Same-sex marriage: ಈ ದೇಶಗಳಲ್ಲಿ ಸಲಿಂಗಪ್ರೇಮ ವಿವಾಹ ಕಾನೂನುಬದ್ಧ: ಭಾರತದಲ್ಲಿ ಏಕೆ ಅಡೆತಡೆ?
ಇಡೀ ದೇಶದ ಚಿತ್ತ ಇಂದು ಸುಪ್ರೀಂ ಕೋರ್ಟ್‌ನತ್ತ ನೆಟ್ಟಿದೆ. ಸಲಿಂಗಪ್ರೇಮ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠ ಇಂದು ಅಂದರೆ ಅಕ್ಟೋಬರ್ 17 ರಂದು ತೀರ್ಪು ನೀಡಲಿದೆ. ಈ ನಿರ್ಧಾರ ಹೊಸ ಇತಿಹಾಸವನ್ನು ಬರೆಯಲಿದ್ದು ಸಲಿಂಗಿಗಳ ಜೀವನದಲ್ಲಿ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಲಿದೆ.
ಅದಾಗ್ಯೂ ಸಲಿಂಗಪ್ರೇಮ ವಿವಾಹವನ್ನು ಭಾರತ ಸರ್ಕಾರ ವಿರೋಧಿಸಿದೆ. ಸಲಿಂಗ ವಿವಾಹದ ಬೇಡಿಕೆಯು ನಗರಗಳಲ್ಲಿ ವಾಸಿಸುವ ಗಣ್ಯ ವರ್ಗದ ಜನರದ್ದಾಗಿದೆ ಎಂದು ಸರ್ಕಾರ ಒತ್ತಿ ಹೇಳಿದೆ. ಆದರೆ ಸಲಿಂಗ ವಿವಾಹದ ಬೇಡಿಕೆಗೂ ಸರ್ಕಾರದ ಆರೋಪಕ್ಕೂ ಸಂಬಂಧವಿಲ್ಲ, ನಮ್ಮದು ನ್ಯಾಯಯುತ ಬೇಡಿಕೆ ಎಂದು ಈ ಸಮುದಾಯ ಪ್ರತಿಕ್ರಿಯೆ ನೀಡಿದೆ.

ಯಾಕೆಂದರೆ ವಿಶ್ವದ 34 ಕ್ಕೂ ಹೆಚ್ಚು ದೇಶಗಳು ಸಲಿಂಗಪ್ರೇಮ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿವೆ. ಭಾರತದಲ್ಲೂ ಇದನ್ನು ಸಕ್ರಮಗೊಳಿಸಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಆದರೆ ಇದರಲ್ಲಿ ಕೆಲ ಅಡೆತಡೆಗಳು ಹೆಚ್ಚಾಗಿದ್ದು ಕಾನೂನು ಮಾನ್ಯತೆಗೆ ವಿರೋಧ ವ್ಯಕ್ತವಾಗಿದೆ. ಹಾಗಾದರೆ ಆ ಅಡೆತಡೆಗಳು ಯಾಕಾಗಿ ಎನ್ನುವುದನ್ನು ನೋಡೋಣ.
ಭಾರತದಲ್ಲಿ ಪುರುಷ ಮತ್ತು ಮಹಿಳೆ ಮಾತ್ರ ಮದುವೆಯ ವ್ಯಾಖ್ಯಾನದ ಅಡಿಯಲ್ಲಿ ಬರುತ್ತಾರೆ ಎಂದು ಸರ್ಕಾರ ಹೇಳುತ್ತದೆ. ಸಲಿಂಗ ವಿವಾಹಕ್ಕೆ ಅವಕಾಶ ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ತೆರೆಮರೆಯಲ್ಲಿ ನಡೆಯುತ್ತಿದ್ದ ಸಂಗತಿಗಳು ಬಹಿರಂಗವಾಗಿ ನಡೆಯತೊಡಗುತ್ತವೆ. ಅಂತಹ ಸಂಬಂಧಗಳು ವೇದ ಅಥವಾ ಶಾಸ್ತ್ರಗಳಲ್ಲಿ ಉಲ್ಲೇಖಿಸಲ್ಪಟ್ಟಿಲ್ಲ ಎಂದು ಧಾರ್ಮಿಕರು ಹೇಳುತ್ತಾರೆ.

ಮದುವೆಯ ಉದ್ದೇಶ ಸಂತಾನ. ಅಂತಹ ಸಂಬಂಧಕ್ಕೆ ಕಾನೂನು ಮಾನ್ಯತೆ ಸಿಕ್ಕರೆ ಮದುವೆಯ ಉದ್ದೇಶವೇ ಸೋಲುತ್ತದೆ. ದೇಶದ ಸಾಂಸ್ಕೃತಿಕ ಮತ್ತು ಸಾಮಾಜಿಕ ರಚನೆ ಮತ್ತು ಚಾಲ್ತಿಯಲ್ಲಿರುವ ನಂಬಿಕೆಗಳಿಂದಾಗಿ ಹೆಚ್ಚಿನ ಸಂಖ್ಯೆಯ ಜನಸಂಖ್ಯೆಯು ಈ ವಿಷಯದ ಬಗ್ಗೆ ಅನಾನುಕೂಲತೆಯನ್ನು ಅನುಭವಿಸುತ್ತದೆ ಎಂದು ಕೆಲವರು ವಾದಿಸುತ್ತಾರೆ.
ಭಾರತದಲ್ಲಿ ಮದುವೆಗೆ ಸಂಬಂಧಿಸಿದ ಕಾನೂನುಗಳನ್ನು ಹಿಂದೂ ವಿವಾಹ ಕಾಯಿದೆ, ಕ್ರಿಶ್ಚಿಯನ್ ವಿವಾಹ ಕಾಯಿದೆ, ಮುಸ್ಲಿಂ ವಿವಾಹ ಕಾಯಿದೆ ಮತ್ತು ವಿಶೇಷ ವಿವಾಹ ಕಾಯಿದೆ ಎಂದು ವಿಂಗಡಿಸಲಾಗಿದೆ. ಆದರೆ ಇವುಗಳಲ್ಲಿ ಯಾವುದೂ ಸಲಿಂಗ ದಂಪತಿಗಳ ನಡುವಿನ ವಿವಾಹವನ್ನು ಉಲ್ಲೇಖಿಸುವುದಿಲ್ಲ.
LGBTQ ಸಮುದಾಯವು ಯಾವ ಹಕ್ಕುಗಳನ್ನು ಹೊಂದಿರುತ್ತದೆ?
ಇಂದು ಸುಪ್ರೀಂ ಕೋರ್ಟ್ ಸಲಿಂಗಪ್ರೇಮ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿದರೆ, ನಂತರ LGBTQ (ಲೆಸ್ಬಿಯನ್, ಗೇ, ದ್ವಿಲಿಂಗಿ, ಟ್ರಾನ್ಸ್ಜೆಂಡರ್, ಕ್ವೀರ್) ಸಮುದಾಯವು ಅನೇಕ ಹಕ್ಕುಗಳನ್ನು ಪಡೆಯುತ್ತದೆ. ಇದರ ಪ್ರಕಾರ ಅವರು ಸಲಿಂಗಪ್ರೇಮ ವಿವಾಹಕ್ಕೆ ಸಾಧ್ಯವಾಗುತ್ತದೆ.
ಇದಲ್ಲದೆ ಮಗುವನ್ನು ದತ್ತು ಪಡೆಯುವ ಹಕ್ಕು ವಿಮೆ ಮತ್ತು ಉತ್ತರಾಧಿಕಾರದಂತಹ ವಿಷಯಗಳಲ್ಲಿ ಕಾನೂನಿನ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಮಗುವನ್ನು ದತ್ತು ಪಡೆದಾಗ ಅವರಲ್ಲಿ ಒಬ್ಬರನ್ನು ಪೋಷಕರೆಂದು ಗುರುತಿಸಲಾಗುತ್ತದೆ.
ಈ ದೇಶಗಳಲ್ಲಿ ಸಲಿಂಗಪ್ರೇಮ ವಿವಾಹಕ್ಕೆ ಮಾನ್ಯತೆ:-
* ಅಮೆರಿಕದಲ್ಲಿ ಜೂನ್ 26, 2015 ರಂದು ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಸಲಿಂಗಪ್ರೇಮ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲಾಯಿತು.
* ಮೇ 18, 2013 ರಿಂದ ಫ್ರಾನ್ಸ್‌ನಲ್ಲಿ ಸಲಿಂಗ ವಿವಾಹ ಕಾನೂನುಬದ್ಧವಾಗಿದೆ.
* 1 ಅಕ್ಟೋಬರ್ 2017 ರಿಂದ ಜರ್ಮನಿಯಲ್ಲಿ ಸಲಿಂಗ ವಿವಾಹ ಕಾನೂನುಬದ್ಧವಾಗಿದೆ.
* 2014 ರಿಂದ ಯುನೈಟೆಡ್ ಕಿಂಗ್‌ಡಂನ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಸಲಿಂಗಪ್ರೇಮ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲಾಯಿತು.
* ಕೆನಡಾ ಜುಲೈ 20, 2005 ರಂದು ರಾಷ್ಟ್ರವ್ಯಾಪಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿತು.
* ಜುಲೈ 15, 2010 ರಂದು ಅರ್ಜೆಂಟೀನಾ ಸಲಿಂಗ ವಿವಾಹವನ್ನು ಅನುಮತಿಸಿದ ಮೊದಲ ಲ್ಯಾಟಿನ್ ಅಮೇರಿಕನ್ ದೇಶವಾಯಿತು.
* ರಾಷ್ಟ್ರವ್ಯಾಪಿ ಜನಾಭಿಪ್ರಾಯ ಸಂಗ್ರಹಣೆಯ ನಂತರ 2017 ರಲ್ಲಿ ಆಸ್ಟ್ರೇಲಿಯಾ, ಐರ್ಲೆಂಡ್, ಸ್ವಿಟ್ಜರ್ಲೆಂಡ್ ಮಾನ್ಯತೆ ಶಾಸನವನ್ನು ಅಂಗೀಕರಿಸಿದವು.
* ಇನ್ನೂ ದಕ್ಷಿಣ ಆಫ್ರಿಕಾದಲ್ಲಿ ಈ ಕಾನೂನಿನ ಬಗ್ಗೆ ಸುದೀರ್ಘ ಚರ್ಚೆ ನಡೆಸಿ, ಅಂತಿಮವಾಗಿ 30 ನವೆಂಬರ್ 2006 ರಂದು ಕಾನೂನು ಮಾನ್ಯತೆ ನೀಡಲಾಯಿತು.
2018 ರಲ್ಲಿ ಸುಪ್ರೀಂ ಕೋರ್ಟ್ ಯಾವ ತೀರ್ಪು ನೀಡಿತು?
2018 ರಲ್ಲಿ ಸುಪ್ರೀಂ ಕೋರ್ಟ್ ಸಲಿಂಗ ದಂಪತಿಗಳ ನಡುವಿನ ಸಂಬಂಧವನ್ನು ಅಪರಾಧ ಕೃತ್ಯಗಳ ವರ್ಗದಿಂದ ತೆಗೆದುಹಾಕಿತ್ತು. ಹಿಂದೆ ಸಲಿಂಗಕಾಮಿ ಜನರ ನಡುವಿನ ಸಂಬಂಧವನ್ನು ಅಪರಾಧ ಎಂದು ಪರಿಗಣಿಸಲಾಗಿತ್ತು. ಇವರ ವಿರುದ್ಧ ಸಾಮಾಜಿಕ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗಿತ್ತು. ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠವು ಅಂತಹ ಸಂಬಂಧಗಳನ್ನು ಅಸಹಜ ಎಂದು ಘೋಷಿಸಿದ ಸೆಕ್ಷನ್ 377 ಅನ್ನು ರದ್ದುಗೊಳಿಸಿತ್ತು. ಸುಪ್ರೀಂ ಕೋರ್ಟ್‌ನ ಈ ನಿರ್ಧಾರವು LGBTQ (ಲೆಸ್ಬಿಯನ್, ಗೇ, ದ್ವಿಲಿಂಗಿ, ಟ್ರಾನ್ಸ್ಜೆಂಡರ್, ಕ್ವೀರ್) ಸಮುದಾಯದ ಜನರಿಗೆ ಐತಿಹಾಸಿಕವೆಂದು ಪರಿಗಣಿಸಲ್ಪಟ್ಟಿತ್ತು.












Click it and Unblock the Notifications