Sabarimala: 'ಶಬರಿಮಲೆ ಭಕ್ತರಿಗೆ ತೀವ್ರ ತೊಂದರೆ - ಕೂಡಲೇ ಪರಿಹರಿಸಿ' ಕೇರಳ ಸಿಎಂಗೆ ಪತ್ರ
ಶಬರಿಮಲೆಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನಿರ್ವಹಣೆ ಕಷ್ಟವಾಗುತ್ತಿದೆ. ಮೂಲಭೂತ ಸೌಲಭ್ಯಗಳಿಲ್ಲದೆ ಗಂಟೆಗಟ್ಟಲೆ ಸರತಿ ಸಲಾಲಿನಲ್ಲಿ ಭಕ್ತರು ಅಯ್ಯಪ್ಪನ ದರ್ಶನಕ್ಕಾಗಿ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅಯ್ಯಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲೂ ಹೆಚ್ಚಾಗುತ್ತಿದೆ.
ಅಯ್ಯಪ್ಪನ ದರ್ಶನಕ್ಕೆ ಶಬರಿಮಲೆಗೆ ತೆರಳುವ ಭಕ್ತರಿಗೆ ಸೌಲಭ್ಯಗಳನ್ನು ಹೆಚ್ಚಿಸುವಂತೆ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ. ಆದಷ್ಟು ಬೇಗ ಭಕ್ತರ ದರ್ಶನವಾಗುವಂತೆ, ಇದಕ್ಕೆ ಬೇಕಾದ ಕ್ರಮ ಕೈಗೊಳ್ಳುವಂತೆ ಹಾಗೂ ದೇವಸ್ಥಾನದಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ.

ಇದರೊಂದಿಗೆ ಭಕ್ತರಿಗೆ ಆಹಾರ, ನೀರು ಮತ್ತು ವೈದ್ಯಕೀಯ ಸೌಲಭ್ಯಗಳಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಕಿಶನ್ ರೆಡ್ಡಿ ಅವರು ಪಿಣರಾಯಿ ವಿಜಯನ್ ಅವರನ್ನು ವಿನಂತಿಸಿದರು. ಶಬರಿಮಲೆ ದೇಗುಲದಲ್ಲಿ ಹಾಗೂ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಅಯ್ಯಪ್ಪ ಭಕ್ತರಿಗೆ ತೊಂದರೆ ಆಗುತ್ತಿರುವಂತೆ ಕಾಣುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಭಕ್ತರ ಕನಿಷ್ಠ ಸೌಲಭ್ಯಗಳನ್ನು ಸುಧಾರಿಸಬೇಕು ಎಂದು ಕೇಂದ್ರ ಸಚಿವರು ಕೇರಳ ಸಿಎಂಗೆ ಪತ್ರದಲ್ಲಿ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
"ಶಬರಿಮಲೆ ದೇವಸ್ಥಾನದ ಜೊತೆಗೆ ಭಕ್ತರ 40 ದಿನಗಳ ಆಧ್ಯಾತ್ಮಿಕ ಪ್ರಯಾಣವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಒಂದು ಕೋಟಿಗೂ ಹೆಚ್ಚು ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಇವರಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲೇ 15 ಲಕ್ಷ ಭಕ್ತರಿದ್ದಾರೆ. ಇದು ನಿಮಗೂ ತಿಳಿದಿದೆ. ಅಯ್ಯಪ್ಪನ ಸನ್ನಿಧಿಯಲ್ಲಿ ದರ್ಶನ ಪಡೆಯಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಭಾವಿಸುತ್ತೇನೆ. ದರ್ಶನಕ್ಕೆ ತೆರಳುವ ವೇಳೆ ಬಾಲಕಿಯೊಬ್ಬಳು ಸಾವನ್ನಪ್ಪಿದ ಸುದ್ದಿ ನನ್ನನ್ನು ಬೆಚ್ಚಿಬೀಳಿಸಿದೆ. ಭಕ್ತರು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಈ ರೀತಿಯಲ್ಲಿ ಕ್ರಮ ಕೈಗೊಳ್ಳಿ. ಎನ್‌ಜಿಒಗಳಿಂದ ಸಹಾಯ ಪಡೆದುಕೊಳ್ಳಿ" ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಪತ್ರದಲ್ಲಿ ತಿಳಿಸಿದ್ದಾರೆ.

ಶಬರಿಮಲೆಯ ಸೌಲಭ್ಯಗಳು:-
ಶಬರಿಮಲೆ ದೇವಸ್ಥಾನದಲ್ಲಿ ಸೌಲಭ್ಯಗಳು ಸರಿಯಾಗಿಲ್ಲ ಎಂಬ ವರದಿಗಳಿವೆ. ಇದೇ ವಿಚಾರವಾಗಿ ಇತ್ತೀಚೆಗೆ ಹಿಂದೂ ಐಕ್ಯವೇದಿ ಎಂಬ ಸಂಘಟನೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಕೂಡ ವಿಜಯನ್ ಸರ್ಕಾರವನ್ನು ಟೀಕಿಸುತ್ತಿವೆ. ಆದಾಗ್ಯೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸರ್ಕಾರ ಹೇಳಿದೆ.
ಶಬರಿಮಲೆಗೆ ವಿಶೇಷ ರೈಲುಗಳು:-
ಶಬರಿಮಲೆಗೆ ತೆರಳುವ ಭಕ್ತರಿಗಾಗಿ ದಕ್ಷಿಣ ಮಧ್ಯ ರೈಲ್ವೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ವಿಶೇಷವಾಗಿ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ 22 ವಿಶೇಷ ರೈಲುಗಳನ್ನು ಓಡಿಸಲಾಗುವುದು ಎಂದು ಪ್ರಕಟಿಸಿದೆ. ಈ ರೈಲುಗಳು ಸಿಕಂದರಾಬಾದ್-ಕೊಲ್ಲಂ, ಸಿಕಂದರಾಬಾದ್-ಕೊಟ್ಟಾಯಂ ಮತ್ತು ಕಾಕಿನಾಡ-ಕೊಟ್ಟಾಯಂ ನಡುವೆ ಸಂಚರಿಸಲಿವೆ. ಡಿಸೆಂಬರ್ 27-30 ರ ನಡುವೆ ನಾಲ್ಕು ರೈಲುಗಳು ಮತ್ತು ಜನವರಿ 3-15 ರ ನಡುವೆ 18 ರೈಲುಗಳು ಓಡಾಡಲಿವೆ.












Click it and Unblock the Notifications