ಪರಪ್ಪನ ಅಗ್ರಹಾರದ ಸುತ್ತಮುತ್ತ ಮತ್ತೆ ತಮಿಳರ ಕಲರವ ಶುರು?

Posted By:
Subscribe to Oneindia Kannada

ಅಕ್ರಮ ಆಸ್ತಿಗಳಿಕೆ ಆರೋಪದಡಿಯಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರನ್ನು ' ದೋಷಿ ' (A 2) ಎಂದು ತೀರ್ಮಾನಿಸಿರುವ ಸುಪ್ರೀಂ ಕೋರ್ಟ್ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ.

ಜೊತೆಗೆ ಈ ಕೂಡಲೇ ನ್ಯಾಯಾಂಗ ಬಂಧನಕ್ಕೊಳಗಾಗುವಂತೆ ಸುಪ್ರೀಂ ಆದೇಶ ನೀಡುವ ಮೂಲಕ, ಶಶಿಕಲಾ ನಟರಾಜನ್ ಬೆಂಗಳೂರಿನ ಪರಪ್ಪನ ಕೇಂದ್ರ ಕಾರಾಗೃಹ ಸೇರುವುದಕ್ಕೆ ಕ್ಷಣಗಣನೆ ಆರಂಭವಾಗಿದೆ.

ಇದೇ ಕೇಸಿನ ವಿಚಾರದಲ್ಲಿ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರನ್ನು ದೋಷಿ ಎಂದು ಬೆಂಗಳೂರಿನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಸೆಪ್ಟಂಬರ್ 27,2014ರಂದು ಜಯಲಲಿತಾ ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ್ದರು. 21ದಿನಗಳ ಸೆರೆವಾಸದ ನಂತರ ಜಯಾ ಬಿಡುಗಡೆಗೊಂಡಿದ್ದರು. (ಶಶಿಕಲಾ ಮುಂದಿರುವ ಅಂತಿಮ 4 ಆಯ್ಕೆಗಳಿವು)

Sasikala convicted: Huge numbers of supporters expected gather in and around Parappana Agrahara

ಜಯಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಷ್ಟು ದಿನ ಅಲ್ಲಿ ಯಾವ ರೀತಿ ವಾತಾವರಣ ಇತ್ತೆಂದರೆ, ಇದೇನು ಕರ್ನಾಟಕನೋ ಅಥವಾ ತಮಿಳುನಾಡೋ ಎನ್ನುವಂತಿತ್ತು. ಅಷ್ಟರಮಟ್ಟಿಗೆ ಜೈಲಿನ ಸುತ್ತಮುತ್ತ ತಮಿಳರು ಆವರಿಸಿಕೊಂಡಿದ್ದರು.

ಈ 21ದಿನದಲ್ಲಿ ಪೊಲೀಸರ ಯಾವ ಎಚ್ಚರಿಕೆಗೂ ತಲಕೆಡಿಸಿಕೊಳ್ಳದೇ, ಸ್ಥಳೀಯರ ಮಾತಿಗೂ ಬೆಲೆಕೊಡದೇ ಜಯಾ ಅಭಿಮಾನಿಗಳು, ಎಐಎಡಿಎಂಕೆ ಕಾರ್ಯಕರ್ತರು ಆಡಿದ್ದೇ ಆಟದಂತಿತ್ತು ಅಂದಿನ ಜೈಲಿನ ಸುತ್ತಮುತ್ತಲಿನ ಪರಿಸ್ಥಿತಿ.

ಪರಪ್ಪನ ಅಗ್ರಹಾರವಿರುವ ಹೊಸೂರು ರಸ್ತೆ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಅನ್ನೋದನ್ನು ಮರೆತು ಸಿಕ್ಕಸಿಕ್ಕಲ್ಲಿ ವಾಹನ ನಿಲ್ಲಿಸಿ, ಧರಣಿ ನಡೆಸಿ ಜಯಾ ಅಭಿಮಾನಿಗಳು ಮಾಡಿದ್ದ ರಂಪರಾಮಾಯಣ ಹೇಳತೀರದು. ಈಗ ಶಶಿಕಲಾ ಸರದಿ.

ಜಯಾ ಎಲ್ಲಿ, ಶಶಿಕಲಾ ಎಲ್ಲಿ ಎನ್ನುವ ಮಾತಿದ್ದರೂ, ತಮಿಳರ ಅಭಿಮಾನ ಬೇರೆಯದ್ದೇ. ಜೈಲಿಗೆ ಹೋಗುತ್ತಿರುವ ಈ ಸಂದರ್ಭವನ್ನು ಶಶಿಕಲಾ ಯಾವ ರೀತಿ ಬಳಸಿಕೊಳ್ಳಲಿದ್ದಾರೆ ಎನ್ನುವುದರ ಮೇಲೆ ಅಭಿಮಾನಿಗಳ ' ಅಭಿಮಾನ' ವನ್ನು ಲೆಕ್ಕಾಚಾರ ಹಾಕಬಹುದಾಗಿದೆ.

ಜಯಲಲಿತಾ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಹಾಗಾಗಿ ಪ್ರತೀದಿನವೂ ಪರಪ್ಪನ ಅಗ್ರಹಾರದ ಸುತ್ತಮುತ್ತ ತಮಿಳುನಾಡಿನಿಂದ ಜನಸಾಗರವೇ ಹರಿದು ಬರುತ್ತಿತ್ತು. ಆದರೆ, ಶಶಿಕಲಾ ವಿಚಾರದಲ್ಲಿ ಹಾಗಲ್ಲಎನ್ನುವುದು ಒಪ್ಪಿಕೊಳ್ಳುವ ಮಾತಾದರೂ, ಶಶಿಕಲಾಗೆ ತನ್ನ ಜನಪ್ರಿಯತೆಯನ್ನು ತೋರಿಸಲು ' ಜೈಲು ಸಹವಾಸ' ವೇದಿಕೆಯಾದರೂ ಆಗಬಹುದು. (ಓಪಿಎಸ್ ಮನೆಯಲ್ಲಿ ಮುಗಿಲು ಮುಟ್ಟಿದ ಸಂಭ್ರಮಾಚರಣೆ)

ಅಮ್ಮನಿಗಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದೇನೆಂದು ಬೃಹನ್ನಾಟಕವನ್ನಾಡಿ, ಜೈಲು ಶಿಕ್ಷೆಯ ಮೂಲಕ ಸಾಂತ್ವನಗಿಟ್ಟಿಸಿಕೊಳ್ಳುವ ರಾಜಕೀಯ ನಡೆಗೆ ಮುಂದಾದರೆ ಮತ್ತೆ ತಮಿಳರು ಶಶಿಕಲಾಗೆ ಕ್ಲೀನ್ ಬೋಲ್ಡ್ ಆದರೂ ಆಗಬಹುದು.

ಎಐಎಡಿಎಂಕೆ ಪಕ್ಷದ ಬಹುತೇಕ ಶಾಸಕರು ಇನ್ನೂ ಶಶಿಕಲಾ ಪರವಾಗಿಯೇ ನಿಂತಿದ್ದಾರೆ. ಜೊತೆಗೆ, ಶಶಿಕಲಾ ಜೊತೆಗೇ ಬೆಳೆದು ಬಂದ ಮನ್ನಾರ್ ಗುಡಿ ಗ್ಯಾಂಗ್ ಸದಸ್ಯರು. ಹೀಗಾಗಿ, ಶಶಿಕಲಾ ಯೋಗ ಮತ್ತು ಕ್ಷೇಮವನ್ನು ವಿಚಾರಿಸಿಕೊಳ್ಳಲು ಬರುವ ವಿಐಪಿ, ಬೆಂಬಲಿಗರು, ಕಾರ್ಯಕರ್ತರ ಸಂಖ್ಯೆ ಕಮ್ಮಿಯೇನೂ ಇರುವುದಿಲ್ಲ.

ಒಟ್ಟಿನಲ್ಲಿ ಬೆಂಗಳೂರು ಪೊಲೀಸರಿಗೆ ಶಶಿಕಲಾ ಬೆಂಬಲಿಗರನ್ನು ನಿಭಾಯಿಸಲೇ ಬೇಕಾದ ಅನಿವಾರ್ಯತೆ, ಸ್ಥಳೀಯ ನಿವಾಸಿಗಳಿಗೆ ಇನ್ನಷ್ಟು ದಿನ ಟ್ರಾಫಿಕ್ ಜಾಮ್, ಕಾನೂನು ಸುವ್ಯವಸ್ಥೆಯ ಕಿರಿಕಿರಿ. ಪರಪ್ಪನ ಅಗ್ರಹಾರದ ಸುತ್ತಮುತ್ತ ತಮಿಳರ ಕಲರವ ಮತ್ತೆ ಆರಂಭವಾಗಲಿದೆ, ಅದು ಇನ್ನೆಷ್ಟು ದಿನವೋ? ಒಟ್ಟಿನಲ್ಲಿ ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸದೇ ಇದ್ದರೆ ಸಾಕು..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
AIADMK General Secretary Sasikala Natarajan convicted and to be sent to Parappana Agrahara central prison. Huge numbers of supporters expected to gather in and around Parappana Agrahara.
Please Wait while comments are loading...