ಸೈಫ್ ಅಲಿ ಖಾನ್‌ಗೆ ಇರಿತ ಪ್ರಕರಣದ ಪ್ರಮುಖ ಆರೋಪಿ ಬಂಧನ
ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿ ಹಲವು ಬಾರಿ ಚಾಕುವಿನಿಂದ ಇರಿದಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಛತ್ತೀಸ್‌ಗಢದಲ್ಲಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಮುಂಬೈ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಇದೀಗ ಛತ್ತೀಸ್‌ಗಢದತ್ತ ದೌಡಾಯಿಸಿದ್ದಾರೆ.
ಗುರುವಾರ ಮುಂಜಾನೆ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ನುಗ್ಗಿದ ವ್ಯಕ್ತಿಯೊಬ್ಬ, ಸೈಫ್ ಅಲಿ ಖಾನ್‌ರ ಕುತ್ತಿಗೆ, ಬೆನ್ನುಮೂಳೆ ಬಳಿ ಸೇರಿದಂತೆ ಹಲವು ಕಡೆ ಚಾಕುವಿನಿಂದ ಇರಿದಿದ್ದ. ಸೈಫ್ ಅಲಿ ಖಾನ್‌ರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರೈಲ್ವೆ ನಿಲ್ದಾಣದಲ್ಲಿ ಬಂಧನ
ಬಂಧಿತ ಆರೋಪಿಯನ್ನು 31 ವರ್ಷದ ಕೈಲಾಶ್ ಕನ್ನೋಜಿಯಾ ಎಂದು ಗುರುತಿಸಲಾಗಿದೆ. ಛತ್ತಿಸ್‌ಗಢದ ದುರ್ಗ್ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಪೊಲೀಸರು ಆತನ ಗುರುತನ್ನು ದೃಢಪಡಿಸಬೇಕಿದ್ದು, ಅವರು ಈಗಾಗಲೇ ಛತ್ತಿಸ್‌ಗಢದ ಕಡೆ ಹೋಗಿದ್ದಾರೆ.
ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮುಂಬೈ ಪೊಲೀಸರ ಮಾರ್ಗದರ್ಶನದಲ್ಲಿ ಮುಂಬೈ-ಹೌರಾ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಶಂಕಿತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಶನಿವಾರ ಮಧ್ಯಾಹ್ನ 2 ಗಂಟೆಗೆ ರೈಲು ದುರ್ಗ ನಿಲ್ದಾಣಕ್ಕೆ ತಲುಪಿದ್ದು ಆರೋಪಿಯನ್ನು ಕೆಳಗಿಳಿಸಿ ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ಮುಂಬೈ ಪೊಲೀಸರು ಶಂಕಿತನ ಫೋಟೊ, ರೈಲು ಸಂಖ್ಯೆ ಮತ್ತು ಸ್ಥಳದ ಮಾಹಿತಿಯನ್ನು ಆರ್ ಪಿಎಫ್‌ಗೆ ಕಳಿಸಿದ್ದರು. ಈ ಮಾಹಿತಿಯ ಆಧಾರದ ಮೇಲೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಶಂಕಿತನ ಜೊತೆ ಮುಂಬೈ ಪೊಲೀಸ್ ಅಧಿಕಾರಿಗಳು ವಿಡಿಯೋ ಕರೆಯಲ್ಲಿ ಮಾತನಾಡಿದ್ದಾರೆ. ಬಂಧಿತ ವ್ಯಕ್ತಿಯೇ ಘಟನೆಯಲ್ಲಿ ಭಾಗಿದ್ದಾನೆಯೇ ಅಥವಾ ಈತ ಬೇರೆಯವನೇ ಎಂದು ಖಚಿತಪಡಿಸಿಕೊಳ್ಳಲು ಮುಂಬೈನಿಂದ ಪೊಲೀಸ್ ಅಧಿಕಾರಿಗಳ ತಂಡವೊಂದು ಛತ್ತಿಸ್‌ಗಢಕ್ಕೆ ತಲುಪಿದೆ. ಆರೋಪಿಯು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಎಂದು ಹೇಳಲಾಗಿದೆ.
ರೈಲ್ವೆ ಸಿಬ್ಬಂದಿ ವಿಚಾರಣೆಯಲ್ಲಿ ಆತ ನಾಗ್ಪುರಕ್ಕೆ ಹೋಗುತ್ತಿದ್ದ ಎನ್ನುವ ವಿಚಾರ ತಿಳಿದುಬಂದಿದೆ. ನಾಗ್ಪುರದಿಂದ ಬಿಲಾಸ್‌ಪುರಕ್ಕೆ ಹೋಗಲು ಯೋಜಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿಸಲಾಗಿರುವ ಆರೋಪಿಯುವ ಪ್ರಕರಣದ ಪ್ರಮುಖ ಶಂಕಿತನನ್ನು ಹೋಲುತ್ತಿದ್ದು, ಸಿಸಿಟಿವಿ ದೃಶ್ಯಗಳಲ್ಲಿ ಆತ ತೆಗೆದುಕೊಂಡು ಹೋಗುತ್ತಿದ್ದ ಅದೇ ಚೀಲ ಆತನ ಬಳಿ ಇತ್ತು ಎನ್ನುವ ಮಾಹಿತಿ ಸಿಕ್ಕಿದೆ.
ಚೇತರಿಸಿಕೊಳ್ಳುತ್ತಿರುವ ಸೈಫ್ ಅಲಿ ಖಾನ್
ಚಾಕುವಿನಿಂದ ದಾಳಿಗೊಳಗಾದ ನಟ ಸೈಫ್ ಅಲಿ ಖಾನ್ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಸೈಫ್ ಅಲಿ ಖಾನ್ ಬೆನ್ನು ಮೂಳೆಯಿಂದ 2.5 ಇಂಚಿನ ಚಾಕುವಿನ ತುಂಡನ್ನು ಹೊರತೆಗೆಯಲಾಗಿದೆ.












Click it and Unblock the Notifications