ನಕಲಿ ಜಾತಿ ಪ್ರಮಾಣ ಪತ್ರ ನೀಡಿದವರ ಕೆಲಸದಿಂದ ಕಿತ್ತುಬಿಸಾಡಿ: ಕೇಂದ್ರ
ನವದೆಹಲಿ, ಜೂನ್ 16: ಪರಿಶಿಷ್ಟ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ನಕಲಿ ಪ್ರಮಾಣ ಪತ್ರ ನೀಡಿದವರನ್ನು ಕೆಲಸದಿಂದ ವಜಾ ಮಾಡಿ ಎಂದು ಕೇಂದ್ರ ಸರಕಾರ ಹೇಳಿದೆ.
ಕೇಂದ್ರ ಸರಕಾರದ ಎಲ್ಲ ಇಲಾಖೆಗಳಿಗೂ ಅಂಥ ನೇಮಕಾತಿಯ ಬಗ್ಗೆ ವಿವರಗಳನ್ನು ಕೇಳಲಾಗಿದೆ. ಸಾವಿರದ ಎಂಟನೂರು ಮಂದಿ ನಕಲಿ ಜಾತಿ ಪತ್ರ ನೀಡಿ ಉದ್ಯೋಗ ಪಡೆದಿದ್ದಾರೆ. ಆ ಪೈಕಿ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಮತ್ತು ಇನ್ಷೂರೆನ್ಸ್ ಕಂಪೆನಿಗಳಲ್ಲಿ ಆ ರೀತಿ ನೇಮಕಾತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಿರುವುದಾಗಿ ಅಧಿಕಾರಿಗಳು ಮಾಹಿತಿ ಬಹಿರಂಗ ಪಡಿಸಿದ್ದಾರೆ.

ಕೆಲಸಕ್ಕೆ ಸೇರುವ ಸಂದರ್ಭದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಅಂತ ಗೊತ್ತಾದರೆ ನಿಯಮಾವಳಿ ಅನುಸಾರ ಅಂಥ ಉದ್ಯೋಗಿಯನ್ನು ತೆಗೆದುಹಾಕುವುದಕ್ಕೆ ಅಥವಾ ವಜಾ ಮಾಡುವುದಕ್ಕೆ ಕ್ರಮ ಜರುಗಿಸಲು ಮುಂದಾಗಬೇಕು ಎಂದು ಸರಕಾರಿ ಇಲಾಖೆಯಿಂದ ನಿರ್ದೇಶನ ನೀಡಲಾಗಿದೆ.
ನಕಲಿ ಪ್ರಮಾಣ ಪತ್ರ ನೀಡಿ ನೇಮಕವಾದವರ ಮಾಹಿತಿಯನ್ನು ಎಲ್ಲ ಇಲಾಖೆಯಿಂದಲೂ ಸಂಗ್ರಹಿಸಿ, ಸಮಗ್ರ ವರದಿ ಸಲ್ಲಿಸುವುದಕ್ಕೆ ಸೂಚನೆಯನ್ನು ನೀಡಲಾಗಿದೆ. ಈ ಬಗ್ಗೆ ಕಳೆದ ಮಾರ್ಚ್ ನಲ್ಲಿ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದ ಸಚಿವ ಜಿತೇಂದ್ರ ಸಿಂಗ್, 1832 ಮಂದಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದರು.
ಆ ಪೈಕಿ 276 ಮಂದಿಯನ್ನು ವಜಾ ಅಥವಾ ಅಮಾನತು ಮಾಡಲಾಗಿದೆ. 521 ಮಂದಿ ವಿರುದ್ಧ ವ್ಯಾಜ್ಯ ಹೂಡಲಾಗಿದೆ. 1035 ಮಂದಿ ವಿರುದ್ಧ ಶಿಸ್ತು ಕ್ರಮ ಬಾಕಿಯಿದೆ. 1296 ಮಂದಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಕೆಲಸ ಪಡೆದಿರುವುದು ಆರ್ಥಿಕ ಸೇವಾ ಇಲಾಖೆಯಲ್ಲೇ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 157, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 135, ಇಂಡಿಯನ್ ಓವರ್ ಸೀಸ್ ಬ್ಯಾಂಕ್ 112, ಸಿಂಡಿಕೇಟ್ ಬ್ಯಾಂಕ್ 103 ಹಾಗೂ 41 ಮಂದಿ ನ್ಯೂ ಇಂಡಿಯಾ ಅಶ್ಯುರೆನ್ಸ್ ಹಾಗೂ ಯುನೈಟೆಡ್ ಇಂಡಿಯಾ ಅಶ್ಯುರೆನ್ಸ್ ನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿ, ಉದ್ಯೋಗ ಪಡೆದಿದ್ದಾರೆ.












Click it and Unblock the Notifications