ವಿಶ್ವಾಸಮತ ಯಾಚನೆ ಚರ್ಚೆ: ರಾಹುಲ್ ಗಾಂಧಿಯವರ ಮಣಿಪುರ ಹೇಳಿಕೆಗೆ ಸ್ಮೃತಿ ಇರಾನಿ ತಿರುಗೇಟು
ವಿಶ್ವಾಸಮತ ಯಾಚನೆಯ ಅಧಿವೇಶನದಲ್ಲಿ ರಾಹುಲ್ ಗಾಂಧಿಯವರ ಮಣಿಪುರ ಹೇಳಿಕೆಗೆ ಸ್ಮೃತಿ ಇರಾನಿ ತಿರುಗೇಟು ನೀಡಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿಯವರ ಟೀಕೆಗೆ ಪ್ರತಿಯಾಗಿ, "ಮಣಿಪುರ ವಿಭಜನೆಯಾಗಿಲ್ಲ, ಅದು ಭಾರತದ ಭಾಗವಾಗಿದೆ" ಎಂದು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಮೈತ್ರಿಕೂಟ 'ಭಾರತ' ಇಂದು ತಂದಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು ಆರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ಧ ಸಂಪೂರ್ಣ ವಾಗ್ದಾಳಿ ನಡೆಸಿದರು. ಅವರು(ಬಿಜೆಪಿ) ಮಣಿಪುರದಲ್ಲಿ 'ಭಾರತ ಮಾತೆಯನ್ನು ಹತ್ಯೆ' ಮಾಡಿದ್ದಾರೆ, ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡುವುದಿಲ್ಲ ಏಕೆಂದರೆ ಅಲ್ಲಿ 'ಭಾರತ ಮಾತೆಯನ್ನು ಹತ್ಯೆ ಮಾಡಲಾಗಿದೆ' ಎಂದು ರಾಹುಲ್ ಗಾಂಧಿ ವಾಗ್ದಾಳಿ ಮಾಡಿದರು.

ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ ಪ್ರತಿಯಾಗಿ ಸ್ಮೃತಿ ಇರಾನಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಮಣಿಪುರ ವಿಭಜನೆಯಾಗಿಲ್ಲ, ಅದು ಭಾರತದ ಭಾಗವಾಗಿದೆ" ಎಂದು ಹೇಳಿದ್ದಾರೆ. ಗುರುವಾರದವರೆಗೆ ಅವಿಶ್ವಾಸದ ಚರ್ಚೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ನೀಡುವ ನಿರೀಕ್ಷೆಯಿದೆ.
ಮಣಿಪುರ ಬಗ್ಗೆ ಮೋದಿ ಮೌನ
ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರ 'ಮೌನ ವ್ರತ' ಮುರಿಯಲು ಅವಿಶ್ವಾಸ ನಿಲುವಳಿ ಮಂಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸರಕಾರದ ವಿರುದ್ಧದ ಅವಿಶ್ವಾಸ ನಿಲುವಳಿ ಮೇಲೆ ಚರ್ಚೆಯಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡು, ಮಂಗಳವಾರ ಲೋಕಸಭೆಯಲ್ಲಿ ಭಾಷಣ ಮಾಡಬೇಕಿತ್ತು. ಆದರೆ ಪ್ರಧಾನಿ ಮೋದಿ ಅವರು ಪಾಲ್ಗೊಳ್ಳದಿದ್ದ ಕಾರಣಕ್ಕೆ ರಾಹುಲ್ ಗಾಂಧಿ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದು, ಬುಧವಾರ ಅವರು ಚರ್ಚೆಯಲ್ಲಿ ಪಾಲ್ಗೊಂಡು ಬಿಜೆಪಿ ವಿರುದ್ಧ ಆಕ್ರೋಶಗೊಂಡರು.
ಮಣಿಪುರ ಹಿಂಸಾಚಾರ
ಮಣಿಪುರದಲ್ಲಿ ಕಳೆದ ಕೆಲ ತಿಂಗಳಿನಿಂದ ಜನಾಂಗೀಯ ಹಿಂಸಾಚರ ನಡೆಯುತ್ತಿದೆ. ಈ ಹಿಂಸಾಚಾರದಲ್ಲಿ ನೂರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಜನ ಗಾಯಗೊಂಡು ಸ್ಥಳವನ್ನೇ ತೊರೆದಿದ್ದಾರೆ. ಈ ವೇಳೆ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಘಟನೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಯಿತು. ಆದರೆ ಈ ಘೋರ ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಈ ಬಗ್ಗೆ ಮಾತಾಡುವಂತೆ ವಿಪಕ್ಷಗಳು ಪಟ್ಟು ಹಿಡಿದ ಬಳಿಕವೂ ಮೋದಿ ಘಟನೆ ಬಗ್ಗೆ ಮೌನ ತಾಳಿದ್ದಾರೆ. ಇದು ವಿಪಕ್ಷಗಳ ಕೋಪವನ್ನು ಮತ್ತಷ್ಟು ಕೆರಳಿಸಿದೆ.












Click it and Unblock the Notifications