Manipur: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಆರು ಮಂದಿ ಸಾವು, ಭಾರಿ ಬಿಗಿ ಭದ್ರತೆ
ಇಡೀ ದೇಶವೇ ಗಣೇಶ ಹಬ್ಬದ ಸಂಭ್ರಮದಲ್ಲಿರುವಾಗಲೇ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಜಿರಿಬಾಮ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಭಾರಿ ಹಿಂಸಾಚಾರ ನಡೆದಿದ್ದು ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶಂಕಿತ ಕುಕಿ ದಂಗೆಕೋರರು ಮಣಿಪುರ ರಾಜಧಾನಿ ಇಂಫಾಲ್‌ನಿಂದ 229 ಕಿ.ಮೀ ದೂರದಲ್ಲಿರುವ ನುಂಗ್‌ಚಾಪ್ಪಿ ಗ್ರಾಮದ ಮೇಲೆ ದಾಳಿ ಮಾಡಿದ್ದಾರೆ.
ದಾಳಿಕೋರರು ಯುರೆಂಬಮ್ ಕುಲೇಂದ್ರ ಸಿಂಘಾ ಎನ್ನುವ 63 ವರ್ಷದ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾರೆ. ಮೊಯಿರಾಂಗ್ ಪಟ್ಟಣದಲ್ಲಿ ಕುಕಿ ದಂಗೆಕೋರರು ನಡೆಸಿ ರಾಕೆಟ್ ಚಾಲಿತ ಬಾಂಬ್ ದಾಳಿಯಲ್ಲಿ ಮೈತಿ ಸಮುದಾಯದ ವೃದ್ಧರೊಬ್ಬರು ಸಾವನ್ನಪ್ಪಿದ್ದ ಮರುದಿನವೇ ಈ ದಾಳಿ ನಡೆದಿದೆ.

ಮೈತಿ ಸಮುದಾಯದ ಸಶಸ್ತ್ರ ಗುಂಪುಗಳು ಮತ್ತು ಗುಡ್ಡಗಾಡು ಪ್ರಾಬಲ್ಯದ ಕುಕಿ ಬುಡಕಟ್ಟು ಜನಾಂಗದವರ ನಡುವಿನ ಗುಂಡಿನ ಚಕಮಕಿಯಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಘಿದೆ. ಈ ಗುಂಪುಗಳು ತಮ್ಮನ್ನು ತಾವು ರಕ್ಷಣಾ ಗುಂಪುಗಳು ಎಂದು ಘೋಷಿಸಿಕೊಂಡಿವೆ.
ದಾಳಿ ನಿಯಂತ್ರಿಸಿದ ಪೊಲೀಸರು
ಜಿರಿಬಾಮ್ ಪೊಲೀಸ್ ಅಧೀಕ್ಷಕ ಮತ್ತು ಪೊಲೀಸ್ ಪಡೆಗಳು ತಕ್ಷಣಾ ಘರ್ಷಣೆಯ ಸ್ಥಳಕ್ಕೆ ದೌಡಾಯಿಸಿದ್ದಾರೆ. ಪೊಲೀಸರ ಮೇಲೆ ಕೂಡ ದಂಗೆಕೋರರು ದಾಳಿ ಮಾಡಲು ಪ್ರಯತ್ನಿಸಿದ್ದಾರೆ. ಪೊಲೀಸರು ಕೂಡ ಪ್ರತಿದಾಳಿ ಮಾಡುವ ಮೂಲಕ ಗುಂಡಿನ ದಾಳಿಯನ್ನು ನಿಯಂತ್ರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಗುಪ್ತಚರ) ಕೆ ಕಬೀಬ್ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಶುಕ್ರವಾರ ಕೆಲವು ಕುಕಿ ದಂಗೆಕೋರರು ಬಿಷ್ಣುಪುರ್ ಮತ್ತು ಚುರಾಚಂದ್‌ಪುರ ಗಡಿ ಸೇರಿದಂತೆ ಕೆಲವು ಆಯಕಟ್ಟಿನ ಪ್ರದೇಶಗಳಲ್ಲಿ ಗುಂಡಿನ ದಾಳಿ ನಡೆಸಿದರು. ಅದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಕೂಡ ದಾಳಿ ಮಾಡಿದ್ದು, ಉಗ್ರಗಾಮಿಗಳು ಆಕ್ರಮಿಸಿಕೊಂಡಿದ್ದ ಎರಡು ಬಂಕರ್ ಧ್ವಂಸಗೊಳಿಸಲಾಗಿದೆ ಎಂದರು.
ಶನಿವಾರ ಬೆಳಿಗ್ಗೆ ಕುಕಿ ಉಗ್ರರು ಜಿರಿಬಾಮ್‌ನ ಹಳ್ಳಿ ಮೇಲೆ ದಾಳಿ ವೃದ್ಧನನ್ನು ಕೊಂದು, ಗುಂಡು ಹಾರಿಸುತ್ತಾ ಓಡಿ ಹೋಗಿದ್ದಾರೆ. ಗ್ರಾಮದ ಕೆಲವು ಸ್ವಯಂ ಸೇವಕರು ಪ್ರತಿದಾಳಿ ಮಾಡಿದ್ದಾರೆ, ಪೊಲೀಸರು ಕೂಡ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಎಂದು ಹೇಳಿದ್ದಾರೆ.
ಬಿಗಿ ಬಂದೋಬಸ್ತ್
ಮತ್ತೆ ಕುಕಿ ದಂಗೆಕೋರರು ಇಂಪಾಲ್ ಪಶ್ಚಿಮ ಜಿಲ್ಲೆಯ ಹಳ್ಳಿಗಳ ಮೇಲೆ ಡ್ರೋನ್‌ಗಳೊಂದಿಗೆ ದಾಳಿ ಮಾಡಿದ ಒಂದು ವಾರದ ಬಳಿಕ ಶಂಕಿತ ಬಂಡುಕೋರರು ಭಾರತದ ನೆಲದಲ್ಲಿ ಡ್ರೋನ್ ದಾಳಿಯನ್ನು ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸೇನಾ ಹೆಲಿಕ್ಯಾಪ್ಟರ್ ಗಳು ಈ ಪ್ರದೇಶದಲ್ಲಿ ಕಣ್ಣಿಟ್ಟಿದ್ದು, ಬೆಟ್ಟಗಳು ಮತ್ತು ಕಣಿವೆ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಾಗಲೇ ಭದ್ರತಾ ಪಡೆಗಳು ಬೆಟ್ಟದ ತಪ್ಪಲಿನಲ್ಲಿ ಹಲವಾರು ಬಂಕರ್‌ಗಳನ್ನು ನಾಶಪಡಿಸಿವೆ ಎಂದು ವರದಿಯಾಗಿದೆ.












Click it and Unblock the Notifications