"ಪರಿಸ್ಥಿತಿ ಯಾವಾಗ ಬೇಕಾದರೂ ಬದಲಾಗಬಹುದು, ಎಚ್ಚರದಿಂದಿರಿ"
ನವದೆಹಲಿ, ಫೆಬ್ರವರಿ 17: ಭಾರತದಲ್ಲಿ ಕೊರೊನಾ ಲಸಿಕೆಗಳು ಈ ವರ್ಷದ ಕೊನೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.
ಕೊರೊನಾ ಲಸಿಕೆ ನೀಡುವ ಉದ್ದೇಶಿತ ಗುರಿ ತಲುಪಿದ ನಂತರ ಹಾಗೂ ಲಸಿಕೆಯ ಪೂರೈಕೆ, ಬೇಡಿಕೆ ಸರಿಸಮಾನವಾದ ನಂತರ ಲಸಿಕೆಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.
ವಿದೇಶದಿಂದ ಮರಳಿದ ನಾಲ್ವರಲ್ಲಿ ದಕ್ಷಿಣ ಆಫ್ರಿಕಾ ರೂಪಾಂತರ ವೈರಸ್ ಪತ್ತೆ
ಜನವರಿ 16ರಂದು ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ಆರಂಭಗೊಂಡಿದ್ದು, ಅಂದು ಗುಲೇರಿಯಾ ಅವರು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದರು. ಬುಧವಾರ ಎರಡನೇ ಡೋಸ್ ಪಡೆದುಕೊಂಡಿದ್ದಾರೆ.
"ಲಸಿಕೆ ನೀಡುವ ನಿರ್ದಿಷ್ಟ ಗುರಿ ತಲುಪಿದ ನಂತರ ಮಾರುಕಟ್ಟೆಯಲ್ಲಿ ಲಸಿಕೆಗಳು ಲಭ್ಯವಾಗುತ್ತವೆ. ವರ್ಷದ ಕೊನೆಗೆ ಅಥವಾ ಅದಕ್ಕೂ ಮುನ್ನ ಸಾಧ್ಯವಾಗಬಹುದು ಎಂದಿದ್ದಾರೆ.
ಲಸಿಕೆ ಅಭಿಯಾನ ಆರಂಭಗೊಂಡ 28 ದಿನದ ಅನುಭವವನ್ನು ಹಂಚಿಕೊಂಡ ಅವರು, "ಇಂದು ನಾನು ಎರಡನೇ ಡೋಸ್ ಕೊವ್ಯಾಕ್ಸಿನ್ ಲಸಿಕೆ ಪಡೆದಿದ್ದೇನೆ. ಮೊದಲ ಡೋಸ್ ಲಸಿಕೆ ಪಡೆದ ನಂತರ ನನಗೆ ಯಾವುದೇ ಅಡ್ಡಪರಿಣಾಮ ಉಂಟಾಗಿಲ್ಲ. ಯಾವುದೇ ತೊಂದರೆ ಆಗಿಲ್ಲ. ಲಸಿಕೆ ಬಗ್ಗೆ ಭಯ ಪಡಬೇಡಿ. ಸೋಂಕಿನಿಂದ ಹೊರಬರಲು ಲಸಿಕೆ ಅವಶ್ಯಕ" ಎಂದಿದ್ದಾರೆ.
"ಕೊರೊನಾ ಸೋಂಕು ಸಂಪೂರ್ಣ ಹೋಗಿಲ್ಲ. ಕೊರೊನಾ ಲಸಿಕೆ ವಿಷಯದಲ್ಲಿ ಭಾರತ ಉನ್ನತಿ ಸಾಧಿಸಿದೆ. ಆದರೆ ಪರಿಸ್ಥಿತಿ ಯಾವಾಗ ಬೇಕಾದರೂ ಬದಲಾಗಬಹುದು. ಸೋಂಕು ಹೆಚ್ಚಾದರೆ ಲಾಕ್ ಡೌನ್ ವಿಧಿಸುವ ಸಂದರ್ಭವೂ ಮರಳಿ ಬರಬಹುದು. ಬ್ರೆಜಿಲ್, ಯುರೋಪ್, ದಕ್ಷಿಣ ಆಫ್ರಿಕಾ ಹಾಗೂ ಬ್ರಿಟನ್ ನಂತೆ ಮತ್ತೆ ಲಾಕ್ ಡೌನ್ ವಿಧಿಸಬೇಕಾಗಬಹುದು. ಆದ್ದರಿಂದ ಪರಿಸ್ಥಿತಿ ನಿರ್ವಹಣೆ ಬಹಳ ಮುಖ್ಯವಾಗಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.