ಲೈಂಗಿಕ ದೌರ್ಜನ್ಯ: ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ತೀವ್ರಗೊಳಿಸಿದ ದೇಶದ 200ಕ್ಕೂ ಹೆಚ್ಚು ಕುಸ್ತಿಪಟುಗಳು
ನವದೆಹಲಿ, ಜನವರಿ, 19: ದೆಹಲಿಯ ಜಂತರ್ ಮಂತರ್‌ನಲ್ಲಿ ಎರಡನೇ ದಿನವೂ ದೇಶದ ಕುಸ್ತಿಪಟುಗಳ ಪ್ರತಿಭಟನೆ ಮುಂದುವರೆದಿದೆ. ಅನೇಕ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಫೆಡರೇಶನ್‌ನ ಮುಖ್ಯಸ್ಥ ಮತ್ತು ಹಲವು ತರಬೇತುದಾರರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಎರಡನೇ ದಿನವು ಸುಮಾರು 200 ಭಾರತೀಯ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಅವರು ತಮ್ಮ ಫೆಡರೇಶನ್ ಮುಖ್ಯಸ್ಥರು ಮತ್ತು ಇತರ ಹಲವಾರು ತರಬೇತುದಾರರು ಅನೇಕ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಲ್ಲಿ ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಇತರ ತರಬೇತುದಾರರು ತಪ್ಪಿತಸ್ಥರು ಎಂದು ವಿನೇಶ್ ಫೋಗಟ್ ಆರೋಪಿಸಿದ್ದಾರೆ.

72 ಗಂಟೆಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಕುಸ್ತಿ ಒಕ್ಕೂಟಕ್ಕೆ ಸೂಚನೆ
ಭಾರತದ ಅತ್ಯಂತ ಜನಪ್ರಿಯ ಮಹಿಳಾ ಕುಸ್ತಿಪಟುಗಳಲ್ಲಿ ಒಬ್ಬರಾದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ದೇಶಕ್ಕಾಗಿ ಚಿನ್ನದ ಪದಕ ಗೆದ್ದಿರುವ ವಿನೇಶ್ ಫೋಗಟ್ ಅವರು ಸಾರ್ವಜನಿಕವಾಗಿ ಆರೋಪ ಮಾಡಿದ್ದಾರೆ. ಇದಾದ ಬೆನ್ನಲ್ಲೇ ದೇಶದ ಕ್ರೀಡಾ ಸಚಿವಾಲಯ ಬುಧವಾರ 72 ಗಂಟೆಗಳ ಒಳಗೆ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು ಎಂದು ಸೂಚಿಸಿದೆ.
ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ಜಂತರ್ ಮಂತರ್‌ನಲ್ಲಿ ಎರಡನೇ ದಿನವೂ ಮೌನ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಆರೋಪ ತಳ್ಳಿ ಹಾಕಿದ ಬಿಜೆಪಿ ಸಂಸದ ಬ್ರಿಜ್ ಭೂಷಣ್
ಬಿಜೆಪಿ ಸಂಸದರೂ ಆಗಿರುವ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಚರಣ್ ಸಿಂಗ್ ಕುಸ್ತಿಪಟುಗಳ ಆರೋಪವನ್ನು ತಳ್ಳಿಹಾಕಿದ್ದಾರೆ.
"ಎಲ್ಲಾ ಲೈಂಗಿಕ ಕಿರುಕುಳದ ಆರೋಪಗಳು ಸುಳ್ಳು ಮತ್ತು ಅವು ನಿಜವೆಂದು ಸಾಬೀತಾದರೇ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಾನು ಬಜರಂಗ್ ಪುನಿಯಾ ಸೇರಿದಂತೆ ಕುಸ್ತಿಪಟುಗಳನ್ನು ಸಂಪರ್ಕಿಸಲು ಪ್ರಯತ್ನಿಸಿದೆ, ಆದರೆ ಸಾಧ್ಯವಾಗಲಿಲ್ಲ" ಎಂದು 66 ವರ್ಷ ವಯಸ್ಸಿನ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಚರಣ್ ಸಿಂಗ್ ಹೇಳಿದ್ದಾರೆ.
" 97% ಆಟಗಾರರು ಡಬ್ಲ್ಯುಎಫ್‌ಐ ಪರವಾಗಿದ್ದಾರೆ. ಲೈಂಗಿಕ ಕಿರುಕುಳದ ಆರೋಪಗಳಿಂದ ನನಗೆ ನೋವಾಗಿದೆ. ನನ್ನ ವಿರುದ್ಧ ಅಥವಾ ಮುಖ್ಯ ಕೋಚ್ ವಿರುದ್ಧ ಯಾವುದೇ ಆಟಗಾರ ಆ ಆರೋಪಗಳನ್ನು ಹೊರಿಸುವಂತಿಲ್ಲ. ಕೆಲವು ಕುಸ್ತಿಪಟುಗಳ ಮೇಲೆ ಧರಣಿ ಕುಳಿತುಕೊಳ್ಳುವಂತೆ ಒತ್ತಡವನ್ನು ಸೃಷ್ಟಿಸಲಾಗಿದೆ" ಎಂದು ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ ಒಲಂಪಿಕ್ಸ್ ಪದಕ ವಿಜೇತ ಬಜರಂಗ್ ಪೂನಿಯಾ ಭಾಗಿ
ಟೋಕಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು, ತಮ್ಮ ಕುಸ್ತಪಟುಗಳಿಗೆ ಸಾಥ್ ನೀಡಿದ್ದಾರೆ. "ಕುಸ್ತಿ ಫೆಡರೇಶನ್‌ನ ಕೆಲಸವೆಂದರೆ ಆಟಗಾರರನ್ನು ಬೆಂಬಲಿಸುವುದು ಮತ್ತು ಅವರ ಕ್ರೀಡಾ ಅಗತ್ಯಗಳನ್ನು ನೋಡಿಕೊಳ್ಳುವುದು. ಇಲ್ಲಿ ಏನಾದರೂ ಸಮಸ್ಯೆಯಿದ್ದರೇ ಅದನ್ನು ಪರಿಹರಿಸಬೇಕು" ಎಂದು ಟ್ವೀಟ್ ಮಾಡಿದ್ದಾರೆ.
ವಿನೇಶ್ ಫೋಗಟ್ ಸೋದರ ಸಂಬಂಧಿ, ಬಿಜೆಪಿ ಸದಸ್ಯೆ ಮತ್ತು ಹರಿಯಾಣ ಸರ್ಕಾರದ ಭಾಗವಾಗಿರುವ ಬಬಿತಾ ಫೋಗಟ್ ಗುರುವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. "ಕುಸ್ತಿಯ ಈ ವಿಷಯದಲ್ಲಿ ನಾನು ನನ್ನ ಎಲ್ಲಾ ಸಹ ಆಟಗಾರ ಪರ ನಿಲ್ಲುತ್ತೇನೆ. ಈ ವಿಷಯವನ್ನು ಪ್ರತಿ ಹಂತದಲ್ಲೂ ಸರ್ಕಾರದೊಂದಿಗೆ ಪ್ರಸ್ತಾಪಿಸಲು ನಾನು ಕೆಲಸ ಮಾಡುತ್ತೇನೆ" ಎಂದು ಮಾಜಿ ಕುಸ್ತಿಪಟು ಟ್ವೀಟ್ ಮಾಡಿದ್ದಾರೆ.

ಮಹಿಳಾ ಆಯೋಗದಿಂದ ಕ್ರೀಡಾ ಸಚಿವಾಲಯಕ್ಕೆ ನೋಟಿಸ್ ಜಾರಿ
ಪ್ರತಿಭಟನೆಯ ಭಾಗವಾಗಿರುವ ಸಹ ಕುಸ್ತಿಪಟು ಮತ್ತು ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು ಕೂಡ ಆರೋಪಗಳನ್ನು ಬೆಂಬಲಿಸಿದ್ದಾರೆ. "ಕ್ರೀಡಾಪಟುಗಳು ದೇಶಕ್ಕಾಗಿ ಪದಕಗಳನ್ನು ಗೆಲ್ಲಲು ಶ್ರಮಿಸುತ್ತಾರೆ, ಆದರೆ ಫೆಡರೇಶನ್ ನಮ್ಮನ್ನು ನಿರಾಸೆಗೊಳಿಸುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
ಮಹಿಳೆಯರ ಸಮಸ್ಯೆಗಳ ಬಗ್ಗೆ ಕೆಲಸ ಮಾಡುವ ಸ್ಥಳೀಯ ಸಂಸ್ಥೆಯಾದ ದೆಹಲಿ ಮಹಿಳಾ ಆಯೋಗವು ಕ್ರೀಡಾ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದ್ದು, ಪ್ರಕರಣ ದಾಖಲಿಸುವಂತೆ ನಗರ ಪೊಲೀಸರಿಗೆ ಸೂಚಿಸಿದೆ. ಸಂಘಟನೆಯ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಭೇಟಿ ಮಾಡಿ ಮಾತನಾಡಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಾರ್ವಜನಿಕ ಪ್ರತಿಭಟನೆಯಲ್ಲಿ 28 ವರ್ಷದ ವಿನೇಶ್ ಫೋಗಟ್ ಅವರು ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಚರಣ್ ಸಿಂಗ್ ಮತ್ತು ತರಬೇತುದಾರರ ವಿರುದ್ಧ ಆರೋಪ ಮಾಡಿದ್ದಾರೆ. ಇದನ್ನು ಹಲವಾರು ಜನಪ್ರಿಯ ಕುಸ್ತಿಪಟುಗಳು ಬೆಂಬಲಿಸಿದ್ದಾರೆ.
"ಮಹಿಳಾ ಕುಸ್ತಿಪಟುಗಳಿಗೆ ರಾಷ್ಟ್ರೀಯ ಶಿಬಿರಗಳಲ್ಲಿ ತರಬೇತುದಾರರು ಮತ್ತು ಡಬ್ಲ್ಯುಎಫ್‌ಐ ಅಧ್ಯಕ್ಷರು ಲೈಂಗಿಕ ಕಿರುಕುಳ ನೀಡಿದ್ದಾರೆ. ರಾಷ್ಟ್ರೀಯ ಶಿಬಿರದಲ್ಲಿ ಕನಿಷ್ಠ 10 ರಿಮದ 20 ಮಹಿಳಾ ಕ್ರೀಡಾಪಟುಗಳು ನನ್ನ ಬಳಿ ಬಂದು ತಮ್ಮ ಕಥೆಗಳನ್ನು ಹೇಳಿದ್ದಾರೆ" ಎಂದು ವಿನೇಶ್ ಫೋಗಟ್ ಕಣ್ಣೀರು ಹಾಕಿದ್ದಾರೆ.
ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ಬೆನ್ನಲ್ಲೇ ದೇಶದ ರಾಷ್ಟ್ರೀಯ ಸೈಕ್ಲಿಂಗ್ ತಂಡದ ಕೋಚ್ ಅನ್ನು ವಜಾಗೊಳಿಸಿದ ತಿಂಗಳುಗಳ ನಂತರ ಈಗ ಕುಸ್ತಿ ಒಕ್ಕೂಟದಲ್ಲೂ ಆರೋಪಗಳು ಬಂದಿವೆ.












Click it and Unblock the Notifications