ಅತ್ಯಾಚಾರಿಗಳ ಬಿಡುಗಡೆ ವಿರುದ್ಧದ ಅರ್ಜಿ ವಜಾ: ಸುಪ್ರೀಂ ಕೋರ್ಟ್‌ನಲ್ಲಿ ಬಿಲ್ಕಿಸ್ ಬಾನೊಗೆ ಹಿನ್ನೆಡೆ
ನವದೆಹಲಿ, ಡಿಸೆಂಬರ್ 17: 2002ರ ಕೋಮು ಹಿಂಸಾಚಾರದ ವೇಳೆ, ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ಎಸಗಿ ಆಕೆಯ ಕುಟುಂಬದ ಸದಸ್ಯರನ್ನು ಕೊಂದು ಹಾಕಿದ ಅಪರಾಧಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಸಂತ್ರಸ್ತೆ ಬಿಲ್ಕಿಸ್ ಬಾನೊ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಅಪರಾಧಿಗಳು ಆಗಸ್ಟ್ 15 ರಂದು ಜೈಲಿನಿಂದ ಹೊರ ಬಂದಿದ್ದಾರೆ. ಉತ್ತಮ ನಡವಳಿಕೆ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಗುಜರಾತ್ ಸರ್ಕಾರ ಹೇಳಿಕೊಂಡಿತ್ತು. ಕೇಂದ್ರ ಗೃಹ ಇಲಾಖೆಯ ಅನುಮೋದನೆಯೊಂದಿಗೆ ಈ ನಿರ್ಧಾರ ಕೈಗೊಂಡಿರುವುದಾಗಿ ಗುಜರಾತ್ ಸರ್ಕಾರ ಹೇಳಿಕೊಂಡಿತ್ತು.
ಇತ್ತೀಚಿನ ನೀತಿಯು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳನ್ನು ಶಿಕ್ಷೆ ಅವಧಿಗಿಂತ ಮುಂಚಿತವಾಗಿ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಹೇಳುತ್ತದೆ. ಆದರೆ, 1992 ರ ನೀತಿಯು ಬಿಡುಗೊಂಡಿರುವ ಅಪರಾಧಿಗಳಿಗೆ ಅನ್ವಯಿಸುತ್ತದೆ ಎಂಬ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಆ ಹಿನ್ನೆಲೆಯಲ್ಲಿ ಬಿಲ್ಕಿಸ್ ಬಾನೊ ಅರ್ಜಿಗಳನ್ನು ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಸಿ.ಟಿ. ರವಿಕುಮಾರ್ ಅವರನ್ನು ಒಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿದೆ.
ಗೋಧ್ರಾ ಹತ್ಯಾಕಾಂಡದ ಬಳಿಕ ಗುಜರಾತ್‌ನಲ್ಲಿ ವ್ಯಾಪಕ ಕೋಮುಗಲಭೆ ನಡೆದಿತ್ತು. ಆಗ ಬಿಲ್ಕಿನ್ ಬಾನೊ ಅವರ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಆಕೆಯ ಪರಿವಾರದ ಏಳು ಸದಸ್ಯರನ್ನು ದುರುಳರು ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರನ್ನು ಅಪರಾಧಿಗಳೆಂದು ತೀರ್ಮಾನಿಸಲಾಗಿತ್ತು. 2008ರ ಜ.21 ರಂದು ವಿಶೇಷ ನ್ಯಾಯಾಲಯವು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಬಿಲ್ಕಿಸ್ ಬಾನೊ ಅತ್ಯಾಚಾರಗಳನ್ನು ಬಿಡುಗಡೆ ಮಾಡಿದ್ದಕ್ಕಾಗಿ ಗುಜರಾತ್‌ನ ಬಿಜೆಪಿ ಸರ್ಕಾರದ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ವಿರೋಧ ಪಕ್ಷಗಳ ನಾಯಕರು ಗುಜರಾತ್ ಸರ್ಕಾರ ಹಾಗೂ ಮೋದಿ ನೇತೃತ್ವದ ಕೇಂದ್ರ ಸರ್ಕಾರಗಳ ವಿರುದ್ಧ ಹರಿಹಾಯ್ದಿದ್ದರು.












Click it and Unblock the Notifications