Monsoon Session 2023: ಮುಂಗಾರು ಅಧಿವೇಶನದಲ್ಲಿ ಅವಿಶ್ವಾಸ ತಿಕ್ಕಾಟ!
ನವದೆಹಲಿ: ಮಣಿಪುರ ಹಿಂಸಾಚಾರ ಸಂಬಂಧ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ತಿಕ್ಕಾಟ ಬಲು ಜೋರಾಗಿದೆ. ಆಡಳಿತ ಪಕ್ಷ ಹಾಗೂ ವಿಪಕ್ಷ ನಾಯಕರ ವಾಗ್ವಾದ ಇಂದು ಕೂಡ ಮುಂದುವರಿದಿದ್ದು, ಇದೇ ಸಂದರ್ಭದಲ್ಲಿ ಸಂಸದ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಅಕ್ಷರಗಳು ಇಡೀ ಸದನದ ಗಮನ ಸೆಳೆದು ವಾಗ್ವಾದವನ್ನು ಮತ್ತಷ್ಟು ಜೋರು ಮಾಡಿದೆ.
ಅಷ್ಟಕ್ಕೂ ನರೇಂದ್ರ ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಸಂಸದ್ ಟಿವಿಯಲ್ಲಿ ಮೂಡಿಬಂದ ಸಾಲು ವಿವಾದಕ್ಕೆ ಕಾರಣವಾಗಿದೆ. ಮಣಿಪುರದ ಹಿಂಸಾಚಾರ ಸಂಬಂಧ ಹಾಗೂ ಅವಿಶ್ವಾಸ ನಿರ್ಣಯದ ಕುರಿತು ರಾಹುಲ್ ಗಾಂಧಿ ಇಂದು ಸಂಸತ್ ಅಧಿವೇಶನದಲ್ಲಿ ಮಾತನಾಡಬೇಕಿತ್ತು. ಆದರೆ ರಾಹುಲ್ ಗೈರು ಹಾಜರಿ ಹಿನ್ನೆಲೆ ಗದ್ದಲ ಎದ್ದಿತ್ತು. ಈ ವೇಳೆ ಲೋಕಸಭೆಯ ಕಾಂಗ್ರೆಸ್‌ನ ಉಪ ನಾಯಕ ಗೌರವ್ ಗೊಗೊಯ್ ಚರ್ಚೆ ಶುರು ಮಾಡಿದರು. ಹೀಗೆ ಚರ್ಚೆ ನಡೆಯುವಾಗ ಸಂಸದ್ ಟಿವಿ ಕೂಡ ಚರ್ಚೆಯ ಭಾಗವಾಯಿತು.

ಚರ್ಚೆ ಬಿಟ್ಟು ಸರ್ಕಾರದ ಸಾಧನೆಗೆ ಒತ್ತು?
ಇನ್ನು ರಾಹುಲ್ ಗಾಂಧಿ ಗೈರು ಹಾಜರಿ ಹಿನ್ನೆಲೆಯಲ್ಲಿ ಬಿಜೆಪಿ ಎಂಪಿ ನಿಶಿಕಾಂತ್ ದುಬೆಗೆ ಸ್ಪೀಕರ್ ಅವಕಾಶ ಕಲ್ಪಿಸಿದ್ದರು. ಆದರೆ ಸಂಸದ ನಿಶಿಕಾಂತ್ ದುಬೆ ಮಾತು ಆರಂಭಿಸುವ ಮೊದಲು, ಬಿಎಸ್‌ಪಿ ಸಂಸದ ದಾನಿಷ್ ಅಲಿ ಮಧ್ಯಪ್ರವೇಶ ಮಾಡಿದರು. ಸಂಸದ್ ಟಿವಿ ಪರದೆ ಮೇಲೆ ಪ್ರಸಕ್ತ ಚರ್ಚೆಯ ವಿಚಾರ ಬಿಟ್ಟು ಸರ್ಕಾರದ ಸಾಧನೆ ಪ್ರದರ್ಶಿಸುತ್ತಿದ್ದಾರೆ ಎಂದು ಸ್ಪೀಕರ್ ಗಮನಕ್ಕೆ ತಂದರು. ದಾನಿಷ್ ಅಲಿ ಈ ಪ್ರಶ್ನೆ ಹಾಕುತ್ತಿದ್ದಂತೆಯೇ ಸದನ ಗಂಭೀರವಾಗಿತ್ತು. ಜಗಳ ಮತ್ತಷ್ಟು ಜೋರಾಗಿತ್ತು. ಆಗ ದಾನಿಷ್ ಅಲಿ ಪ್ರಶ್ನೆಗೆ ಸ್ಪೀಕರ್ ಓಂ ಬಿರ್ಲಾ ಉತ್ತರಿಸದರು.
ಟಿವಿ ವಿಚಾರಕ್ಕೂ ಜೋರಾಯ್ತು ಗಲಾಟೆ!
ಸಂಸದ್ ಟಿವಿ ಪರದೆ ಮೇಲೆ ಪ್ರಸಕ್ತ ಚರ್ಚೆ ವಿಚಾರವನ್ನು ಬಿಟ್ಟು ಬೇರೆ ತೋರಿಸುತ್ತಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ಕೋಲಾಹಲ ಸೃಷ್ಟಿಯಾಗಿತ್ತು. ವಿರೋಧ ಪಕ್ಷಗಳ ಸಂಸದರು ಪ್ರತಿಭಟನೆ ಮತ್ತಷ್ಟು ಜೋರು ಮಾಡಿದರು. ಹೀಗೆ ಗೊಂದಲ ಏರ್ಪಟ್ಟಾಗ ಮಧ್ಯ ಪ್ರವೇಶ ಮಾಡಿದ ಸ್ಪೀಕರ್ ಓಂ ಬಿರ್ಲಾ, ಮೇರೆ ಪಾಸ್ ಬಟನ್ ನಹೀ ಹೈ ಅಂದ್ರೆ ನನ್ನ ಬಳಿ ಬಟನ್ ಇಲ್ಲ ಅಂತಾ ಹೇಳಿದರು. ಆದರೂ ವಿಪಕ್ಷ ನಾಯಕರು ತಮ್ಮ ವಾಗ್ವಾದ ಮತ್ತು ಆಕ್ರೋಶ ಮುಂದುವರಿಸಿದರು. ಇನ್ನು ಈ ಕಿತ್ತಾಟದ ಕಿಚ್ಚಿಗೆ ತುಪ್ಪ ಸುರಿದ ದುಬೆ, ತಮ್ಮ ಭಾಷಣಕ್ಕೆ ವಿರೋಧ ಪಕ್ಷಗಳು ಹೆದರಿವೆ ಎಂದು ಕಾಲೆಳೆದರು.
ಟಿಎಂಸಿ ಸಂಸದ ಅಮಾನತು
ಕೇಂದ್ರ ಸಚಿವ ಪಿಯೂಷ್ ಗೋಯಲ್ ಇಂದು ಓ'ಬ್ರಿಯಾನ್ ಅವರನ್ನ ಅಮಾನತುಗೊಳಿಸುವ ಪ್ರಸ್ತಾವನೆ ಮಂಡಿಸಿದರು. ಇದಕ್ಕೂ ಮೊದಲು ಸಭಾಧ್ಯಕ್ಷರು ಹಾಗೂ ಒ'ಬ್ರಿಯಾನ್ ನಡುವೆ ವಾಗ್ವಾದ ನಡೆದಿತ್ತು. ರಾಜ್ಯಸಭೆ & ಲೋಕಸಭೆ ಎರಡೂ ಕಲಾಪ ಇಂದು ಮಧ್ಯಾಹ್ನದವರೆಗೂ ಮುಂದೂಡಲಾಗಿತ್ತು. ಬೆಳಗ್ಗೆ ಈ ಬಗ್ಗೆ ಟ್ವೀಟ್ ಮಾಡಿದ್ದ ಒ'ಬ್ರಿಯಾನ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ನಂತರ ಒ'ಬ್ರಿಯಾನ್ ಅಮಾನತುಗೊಂಡಿದ್ದು ಇದೇ ವಿಚಾರ ಹಿಡಿದು ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದಿವೆ. ಇದೇ ವೇಳೆ ಸಂಸದ್ ಟಿವಿ ವಿಚಾರ ಕೂಡ ಕಿಚ್ಚಿಗೆ ತುಪ್ಪ ಸುರಿದಿದೆ.

ಹೀಗೆ ಮಣಿಪುರದ ಕಿಚ್ಚು ದೊಡ್ಡದಾಗುತ್ತಿದೆ, ಅತ್ತ ಮಣಿಪುರದಲ್ಲಿ ಹಿಂಸಾಚಾರವು ಇನ್ನೂ ಹಿಡಿತಕ್ಕೆ ಸಿಗುತ್ತಿಲ್ಲ. ಮತ್ತೊಂದು ಕಡೆ ಸಂಸತ್ ಅಧಿವೇಶನದಲ್ಲಿ ಇದೇ ವಿಚಾರ ಹಿಡಿದು ವಿಪಕ್ಷ ನಾಯಕರು ಮೋದಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಮೂಲಕ ಮಣಿಪುರ ಹಿಂಸಾಚಾರ ವಿಚಾರ ದೇಶದಲ್ಲಿ ಮಾತ್ರವದಲ್ಲದೆ ವಿದೇಶಗಳಲ್ಲೂ ಸುದ್ದಿಯಾಗಿ ಸದ್ದು ಮಾಡುತ್ತಿದೆ. ಹೀಗಾಗಿ ಮುಂಗಾರು ಅಧಿವೇಶನ ಮಣಿಪುರ ತಿಕ್ಕಾಟಕ್ಕೆ ಬಲಿಯಾಗಿ, ಮುಗಿದು ಹೋಗುವ ಸಾಧ್ಯತೆಯೇ ಹೆಚ್ಚು ಅಂತಿದ್ದಾರೆ ಜನ.
{document1}












Click it and Unblock the Notifications