ಗುರುವಾಯೂರ್ ದೇಗುಲದ ಬಳಿ ಹರಿಯಿತು ನೆತ್ತರು
ಬೆಂಗಳೂರು, ನವೆಂಬರ್ 13: ಕೇರಳದ ಗುರುವಾಯೂರ್ ದೇಗುಲದ ಸಮೀಪ ನೇನ್ಮಿನಿ ಎಂಬಲ್ಲಿ ನೆತ್ತರು ಹರಿದಿದೆ. ಆರೆಸ್ಸೆಸ್ ಕಾರ್ಯಕರ್ತನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತ ವ್ಯಕ್ತಿಯನ್ನು ವಡಕ್ಕೇತ್ತಲ ಆನಂದನ್ (28) ಎಂದು ಗುರುತಿಸಲಾಗಿದೆ.
ಆನಂದನ್ ನನ್ನು ಸಿಪಿಎಂ ಕಾರ್ಯಕರ್ತರೇ ಹತ್ಯೆ ಮಾಡಿ ಎಂದು ಆರೆಸ್ಸೆಸ್-ಬಿಜೆಪಿ ಆರೋಪಿಸಿದೆ. ಐದು ತಿಂಗಳ ಹಿಂದೆ ನಡೆದ ಸಿಪಿಎಂ ಕಾರ್ಯಕರ್ತ ಮೊಹಮ್ಮದ್ ಖಾಸಿಂ ಹತ್ಯೆ ಪ್ರಕರಣದಲ್ಲಿ ಆನಂದನ್ ಆರೋಪಿಯಾಗಿದ್ದರು.

ಬೈಕ್‍ನಲ್ಲಿ ಹೋಗುತ್ತಿದ್ದ ಆನಂದನ್ ಮೇಲೆ ದುಷ್ಕರ್ಮಿಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ. ತೀವ್ರ ಗಾಯಗೊಂಡು ರಕ್ತಸ್ರಾವದಿಂದ ಬಳಲುತ್ತಿದ್ದ ಆನಂದನ್ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲು ಯತ್ನಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ, ಭಾನುವಾರ ಸಂಜೆ ಆನಂದನ್ ಮೃತಪಟ್ಟಿದ್ದಾರೆ.
ಇದೊಂದು ರಾಜಕೀಯ ಸೇಡಿನ ಕೃತ್ಯ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.

ಆನಂದನ್ ಅವರ ಹತ್ಯೆ ಖಂಡಿಸಿ ಸೋಮವಾರದಂದು ಬಿಜೆಪಿ- ಆರೆಸ್ಸೆಸ್ ಗುರುವಾಯೂರ್ ನಗರದಲ್ಲಿ ಬಂದ್ ನಡೆಸುತ್ತಿವೆ. ರಾಜಕೀಯ ದ್ವೇಷದಿಂದ ಕಳೆದ 18 ತಿಂಗಳಿನಲ್ಲಿ 14ಕ್ಕೂ ಅಧಿಕ ಸ್ವಯಂ ಸೇವಕರು ಹತ್ಯೆಗೊಳಗಾಗಿದ್ದಾರೆ. ಇದಕ್ಕೆಲ್ಲ ಸಿಎಂ ಪಿ ವಿಜಯನ್ ಕಾರಣ ಎಂದು ಆರೆಸ್ಸೆಸ್ ಆರೋಪಿಸಿದೆ.












Click it and Unblock the Notifications