ಭಾರತದಲ್ಲಿ ಜೂನ್ ವೇಳೆಗೆ ಮತ್ತೊಂದು ಲಸಿಕೆ; ಕೋವೊವ್ಯಾಕ್ಸ್‌ಗೆ ಸಿದ್ಧತೆ
ನವದೆಹಲಿ, ಜನವರಿ 30: ಭಾರತದ ಲಸಿಕಾ ಉತ್ಪಾದನಾ ಸಂಸ್ಥೆ ಸೆರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ, ಶೀಘ್ರವೇ ಮತ್ತೊಂದು ಲಸಿಕೆ "ಕೋವೊವ್ಯಾಕ್ಸ್" ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ. ಅಮೆರಿಕದ ಲಸಿಕಾ ಅಭಿವೃದ್ಧಿ ಸಂಸ್ಥೆ ನೋವಾವ್ಯಾಕ್ಸ್ ಸಹಯೋಗದೊಂದಿಗೆ ಇದೇ ಜೂನ್ ನಲ್ಲಿ ಲಸಿಕೆ ಹೊರತರಲಾಗುವುದು ಎಂದು ಸೆರಂ ಇನ್ ಸ್ಟಿಟ್ಯೂಟ್ ಸಿಇಒ ಅದಾರ್ ಪೂನಾವಲ್ಲಾ ತಿಳಿಸಿದ್ದಾರೆ.
ಅಮೆರಿಕದ ಈ ಔಷಧ ತಯಾರಿಕಾ ಸಂಸ್ಥೆಯ ಲಸಿಕೆಯು ಬ್ರಿಟನ್ ಕೊರೊನಾ ರೂಪಾಂತರ ಸೋಂಕಿನ ಮೇಲೆ 89.3% ಪರಿಣಾಮಕಾರಿ ಎಂದು ಪ್ರಯೋಗದಲ್ಲಿ ಸಾಬೀತಾಗಿದ್ದು, ಭಾರತದಲ್ಲೂ ಲಸಿಕೆ ಅಭಿವೃದ್ಧಿ ಕಾರ್ಯ ಸಾಗಿದೆ.
ಈಗಾಗಲೇ ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಉತ್ಪಾದನೆ ಮಾಡಿರುವ ಪುಣೆ ಮೂಲದ ಸೆರಂ ಇನ್ ಸ್ಟಿಟ್ಯೂಟ್, ಈ ಎರಡನೇ ಲಸಿಕೆಯ ಸ್ಥಳೀಯ ಪ್ರಯೋಗಕ್ಕೆ ಅರ್ಜಿ ಸಲ್ಲಿಸಿದೆ. ನೋವಾವ್ಯಾಕ್ಸ್ ಜೊತೆ ಕೋವಿಡ್ 19 ಲಸಿಕೆಯ ಅಭಿವೃದ್ಧಿ ಕಾರ್ಯ ಉತ್ತಮ ಫಲ ಕೊಡುವ ನಿರೀಕ್ಷೆಯಿದೆ. ಭಾರತದಲ್ಲಿ ಈ ಲಸಿಕೆ ಪ್ರಯೋಗಕ್ಕೆ ಈಗಾಗಲೇ ಅನುಮತಿ ಕೋರಲಾಗಿದೆ. ಇದೇ ಜೂನ್ ನಲ್ಲಿ ಕೋವೊವ್ಯಾಕ್ಸ್ ಬಿಡುಗಡೆ ಮಾಡುವ ಭರವಸೆ ಇದೆ ಎಂದು ಪೂನಾವಲ್ಲಾ ಟ್ವೀಟ್ ಮಾಡಿದ್ದಾರೆ.

ಇದೇ ಜನವರಿ 16ರಿಂದ ಭಾರತದಾದ್ಯಂತ ಲಸಿಕಾ ಅಭಿಯಾನ ಆರಂಭವಾಗಿದೆ. ಸೆರಂ ಇನ್ ಸ್ಟಿಟ್ಯೂಟ್ ನ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆಗಳ ಬಳಕೆಗೆ ಅನುಮೋದನೆ ದೊರೆತಿದ್ದು, ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲಾಗುತ್ತಿದೆ.
ಕೋವಿಶೀಲ್ಡ್ ಲಸಿಕೆಯನ್ನು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಬ್ರಿಟಿಷ್-ಸ್ವೀಡಿಷ್ ಮೂಲದ ಆಸ್ಟ್ರಾಜೆನೆಕಾ ಸಹಯೋಗದಲ್ಲಿ ಭಾರತದ ಸೆರಂ ಇನ್ ಸ್ಟಿಟ್ಯೂಟ್ ಅಭಿವೃದ್ಧಿಗೊಳಿಸಿದೆ.
ಏಪ್ರಿಲ್ ವೇಳೆಗೆ ಸೆರಂ ಇನ್ ಸ್ಟಿಟ್ಯೂಟ್ ತಿಂಗಳಿಗೆ 40ರಿಂದ 50ಮಿಲಿಯನ್ ಡೋಸ್ ಗಳ ನೋವಾವ್ಯಾಕ್ಸ್ ಲಸಿಕೆ ತಯಾರಿಸುವುದಾಗಿ ಈ ಹಿಂದೆ ತಿಳಿಸಿತ್ತು. ಅಮೆರಿಕದ ನೋವಾವ್ಯಾಕ್ಸ್ ಲಸಿಕೆ ಕೊರೊನಾ ಸೋಂಕಿನ ವಿರುದ್ಧ 95.6% ಪರಿಣಾಮಕಾರಿಯಾಗಿದ್ದು, ಬ್ರಿಟನ್ ಕೊರೊನಾ ರೂಪಾಂತರ ಸೋಂಕಿನ ವಿರುದ್ಧ 85.6% ಪರಿಣಾಮಕಾರಿ ಎನ್ನಲಾಗಿದೆ.












Click it and Unblock the Notifications