ಎಲ್ಲಿ ಶುರು ಮಾಡಿದರೋ ಅಂಥದೇ ಸನ್ನಿವೇಶದಲ್ಲಿ ಸೋನಿಯಾ ಗಾಂಧಿ ನಿವೃತ್ತಿ
Recommended Video

"ಇದೀಗ ನಿವೃತ್ತಿಯ ಸಮಯ. ಇನ್ನು ಮುಂದೆ ಪಕ್ಷದ ಜವಾಬ್ದಾರಿ ರಾಹುಲ್ ನದು" ಎಂದಿದ್ದಾರೆ ಸೋನಿಯಾ ಗಾಂಧಿ. ಹತ್ತೊಂಬತ್ತು ವರ್ಷ ಒಂಬತ್ತು ತಿಂಗಳ ಸುದೀರ್ಘ ಅವಧಿಗೆ ಕಾಂಗ್ರೆಸ್ ನ ಅಧ್ಯಕ್ಷೆಯಾಗಿದ್ದ ಅವರು, ರಾಜಕೀಯದಿಂದಲೇ ನಿವೃತ್ತಿ ಆಗುವ ಮಾತನ್ನಾಡಿದ್ದಾರೆ.
ಅಂದಹಾಗೆ ಡಿಸೆಂಬರ್ ಒಂಬತ್ತನೇ ತಾರೀಕಿಗೆ ಸೋನಿಯಾ ಗಾಂಧಿ ಅವರಿಗೆ ಎಪ್ಪತ್ತೊಂದು ವರ್ಷ ತುಂಬಿತು. ಅದಾಗಿ ಒಂದು ವಾರಕ್ಕೆ (ಡಿಸೆಂಬರ್ 16, ಶನಿವಾರ) ಭಾರತದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ಎಂಬ ಹಡಗಿನ ಚುಕ್ಕಾಣಿಯನ್ನು ಅವರ ಮಗ ರಾಹುಲ್ ಗಾಂಧಿ ಹಿಡಿಯಲಿದ್ದಾರೆ.
ಆದರೆ, ಈ ಸನ್ನಿವೇಶ ಕಾಂಗ್ರೆಸ್ ಗೆ ಅಂಥ ಅನುಕೂಲಕರವಾಗೇನಿಲ್ಲ. ಹಾಗಂತ ಸೋನಿಯಾ ಗಾಂಧಿ ಅವರು ನೇತೃತ್ವ ವಹಿಸಿದಾಗ ಅನುಕೂಲವಾಗಿತ್ತಾ ಅಂದರೆ, ಆಗಲೂ ಇರಲಿಲ್ಲ. ಸಾಲುಸಾಲಾಗಿ ಸೋಲು ಕಾಣುತ್ತಿರುವ ಕಾಂಗ್ರೆಸ್ ಪಕ್ಷದ ವೈಫಲ್ಯಕ್ಕೆ ರಾಹುಲ್ ಗಾಂಧಿಯನ್ನೇ ಬೊಟ್ಟು ಮಾಡಿ ತೋರುವವರು ಆ ಪಕ್ಷದಲ್ಲೇ ಈಗ ಇದ್ದಾರೆ.
ಸೋನಿಯಾರಿಂದ ಅಧಿಕಾರ ಹಸ್ತಾಂತರ ಆಗೋದೇ ಬಹಳ ಮಂದಿಗೆ ಇಷ್ಟವಿದ್ದಂತಿಲ್ಲ. ಆದರೆ ಅನಾರೋಗ್ಯದ ಕಾರಣಕ್ಕೇ ಅವರು ಈ ನಿರ್ಧಾರ ಮಾಡಿದಂತಿದೆ. ಇದು ಎಂದಾದರೂ ಆಗಬೇಕಾಗಿದ್ದೇ. ರಾಹುಲ್ ಕಾಂಗ್ರೆಸ್ ನ ಅಧ್ಯಕ್ಷರಾಗಬೇಕು ಎಂಬುದು ವರ್ಷಗಳ ಹಿಂದಿನ ಒತ್ತಾಯ. ಆದರೆ ಈಗ ಕಾಂಗ್ರೆಸ್ ನ ಸ್ಥಿತಿ ದೇಶದಲ್ಲಿ ಚೆನ್ನಾಗಿಲ್ಲ.
ಸೋನಿಯಾ ಗಾಂಧಿ ಅವರಿಗೊಂದು ವಿದಾಯ ಹೇಳಿಬಿಡಬೇಕಲ್ಲ, ಅಂಥ ಪ್ರಯತ್ನದ ಫಲವಾಗಿಯೇ ಈ ಲೇಖನ.

ಇಂದಿರಮ್ಮನ ಸೊಸೆ
ಇಂದಿರಮ್ಮನ ಸೊಸೆ ಎಂಬುದು ಬಿಟ್ಟರೆ ಸೋನಿಯಾ ಗಾಂಧಿ ಅವರಿಗೆ ಬೇರೆ ಗುರುತೇ ಇಲ್ಲದ ವೇಳೆಯಲ್ಲಿ ಕಾಂಗ್ರೆಸ್ ನ ಚುಕ್ಕಾಣಿ ಹಿಡಿದವರು ಅವರು. ಈ ದೇಶ, ಇಲ್ಲಿನ ವೈವಿಧ್ಯ, ರಾಜಕಾರಣ ಮತ್ತ್ಯಾವುದರ ಬಗ್ಗೆಯೂ ತಲಸ್ಪರ್ಶಿಯಾದ ಮಾಹಿತಿ ಇಲ್ಲದೆ ಕಾಂಗ್ರೆಸ್ ನ ಅಧ್ಯಕ್ಷೆಯಾದವರಿಗೆ ಆಹ್ಲಾದಕರವಾದ ಸ್ವಾಗತವೇನೂ ಸಿಗಲಿಲ್ಲ. ಜವಾಬ್ದಾರಿ ವಹಿಸಿಕೊಂಡ ಐದು ವರ್ಷ ಪಕ್ಷಕ್ಕೆ ಕೇಂದ್ರದಲ್ಲಿ ಅಧಿಕಾರವೂ ಇರಲಿಲ್ಲ.

ವಿದೇಶಿ ಮೂಲದ ಪ್ರಸ್ತಾವ
2004ರಲ್ಲಿ ಹಲವು ಪಕ್ಷಗಳ ಮೈತ್ರಿಯೊಂದಿಗೆ ಯುಪಿಎ ಒಕ್ಕೂಟ ರಚಿಸಿಕೊಂಡು ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂತು. ಇನ್ನೇನು ಸೋನಿಯಾ ಗಾಂಧಿ ಪ್ರಧಾನಿಯೇ ಆಗಿಬಿಟ್ಟರು ಅನ್ನೋ ಹೊತ್ತಿಗೆ ವಿಪಕ್ಷವಾದ ಬಿಜೆಪಿ ಕೆಲವು ಕಾನೂನು ತೊಡಕುಗಳ ಬಗ್ಗೆ ಗಮನ ಸೆಳೆಯಿತು. ಆಕೆಯ ವಿದೇಶಿ ಮೂಲದ ಬಗ್ಗೆ ಪ್ರಸ್ತಾವ ಮಾಡಿತು. ಈಗ ವಿದೇಶಾಂಗ ಸಚಿವೆ ಆಗಿರುವ ಸುಷ್ಮಾ ಸ್ವರಾಜ್, ಸೋನಿಯಾ ಗಾಂಧಿ ಪ್ರಧಾನಿ ಆದರೆ ನಾನು ತಲೆ ಬೋಳಿಸಿಕೊಂಡು, ನೆಲದ ಮೇಲೆ ಮಲಗುತ್ತೇನೆ ಎಂಬ ಹೇಳಿಕೆ ಕೊಟ್ಟರು.

ಮನಮೋಹನ್ ಸಿಂಗ್ ಹೆಸರು ಸೂಚನೆ
ಆ ವೇಳೆಯಲ್ಲಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಸೋನಿಯಾ ಗಾಂಧಿ ಸೂಚಿಸಿದರು. ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಇದನ್ನು 'ಮಹಾನ್ ತ್ಯಾಗ' ಎಂದು ಬಿಂಬಿಸಿದವು. ಇದು ರಾಜಕೀಯ ಗಿಮಿಕ್ ಎಂದು ವಿಪಕ್ಷಗಳು ಕರೆದವು. ಒಟ್ಟಾರೆ ಸೋನಿಯಾ ಗಾಂಧಿ ಅವರು ಪ್ರಧಾನಿಯೂ ಆಗಲಿಲ್ಲ, ಸರಕಾರದಲ್ಲಿ ಯಾವುದೇ ಸ್ಥಾನವನ್ನೂ ವಹಿಸಿಕೊಳ್ಳಲಿಲ್ಲ.

ಜನಾಶೀರ್ವಾದ ಸಿಗಲಿಲ್ಲ
ಎರಡನೇ ಅವಧಿಗೆ ಅಂದರೆ 2009ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಕೂಟ ಮತ್ತೊಮ್ಮೆ ಅಧಿಕಾರ ಹಿಡಿಯಿತು. ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ನೀಡಿದಂಥ ಆಡಳಿತ ಕೊಡಲು ಸಾಧ್ಯವಾಗಲಿಲ್ಲ. ಭ್ರಷ್ಟಾಚಾರದ ಆರೋಪಗಳು ಕೇಳಿಬಂದವು. ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿ ಹೋದ ಕಾಂಗ್ರೆಸ್ ಗೆ 2014ರ ಲೋಕಸಭೆ ಚುನಾವಣೆ ಹೊತ್ತಿಗೆ ವಿಪಕ್ಷದ ಸ್ಥಾನ ನಿರ್ವಹಿಸುವಷ್ಟು ಜನಾಶೀರ್ವಾದವೂ ದೊರೆಯಲಿಲ್ಲ.

ಪದೇಪದೇ ಅನಾರೋಗ್ಯ
ಆ ನಂತರ ಸೋನಿಯಾಗಾಂಧಿ ಅವರಿಗೆ ಪದೇ ಪದೇ ಅನಾರೋಗ್ಯ ಕಾಣಿಸಿಕೊಂಡಿತು. ಕಾಂಗ್ರೆಸ್ ಪಕ್ಷ ಒಂದೊಂದೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿತು. ರಾಹುಲ್ ಗಾಂಧಿ ಅವರ ಮುಂದಾಳತ್ವಕ್ಕೂ ಪಕ್ಷವನ್ನು ಗೆಲುವಿನೆಡೆಗೆ ಕರೆದೊಯ್ಯಲು ಆಗಲಿಲ್ಲ. ನ್ಯಾಷನಲ್ ಹೆರಾಲ್ಡ್ ಹಾಗೂ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಸೋನಿಯಾ ಅವರ ಹೆಸರು ಕೇಳಿಬಂತು. ಸುಬ್ರಮಣಿಯನ್ ಸ್ವಾಮಿ ಕೋರ್ಟ್ ಮೆಟ್ಟಿಲೇರಿದರು.

ಕರ್ನಾಟಕದ ನಂಟು
ಬಳ್ಳಾರಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದ ಸೋನಿಯಾ ಗಾಂಧಿ ಅದೇ ವೇಳೆ ಉತ್ತರ ಪ್ರದೇಶದ ಅಮೇಥಿಯಲ್ಲೂ ಗೆದ್ದಿದ್ದರು. ಆ ನಂತರ ಬಳ್ಳಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದ್ದರಿದ ಕರ್ನಾಟಕಕ್ಕೂ ಅವರ ನಂಟಿದೆ.
ಇದೀಗ ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂಬ ಸೂಚನೆಯನ್ನು ಸಮೀಕ್ಷೆಗಳು ನೀಡುತ್ತಿವೆ. ಹಾಗಾದಲ್ಲಿ ಮತ್ತೊಂದು ರಾಜ್ಯದಿಂದ ಕಾಂಗ್ರೆಸ್ ಬಾವುಟ ಕಳಚಿ ಬೀಳುತ್ತದೆ. ಬಿಜೆಪಿಯ ಗೆಲುವಿನ ಓಟ ಮುಂದುವರಿಯುತ್ತದೆ. ಇಂಥ ಹೊತ್ತಲ್ಲಿ ರಾಹುಲ್ ಗೆ ಜವಾಬ್ದಾರಿ ವರ್ಗಾಯಿಸಿ ಸೋನಿಯಾ ಗಾಂಧಿ ಹಿಂದೆ ಸರಿಯುತ್ತಿದ್ದಾರೆ.












Click it and Unblock the Notifications