ಬಾಂಗ್ಲಾದೇಶಕ್ಕೆ ಎಚ್ಚರಿಕೆ ನೀಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್
ಭಾರತದ ಪದೇ ಪದೇ ಹಗುರವಾಗಿ ಮಾತನಾಡುತ್ತಿರುವ ಬಾಂಗ್ಲಾದೇಶ ನಾಯಕರ ವಿರುದ್ಧ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಸ್ಕತ್‌ನಲ್ಲಿ ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹೊಸೈನ್ ಅವರನ್ನು ಭೇಟಿಯಾದ ಕೆಲವೇ ದಿನಗಳಲ್ಲಿ ಬಾಂಗ್ಲಾದೇಶದ ನಾಯಕರಿಗೆ ಎಚ್ಚರಿಕೆ ನೀಡಿರುವ ಅವರು, ಭಾರತದ ವಿರುದ್ಧ ಸುಳ್ಳು ಹೇಳಿಕೆ ನೀಡದಂತೆ ಆಗ್ರಹಿಸಿದ್ದಾರೆ.
ಭಾರತ ಸರ್ಕಾರದ ಬಗ್ಗೆ ಬಾಂಗ್ಲಾದೇಶ ಸರ್ಕಾರದ ನಾಯಕರು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಾಂಗ್ಲಾದೇಶವು ಭಾರತದ ಜೊತೆಗಿನ ಸಂಬಂಧ ಯಾವ ರೀತಿ ಮುಂದುವರೆಯಬೇಕು ಎನ್ನುವುದನ್ನು ನಿರ್ಧರಿಸಬೇಕು ಎಂದು ಹೇಳಿದ್ದಾರೆ.

ಬಾಂಗ್ಲಾದೇಶ ಸರ್ಕಾರದ ದ್ವಂದ್ವತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅವರು ಮಾಡುವ ತಪ್ಪುಗಳಿಗೆ ಭಾರತ ಸರ್ಕಾರವನ್ನು ದೂಷಿಸುತ್ತಾ, ಬಾಂಗ್ಲಾದೇಶವು ಭಾರತದ ಜೊತೆ ಉತ್ತಮ ಸಂಬಂಧವನ್ನು ಬಯಸುತ್ತದೆ ಎಂದು ಬಾಯಿ ಮಾತಿಗೆ ಹೇಳಿದರೆ ಆಗುವುದಿಲ್ಲ ಎಂದಿದ್ದಾರೆ.
ಬಾಂಗ್ಲಾದೇಶದಲ್ಲಿರುವ ಮಧ್ಯಂತರ ಸರ್ಕಾರದಲ್ಲಿ ಪ್ರತಿಯೊಂದಕ್ಕೂ ಭಾರತವನ್ನು ದೂಷಿಸುತ್ತಿದ್ದಾರೆ. ಅವರ ಹೇಳಿಕೆಗಳನ್ನು ನೋಡಿದರೆ ಹಲವು ವಿಚಾರಗಳು ಹಾಸ್ಯಾಸ್ಪದವಾಗಿವೆ. ಒಂದು ಕಡೆ ಭಾರತ ಸರ್ಕಾರವನ್ನು ದೂಷಿಸುತ್ತಾ ಮತ್ತೊಂದು ಕಡೆ ಉತ್ತಮ ಸಂಬಂಧವನ್ನು ಬಯಸಿದರೆ ಸಾಕಾಗಲ್ಲ, ಪ್ರತಿದಿನ ಎಲ್ಲದಕ್ಕೂ ಭಾರತವನ್ನು ದೂಷಿಸಿದರೆ ಸಂಬಂಧ ಉತ್ತಮವಾಗಿರಲು ಸಾಧ್ಯವಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ.
ನಮಗೆ ಬಾಂಗ್ಲಾದೇಶ ಜೊತೆ 1971ರಿಂದ ವಿಶೇಷವಾದ ಇತಿಹಾಸವಿದೆ. ಮುಂದಿನ ದಿನಗಳಲ್ಲಿ ಭಾರತದ ಜೊತೆ ಬಾಂಗ್ಲಾದೇಶ ಯಾವ ರೀತಿಯ ಸಂಬಂಧವನ್ನು ಹೊಂದಲು ಇಷ್ಟಪಡುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು.
ಅವರು ನೀಡುತ್ತಿರುವ ಹೇಳಿಕೆಗಳು ದ್ವಿಪಕ್ಷೀಯ ಮಾತುಕತೆಗಳ ಮೇಲೆ ಪರಿಣಾಮ ಬೀರುತ್ತದೆ. ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯಾತರ ಮೇಲೆ ಕೋಮು ದಾಳಿಗಳು ನಡೆಯುತ್ತಿದೆ, ಇದನ್ನು ಭಾರತ ಸಹಿಸುವುದಿಲ್ಲ. ಇದನ್ನು ನಾವು ಬಾಂಗ್ಲಾದೇಶದ ಜೊತೆ ಚರ್ಚೆ ನಡೆಸಿದ್ದೇವೆ. ಇದನ್ನು ನಿರ್ಲಕ್ಷ್ಯ ಮಾಡಿದರೆ ಎರಡೂ ದೇಶಗಳ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಬಾಂಗ್ಲಾದೇಶದಲ್ಲಿ ಶಾಂತಿ ನೆಲೆಸಬೇಕು ಎಂದು ಭಾರತ ಬಯಸುತ್ತದೆ. ಈ ವಿಚಾರದಲ್ಲಿ ಬಾಂಗ್ಲಾದೇಶಕ್ಕೆ ಈಗಾಗಲೇ ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ. ಅಲ್ಲಿ ನಿರಂತರವಾಗಿ ಗಲಭೆಗಳು ನಡೆದರೆ ಭಾರತ ಅದನ್ನು ಇಷ್ಟಪಡುವುದಿಲ್ಲ. ಭಯೋತ್ಪಾದನೆಯನ್ನು ಬಾಂಗ್ಲಾದೇಶ ಸಾಮಾನ್ಯ ವಿಚಾರ ಎನ್ನುವಂತೆ ನೋಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿ ಪಾಕಿಸ್ತಾನದ ಪ್ರಭಾವ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜೈಶಂಕರ್ ಈ ಹೇಳಿಕೆ ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿ ದಂಗೆ ತೀವ್ರವಾದ ಬಳಿಕ ಪ್ರಧಾನಿಯಾಗಿದ್ದು ಶೇಖ್ ಹಸೀನಾ ರಾತ್ರೋ ರಾತ್ರಿ ದೇಶ ತೊರೆದು ಭಾರತದ ಆಶ್ರಯ ಪಡೆದಿದ್ದಾರೆ. ಶೇಖ್ ಹಸೀನಾರನ್ನು ಒಪ್ಪಿಸಬೇಕು ಎಂದು ಬಾಂಗ್ಲಾದೇಶ ಮಧ್ಯಂತರ ಸರ್ಕಾರ ಭಾರತಕ್ಕೆ ಒತ್ತಾಯ ಮಾಡುತ್ತಿದೆ. ಇದೇ ಕಾರಣಕ್ಕೆ ಬಾಂಗ್ಲಾದೇಶದ ನಾಯಕರು ಭಾರತ ಸರ್ಕಾರದ ವಿರುದ್ಧ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ.












Click it and Unblock the Notifications