Putin India Visit: ಕೆಲವೇ ಕ್ಷಣಗಳಲ್ಲಿ ಭಾರತಕ್ಕೆ ಬಂದು ಇಳಿಯಲಿದ್ದಾರೆ ರಷ್ಯಾ ಅಧ್ಯಕ್ಷ ಪುಟಿನ್
ರಷ್ಯಾ ಅಧ್ಯಕ್ಷ ಪುಟಿನ್ ಇನ್ನೇನು ಕೆಲವೇ ಕ್ಷಣಗಳಲ್ಲಿ ಭಾರತಕ್ಕೆ ಬಂದು ಇಳಿಯಲಿದ್ದಾರೆ. ಹೀಗೆ ವ್ಲಾದಿಮಿರ್ ಪುಟಿನ್ ಅವರ ಆಗಮನದ ಹಿನ್ನೆಲೆ ಎಲ್ಲೆಲ್ಲೂ ಹದ್ದಿನ ಕಣ್ಣು ಇಡಲಾಗಿದ್ದು, ರಾಷ್ಟ್ರ ರಾಜಧಾನಿ ಈಗ 7 ಸುತ್ತಿನ ಕೋಟೆಯಂತೆ ಭಾಸವಾಗುತ್ತಿದೆ. ಉಕ್ರೇನ್ ಜೊತೆಗೆ ರಷ್ಯಾ ಯುದ್ಧವನ್ನು ನಡೆಸುತ್ತಿರುವ ಸಮಯದಲ್ಲೇ ಭಾರತಕ್ಕೆ ಬರುತ್ತಿದ್ದಾರೆ ಪುಟಿನ್. ಹೀಗಾಗಿಯೇ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಇದೀಗ ಹದ್ದಿನ ಕಣ್ಣು ಇಟ್ಟು ಕಾಯಲಾಗುತ್ತಿದೆ. ಮತ್ತೊಂದು ಕಡೆ ಪ್ರಧಾನಿ ಮೋದಿ ಅವರ ಜೊತೆ ಹಲವು ಪ್ರಮುಖ ರಕ್ಷಣಾತ್ಮಕ ಹಾಗೂ ಆರ್ಥಿಕ ಒಪ್ಪಂದಗಳಿಗೆ ಪುಟಿನ್ ಅವರು ನಾಳೆ ಸಹಿ ಹಾಕುವ ನಿರೀಕ್ಷೆ ಇದೆ.
ರಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವೆ ಸಂಬಂಧ ಹಳಸಿ ಹೋಗಿದ್ದು, ಭಾರತ ಇಂತಹ ಸಮಯದಲ್ಲೇ ಜಾಣ ನಡೆ ಇಟ್ಟು ರಷ್ಯಾಗೆ ನೆರವು ನೀಡಿತ್ತು. ಅಲ್ಲದೆ ಜಾಗತಿಕವಾಗಿ ಭಾರತ & ರಷ್ಯಾ ಶತಮಾನಗಳಿಂದ ಉತ್ತಮ ಸಂಬಂಧ ಹೊಂದಿದ್ದು, ಇದೇ ಕಾರಣಕ್ಕೆ ಆ ಸಂಬಂಧವನ್ನ ಕಾಪಾಡಿಕೊಂಡು ಹೋಗಲು ಭಾರತ ಕೂಡ ಬದ್ಧವಾಗಿದೆ. ಹಾಗೂ ರಷ್ಯಾ ಕೂಡ ಭಾರತಕ್ಕೆ ಈಗ ಬೇಕಿರುವ ಎಲ್ಲಾ ರೀತಿಯ ಸಹಾಯ ಮಾಡುತ್ತಿದೆ. ಹಲವು ವರ್ಷಗಳಿಂದ ಪುಟಿನ್ ಭಾರತಕ್ಕೆ ಭೇಟಿ ನೀಡಬೇಕು ಎಂಬ ಒಲವು ಭಾರತಕ್ಕೆ ಇತ್ತು. ಅದು ಇಂದು ನೆರವೇರುತ್ತಿದ್ದು, ಇಡೀ ಪ್ರಪಂಚದ ಕಣ್ಣು ಈಗ ಭಾರತದ ಮೇಲೆ ಇದೆ.

ಪುಟಿನ್ ಜೊತೆ ಪಿಎಂ ಮೋದಿ ಚರ್ಚೆ
ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮಧ್ಯೆ ಅತ್ಯುತ್ತಮ ಸ್ನೇಹ ಸಂಬಂಧ ಇದೆ. ಹೀಗಾಗಿ ತಮ್ಮ ಗೆಳೆಯನ ಬರುವಿಕೆಗೆ ಪ್ರಧಾನಿ ಮೋದಿ ಅವರು ಕೂಡ ಕಾಯುತ್ತಿದ್ದು, ದೊಡ್ಡ ದೊಡ್ಡ ನಾಯಕರು ಪುಟಿನ್ ಅವರನ್ನ ವೆಲ್‌ಕಂ ಮಾಡಲಿದ್ದಾರೆ. ಈ ಮೂಲಕ ಅಮೆರಿಕ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಪಾಶ್ಚಿಮಾತ್ಯ ದೇಶಗಳಿಗೆ ದೊಡ್ಡದಾಗೇ ಮೆಸೇಜ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಭಾರತದ ಜೊತೆಗೆ ರಷ್ಯಾ ನಿಂತಿದೆ ಎಂಬ ಸಂದೇಶ ಈ ಮೂಲಕ ರವಾನೆ ಆಗಲಿದೆ.
ರಷ್ಯಾ ಅಧ್ಯಕ್ಷರ ಹೋಟೆಲ್‌ಗೆ ವಿಶೇಷ ಭದ್ರತೆ
ಭಾರತದ ರಾಜಧಾನಿ ದೆಹಲಿಯ ಪ್ರತಿಷ್ಠಿತ ಹೋಟೆಲ್‌ನಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರು ಈ ರಾತ್ರಿ ಕಳೆಯಲಿದ್ದಾರೆ. ಹೀಗಾಗಿ ಹೋಟೆಲ್‌ನಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿದ್ದು, ದೆಹಲಿ ಸುತ್ತ ಹದ್ದಿನ ಕಣ್ಣು ಇಡಲಾಗಿದೆ. ಹಾಗೇ ವಿಶೇಷವಾದ ಕೋಣೆ ಕೂಡ ಪುಟಿನ್ ಅವರಿಗೆ ಸಿಗಲಿದ್ದು, ಐಷಾರಾಮಿ ಹೋಟೆಲ್‌ನಲ್ಲಿ ಪುಟಿನ್ ಅವರ ಜೊತೆಗೆ ಬರುವ ರಷ್ಯಾ ಅಧಿಕಾರಿಗಳಿಗೆ ತಂಗುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಔತಣ ಕೂಡ ಏರ್ಪಡಿಸಲಾಗಿದ್ದು, ಆ ನಂತರ ವಿಶೇಷವಾದ ಚರ್ಚೆಗಳು ನಡೆಯಲಿವೆ. ಪ್ರಮುಖವಾಗಿ ರಕ್ಷಣಾತ್ಮಕ ಒಪ್ಪಂದಗಳು ಗಮನ ಸೆಳೆಯಲಿದ್ದು, ಅತ್ಯಾಧುನಿಕ ಅಸ್ತ್ರಗಳನ್ನು ಭಾರತಕ್ಕೆ ಮಾರಾಟ ಮಾಡಲು ಈಗಾಗಲೇ ರಷ್ಯಾ ಒಪ್ಪಿಗೆಯನ್ನು ಸೂಚಿಸಿದೆ. ಹೀಗಾಗಿ ಭಾರತದ ಶತ್ರು ದೇಶಗಳ ಕಣ್ಣು ಈ ಬೆಳವಣಿಗೆಗಳನ್ನು ನೋಡಿ ಕೆಂಪಾಗಿದೆ.












Click it and Unblock the Notifications