ಬಿಜೆಪಿ ಜೊತೆ ಹಳಸಿದ ಸಂಬಂಧ: RSS ವಿಕೆಟ್ ಪತನ
ಲಕ್ನೋ, ಅ 14 (ಪಿಟಿಐ): ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನಾಯಕರ ಜೊತೆಗೆ ಉತ್ತಮ ಸಂಬಂಧವಿಲ್ಲ ಎನ್ನುವ ಕಾರಣಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸಂಘಟನೆಯ ಹಿರಿಯ ಪದಾಧಿಕಾರಿಯೊಬ್ಬರನ್ನು ಪ್ರಮುಖ ಹುದ್ದೆಯಿಂದ ವಜಾ ಮಾಡಿದೆ.
ಆರ್ಎಸ್ಎಸ್ ಮತ್ತು ಬಿಜೆಪಿ ನಡುವೆ ಸಮನ್ವಯ ಅಧಿಕಾರಿಯಾಗಿ ಸಂಘಟನೆಯ ಜಂಟಿ ಕಾರ್ಯದರ್ಶಿ ಕೃಷ್ಣ ಗೋಪಾಲ್ ಅವರನ್ನು ನೇಮಿಸಿ RSS ಆದೇಶ ಹೊರಡಿಸಿದೆ.
ಇವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಅದರಲ್ಲೂ ಪ್ರಮುಖವಾಗಿ ಉತ್ತರ ಪ್ರದೇಶದಲ್ಲಿ ಮಾತೃ ಪಕ್ಷ ಬಿಜೆಪಿಗೆ ಮುನ್ನಡೆ ಸಾಧಿಸಲು ಪ್ರಮುಖ ಕಾರಣರಾಗಿದ್ದರು ಎನ್ನುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ಹಾಗಾಗಿ, ಕೇಂದ್ರದ ಬಿಜೆಪಿ ನಾಯಕರ ಜೊತೆ ಉತ್ತಮ ಸಂಬಂಧವಿಲ್ಲದ ಕಾರಣಕ್ಕಾಗಿ ಸುರೇಶ್ ಸೋನಿ ಅವರನ್ನು ಆಯಕಟ್ಟಿನ ಸ್ಥಾನದಿಂದ ಆರ್ಎಸ್ಎಸ್ ವಜಾಗೊಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ತಕ್ಷಣದಿಂದಲೇ ಜಾರಿಗೆ ಬರುವಂತೆ ಕೃಷ್ಣ ಗೋಪಾಲ್ ಅವರು ಸಮನ್ವಯ ಅಧಿಕಾರಿಯಾಗಿ ಕೆಲಸ ಮಾಡಲಿದ್ದಾರೆ. ಉತ್ತರಪ್ರದೇಶದ ಮೂಲದ ಇವರು ಪಿಎಚ್ಡಿ ಪದವೀಧದರು ಎಂದು ಸಂಘಟನೆಯ ಮನ್ಮೋಹನ್ ವೈದ್ಯ ಹೇಳಿದ್ದಾರೆ.
ಕಳೆದ ಚುನಾವಣೆಯಲ್ಲಿ ಕೃಷ್ಣ ಗೋಪಾಲ್ ಉತ್ತರಪ್ರದೇಶ, ಬಿಹಾರ್ ಮತ್ತು ಉತ್ತರಖಾಂಡಿನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜೊತೆ ಸೇರಿ ಬಿಜೆಪಿಗೆ ಉತ್ತಮ ಫಲಿತಾಂಶ ತರುವಲ್ಲಿ ಯಶಸ್ವಿಯಾಗಿದ್ದರು. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ ಎಂದು ವೈದ್ಯ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಸೋಮವಾರ (ಅ 13) ಲಕ್ನೋದಲ್ಲಿ ಆರಂಭವಾದ ಸಂಘಟನೆಯ ಪ್ರಮುಖರು ಭಾಗವಸಿಸುವ ಮಹತ್ವದ 'ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳಿ' ಸಭೆಯ ಮೊದಲ ದಿನದ ಸಮಾವೇಶದ ನಂತರ ಆರ್ಎಸ್ಎಸ್ ಈ ಮಹತ್ವದ ಪ್ರಕಟಣೆ ಹೊರಡಿಸಿದೆ.
ಆದಾಗ್ಯೂ, ಸಂಘಟನೆಯ ಅತ್ಯಂತ ನಿಷ್ಟಾವಂತ ಮತ್ತು ಹಿರಿಯ ಕಾರ್ಯಕರ್ತ ಎಂದೇ ಹೇಳಲಾಗುವ ಸುರೇಶ್ ಸೋನಿಯವರಿಗೆ ಬೇರೆ ಜವಾಬ್ದಾರಿ ನೀಡಲಾಗುವುದೆಂದು ಆರ್ಎಸ್ಎಸ್ ತಿಳಿಸಿದೆ. (ಚಿತ್ರದಲ್ಲಿ ಕೃಷ್ಣ ಗೋಪಾಲ್, ಚಿತ್ರಕೃಪೆ: samvada.org)












Click it and Unblock the Notifications