ಶಿವಸೇನೆಗೆ ಮತ್ತೊಂದು ಭರ್ಜರಿ ಶಾಕ್ ನೀಡಿದ ಬಿಜೆಪಿ
ನವದೆಹಲಿ, ನ 18: ಮಹಾರಾಷ್ಟ್ರದಲ್ಲಿ ಚುನಾವಣಾಪೂರ್ವ ಮೈತ್ರಿ ಧಿಕ್ಕರಿಸಿ, ಎನ್ಸಿಪಿ - ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಲು ಮುಂದಾಗಿರುವ ಶಿವಸೇನೆಗೆ ಬಿಜೆಪಿ ಮತ್ತೊಂದು ಶಾಕ್ ನೀಡಿದೆ.
ಮುಖ್ಯಮಂತ್ರಿ 50:50 ಹಂಚಿಕೆ ಮಾಡಿಕೊಳ್ಳಲು, ಬಿಜೆಪಿ ಒಪ್ಪದೇ, ಶಿವಸೇನೆಯ ಹಠಕ್ಕೆ ಸೊಪ್ಪು ಹಾಕಿರಲಿಲ್ಲ. ಈಗ, ಆ ಪಕ್ಷವನ್ನು ಎನ್ಡಿಎ ಮೈತ್ರಿಕೂಟದಿಂದಲೇ ದೂರವಾಗಿಸುವ ಕೆಲಸವನ್ನು ಬಿಜೆಪಿ ಮಾಡಿದೆ.
ಇಂದಿನಿಂದ (ನ 18) ಸಂಸತ್ತಿನ ಉಭಯ ಸದನಗಳ ಕಲಾಪ ಆರಂಭವಾಗಲಿದೆ. ಆಡಳಿತ ಪಕ್ಷದ ಸಾಲಿನಲ್ಲಿದ್ದ ಶಿವಸೇನೆಗೆ ವಿರೋಧ ಪಕ್ಷಗಳ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ.

ಈ ಬಗ್ಗೆ ಮಾತನಾಡುತ್ತಿದ್ದ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಲ್ಹಾದ್ ಜೋಷಿ, "ಶಿವಸೇನೆ ಸಂಸದರಿಗೆ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಸಾಲಿನಲ್ಲಿ ಸ್ಥಾನಗಳನ್ನು ಮಂಜೂರು ಮಾಡಲಾಗುತ್ತಿದೆ" ಎಂದು ಸಚಿವರು ಹೇಳಿದ್ದಾರೆ.
"ಶಿವಸೇನೆ ಸಚಿವರು ರಾಜೀನಾಮೆಯನ್ನು ನೀಡಿದ್ದಾರೆ ಮತ್ತು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದೆ. ನಿನ್ನೆ ನಡೆದ ಎನ್ಡಿಎ ಕೂಟದ ಸಭೆಯಲ್ಲಿ ಶಿವಸೇನೆ ಭಾಗವಹಿಸಲಿಲ್ಲ" ಎಂದು ಸಚಿವ ಜೋಷಿ ಹೇಳಿದ್ದಾರೆ.
"ಹೀಗಾಗಿ ಸ್ವಾಭಾವಿಕವಾಗಿ ಶಿವಸೇನೆಗೆ ವಿರೋಧ ಪಕ್ಷದ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ" ಎಂದು ಪ್ರಲ್ಹಾದ್ ಜೋಷಿ ಹೇಳಿದ್ದಾರೆ. ಮೋದಿ ಸರಕಾರದಲ್ಲಿ ಶಿವಸೇನೆಯ ಏಕೈಕ ಸಚಿವರಾಗಿದ್ದ ಅರವಿಂದ್ ಸಾವಂತ್, ಇತ್ತೀಚೆಗೆ ರಾಜೀನಾಮೆ ನೀಡಿ, ಸರಕಾರದಿಂದ ಹೊರಬಂದಿದ್ದರು.












Click it and Unblock the Notifications