡ್ ರೆಸ್ಟೋರೆಂಟ್ ವ್ಯವಸ್ಥೆ ನಮ್ಮಲ್ಲಿದೆ. ನಮ್ಮಲ್ಲಿ ವಿಭಿನ್ನ ರುಚಿಯ ಮದ್ಯ ಮಾರಾಟ, ಉತ್ತಮ ಬೆಲೆ ಹಾಗೂ ಹೆಚ್ಚು ಜನ ಕುಳಿತುಕೊಳ್ಳುವುದಕ್ಕೆ ಬೇಕಾಗಿರುವ ಸೂಕ್ತ ಆಸನ ವ್ಯವಸ್ಥೆ ಇರುವ ಬಾರ್‌ಗಳು ಬೆಂಗಳೂರಿನಲ್ಲಿವೆ. ಅಲ್ಲದೆ, ಉತ್ತಮ ಗ್ರಾಹಕರು, ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ, ಆದಾಯದ ಕಾರಣಕ್ಕೆ ಸರ್ಕಾರದ ಬೆಂಬಲ ಹಾಗೂ ಉತ್ತಮ ಸೇವೆಯೂ ಇಲ್ಲಿ ಹೆಚ್ಚು ಮದ್ಯ ಮಾರಾಟವಾಗುವುದಕ್ಕೆ ಕಾರಣವಾಗಿದೆ.
ಕಳೆದ ಮೂರು ತಿಂಗಳಲ್ಲಿ ಮದ್ಯ ಮಾರಾಟದಿಂದಲೇ ಅತ್ಯಂತ ಹೆಚ್ಚು ಆದಾಯ ಬಂದಿದೆ. ಬೆಂಗಳೂರಲ್ಲಿ ಮೊದಲಿನಿಂದಲೂ ಬಾರ್ ಕಲ್ಚರ್, ನೈಟ್‌ಲೈಫ್ (ರಾತ್ರಿ ಜೀವನ), ಪಾರ್ಟಿ ಹಾಗೂ ಸಂಭ್ರಮಾಚರಣೆ ಸೇರಿದಂತೆ ಹಲವು ಕಾರಣಕ್ಕೆ ಬೆಂಗಳೂರು ದಕ್ಷಿಣ ಭಾರತದ ಉಳಿದ ನಗರಗಳಿಗಿಂತ ಭಿನ್ನವಾಗಿದೆ ಎನ್ನುತ್ತಾರೆ ಪಿ.ಸಿ ರಾವ್.


Click it and Unblock the Notifications
