ಅಬ್ಬಾ! ಅಂತೂ ಐಪಿಎಸ್ ದಿನೇಶ್ ಬಿಡುಗಡೆಯಾದರು

ಬೆಂಗಳೂರು, ಮೇ 7: ಅಬ್ಬಾ! ಅಂತೂ ನಮ್ಮ ಐಪಿಎಸ್ ದಿನೇಶ್ ಬಿಡುಗಡೆಯಾಗಿದ್ದಾರೆ! ಹಾಗೆಯೇ, ಪ್ರಕರಣದಿಂದಲೂ ಅವರಿಗೆ ಮುಕ್ತಿ ಸಿಗಲಿ. ಸೋಹ್ರಾಬುದ್ದೀನ್ ನಕಲಿ ಎನ್‌ ಕೌಂಟರ್ ಪ್ರಕರಣದಲ್ಲಿ ಒಂದಲ್ಲ ಎರಡಲ್ಲ ಏಳು ವರ್ಷ ಕಾಲ ಅನ್ಯಾಯವಾಗಿ ಜೈಲುಪಾಲಾಗಿದ್ದ ಕೋಲಾರದ ಪೊಲೀಸ್ ಅಧಿಕಾರಿ ಎಂಎನ್ ದಿನೇಶ್ ಕುಮಾರ್ ಅವರು ನಿನ್ನೆ ಮಂಗಳವಾರ ಸಂಜೆ ಮುಂಬೈನ ತಲೋಜಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ, ಹೆಂಡತಿ ಮಕ್ಕಳು ತಾಯಿಯನ್ನು ಕಣ್ಣಾರೆ ನೋಡುವಂತಾಗಿದೆ.

ಕೇಸು ಸಿಬಿಐನದ್ದಾಗಿದ್ದರಿಂದ ಈ ಏಳು ವರ್ಷಗಳಲ್ಲಿ ಬೆರಳೆಣಿಕೆ ಸಂದರ್ಭದಗಳಲ್ಲಿ ಮಾತ್ರ ಅವರು ತಮ್ಮವರನ್ನು ಕಂಡು ಮಾತನಾಡಿಸುವಂತಾಗಿತ್ತು. ಪ್ರಕರಣದಲ್ಲಿ ಕೇಂದ್ರ ಸರಕಾರದ ಕೈಗೊಂಬೆಯಾಗಿ ಸಿಬಿಐ ವರ್ತಿಸಿತಾ? ಗುಜರಾತಿನ ಮೋದಿ ಸರಕಾರ ಜಿದ್ದಿಗೆ ಬಿದ್ದು ಅಮಾಯಕ ಅಧಿಕಾರಿಯನ್ನು ಇಂತಹ ದುಃಸ್ಥಿತಿಗೆ ತಳ್ಳೀತಾ? ಅಥವಾ ರಾಜಸ್ಥಾನ ಸರಕಾರದ ಅಸಹಾಯಕತೆಯಾ? ಕೊನೆಗೆ, ಸ್ವತಃ ದಿನೇಶ್ ಅವರ ಹಣೆಬರೆಹವೇ ಹಾಗಿತ್ತಾ?

Sohrabuddin case Rajasthan IPS officer Dinesh Kumar MN released on bail

ಇದೆಲ್ಲಾ ಬಹಿರಂಗ ಸತ್ಯಗಳು. ದಿನೇಶ್ ಪ್ರಕರಣದಲ್ಲಿ ಯಾರು ಏನೂ ಮಾಡಲಾಗಲಿಲ್ಲ. ಕೊನೆಗೆ ಮಗಳ ಕೊಟ್ಟ ಮಾವ (ಕರ್ನಾಟಕದ ಅತ್ಯಂತ ದಕ್ಷ/ಪ್ರಭಾವಿ ಮಾಜಿ ಐಪಿಎಸ್ ಅಧಿಕಾರಿ) ಸಹ ಏನೂ ಮಾಡಲಾಗಲಿಲ್ಲ. ಜನ್ಮ ಕೊಟ್ಟ ತಂದೆ ಮುಳಬಾಗಿಲಿನವರಾದ ನಿವೃತ್ತ ತಹಸೀಲ್ದಾರ್ ನಾರಾಯಣಸ್ವಾಮಿ ಅವರೂ ಏನೂ ಮಾಡಲಾಗಲಿಲ್ಲ. ಹಾಗಾದರೆ ದೇಶದ ಕಾನೂನು, ತನಿಖಾ ಸಂಸ್ಥೆಗಳು ಇಷ್ಟೊಂದು ಖಡಕ್ಕಾಗಿವೆಯಾ? ಕಾನೂನು ಮುಷ್ಠಿ ಅಷ್ಟೊಂದು ಬಿಗಿಯಾಗಿದೆಯಾ?

ಅದೆಲ್ಲಾ ಕರಾಳ ಅಧ್ಯಾಯಗಳು. ಈಗ ಮರುಹುಟ್ಟು ಪಡೆದಂತೆ ದಿನೇಶ್ ಕೈಯಲ್ಲಿ ಜಾಮೀನು ಆದೇಶ ಹಿಡಿದು ಮತ್ತೆ ಅದೇ ಶ್ರದ್ಧೆ, ದಕ್ಷತೆ ಎಲ್ಲಕ್ಕಿಂತ ಹೆಚ್ಚಾಗಿ ಉತ್ಸಾಹದಿಂದ ಕರ್ತವ್ಯಕ್ಕೆ ಮರಳಲು ಸಿದ್ಧರಾಗಿದ್ದಾರೆ. 2007ರ ಏಪ್ರಿಲ್ 24ರಂದು ದಿನೇಶ್‌ರನ್ನು ಸಿಬಿಐ ಬಂಧಿಸಿತ್ತು.

ಕಳೆದ ತಿಂಗಳು ಏಪ್ರಿಲ್ 28ರಂದು ಮುಂಬೈ ಹೈಕೋರ್ಟ್ ಅವರಿಗೆ ಷರತ್ತು ರಹಿತ ಜಾಮೀನು ನೀಡಿತ್ತು. ಆದರೆ ಅದೇ ದಿನ ಮಧ್ಯಾಹ್ನ ಕೋರ್ಟಿಗೆ ಹಾಜರಾಗಿದ್ದ ಸಿಬಿಐ ಪರ ವಕೀಲರು 15 ದಿನ ಕಾಲಾವಕಾಶ ಕೋರಿದ್ದರು. ಅದರಂತೆ ನ್ಯಾಯಾಲಯ ಒಂದು ವಾರ ಸಮಯ ನೀಡಿತ್ತು. ಮೇ 4ಕ್ಕೆ ಅವಧಿ ಮುಗಿದಿತ್ತು. ಮೇ 5ರಂದು ಕೋರ್ಟ್‌ಗೆ ಹಾಜರಾದ ದಿನೇಶ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ಸಂಜೆ ಕೋರ್ಟ್ ಪ್ರಕ್ರಿಯೆ ಮುಗಿದು ದಿನೇಶ್ ಬಿಡುಗಡೆಯಾಗಿದ್ದಾರೆ. (ಕೆಳಗಿನ ಚಿತ್ರ ಕೃಪೆ)

 Rajasthan IPS officer Dinesh Kumar MN released on bail

ಪ್ರಕರಣದಲ್ಲಿ ಮೂವರು ಐಪಿಎಸ್ ಅಧಿಕಾರಿಗಳು ಜೈಲುಪಾಲಾಗಿದ್ದರು. ಗುಜರಾತಿನ ಭಯೋತ್ಪಾದನಾ ನಿಗ್ರಹ ದಳದ ಡಿಐಜಿ ಡಿಜಿ ವಂಜಾರಾ, ಪೊಲೀಸ್ ಅಧಿಕಾರಿ ರಾಜಕುಮಾರ್ ಪಾಂಡ್ಯನ್ ಹಾಗೂ ದಿನೇಶ್ ಬಂಧಿತರಾಗಿದ್ದರು. ಭೂಗತ ಲೋಕದ ನಂಟಿದ್ದ ಸೊಹ್ರಾಬುದ್ದೀನ್ ಶೇಖ್, ಆತನ ಪತ್ನಿ ಕೈಸರ್ ಬಿ ಹತ್ಯೆ ನಕಲಿ ಎನ್‌ ಕೌಂಟರ್ ಎಂದು ಸಿಬಿಐ ಮೊಕದ್ದಮೆ ದಾಖಲಿಸಿತ್ತು.

ಸೊಹ್ರಾಬುದ್ದೀನ್ ಶೇಖ್ ಮತ್ತು ಅವನ ಪತ್ನಿ ಕೈಸರ್ ಬಿಯನ್ನು ಗುಜರಾತ್ ಎಟಿಎಸ್ ಪೊಲೀಸರು ಹೈದರಾಬಾದಿನಲ್ಲಿ ಬಂಧಿಸಿ, 2005ರಲ್ಲಿ ಗಾಂಧಿನಗರದಲ್ಲಿ ನಕಲಿ ಎನ್ಕೌಂಟರ್ ನಡೆಸಿ ಹತ್ಯೆ ಮಾಡಿದ್ದರು ಎಂಬುದು ದಿನೇಶ್ ಸೇರಿದಂತೆ ಮೂವರು ಐಪಿಎಸ್ ಅಧಿಕಾರಿಗಳ ಮೇಲಿರುವ ಆರೋಪ.

ಏನಾಗಿತ್ತು?:
ರಾಜಸ್ಥಾನದ ಉದಯಪುರದಲ್ಲಿ ಎಸ್ಪಿಯಾಗಿ ಕೆಲಸ ನಿರ್ವಹಿಸುವಾಗ ಅಲ್ಲಿ ಹಾತಿಪೋಲ್ ಠಾಣೆ ವ್ಯಾಪ್ತಿಯಲ್ಲಿ ಮೂರು ತಿಂಗಳ ಹಿಂದೆ ನಡೆದಿದ್ದ ಕರೀಲಾಲ್ ಎಂಬಾತ ಕೊಲೆ ಪ್ರಕರಣದ ಬೆನ್ನುಹತ್ತಿದ್ದೇ ದಿನೇಶ್ ಅವರಿಗೆ ಮುಳುವಾಗಿತ್ತು. ಅದರ ಹಿಂದೆ ಸೊಹ್ರಾಬುದ್ದೀನ್ ಎಂಬ ಭೂಗತ ಪಾತಕಿ ಇದ್ದಾನೆಂದು ಪತ್ತೆಯಾಗಿದ್ದೇ ತಡ ಅವನ ಬೆನ್ನುಹತ್ತಿದ್ದರು ದಿನೇಶ್.

ಪಾತಕಿ ಸೊಹ್ರಾಬುದ್ದೀನ್ ರಾಜಸ್ಥಾನಕ್ಕೆ ಮಾತ್ರವಲ್ಲ. ಗುಜರಾತ್, ಮಹಾರಾಷ್ಟ್ರದ ಪೊಲೀಸರಿಗೂ ಬೇಕಾದವನಾಗಿದ್ದ. ಹಾಗಾಗಿ ಗುಜರಾತಿನ ಭಯೋತ್ಪಾದನಾ ನಿಗ್ರಹದಳದ ಡಿಜಿ ವಂಜಾರಾ, ರಾಜಕುಮಾರ್ ಪಾಂಡ್ಯನ್ ಅವರನ್ನು ಸಂಪರ್ಕಿಸಿದ್ದ ದಿನೇಶ್, ಸೊಹ್ರಾಬುದ್ದೀನನ್ನು ಹಿಡಿಯಲು ಯತ್ನಿಸಿದ್ದರು.

ವಂಜಾರಾ ಮತ್ತು ಪಾಂಡ್ಯನ್ ಅವರುಗಳು ನೀಡಿದ್ದ ಹೆಚ್ಚಿನ ಮಾಹಿತಿಯನ್ನಾಧರಿಸಿ, ಸೊಹ್ರಾಬುದ್ದೀನನನ್ನು ಹಿಡಿಯಲು ಅಹಮದಾಬಾದಿಗೆ ಹೋಗಿದ್ದೇ ದಿನೇಶ್ ಈ ಪ್ರಕರಣದಲ್ಲಿ ಸಿಕ್ಕಿಕೊಳ್ಳಲು ಕಾರಣವಾಯಿತು. ಸದ್ಯಕ್ಕೆ ಅವರಿಗೆ ಷರತ್ತು ರಹಿತ ಜಾಮೀನು ಸಿಕ್ಕಿದೆ. ಇನ್ನಾದರೂ ಅವರಿಗೆ ಅರ್ಹ ನ್ಯಾಯ ಸಿಗಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+