ಕಣ್ಣೂರಿನಲ್ಲಿ ಆರ್‌ಎಸ್ಎಸ್ ಮುಖಂಡನ ಹತ್ಯೆ
ತಿರುವನಂತಪುರ, ಸೆ.2 : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕೇರಳಲ ಕಣ್ಣೂರಿನಲ್ಲಿ ನಡೆದಿದೆ. ಹತ್ಯೆಯಲ್ಲಿ ಸಿಪಿಎಂ ಪಕ್ಷದ ನೇರ ಕೈವಾಡವಿದ್ದು, ಸ್ಥಳೀಯ ಸಿಪಿಎಂ ನಾಯಕರೇ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೊಲೆಯಾದವರನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ (ಆರ್‌ಎಸ್‌ಎಸ್)ಯ ಕಣ್ಣೂರಿನ ಮುಖಂಡನಾಗಿದ್ದ ಇ.ಮನೋಜ್ (32) ಎಂದು ಗುರುತಿಸಲಾಗಿದೆ. ಮನೋಜ್ ಅವರ ಕಾರಿನತ್ತ ಕೈಬಾಂಬ್ ಅನ್ನು ಎಸೆಯಲಾಗಿದ್ದು, ಬಳಿಕ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ ಅವರನ್ನು ಹಿಡಿದು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಮನೋಜ್ ಅವರನ್ನು ಯಾರು ಹತ್ಯೆ ಮಾಡಿದ್ದಾರೆ ಎಂಬುದರ ಕುರಿತು ಈ ವರೆಗೂ ಮಾಹಿತಿ ಲಭಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಕೊಲೆಯಲ್ಲಿ ಸಿಪಿಎಂ ಪಕ್ಷದ ನೇರ ಕೈವಾಡವಿದ್ದು, ಸ್ಥಳೀಯ ಸಿಪಿಎಂ ನಾಯಕರೇ ಮನೋಜ್ ಅವರನ್ನು ಹತ್ಯೆ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮನೋಜ್ ಹತ್ಯೆಯನ್ನು ಖಂಡಿಸಿ ಮಂಗಳವಾರ ಕಣ್ಣೂರು ಬಂದ್‌ಗೆ ಕರೆ ನೀಡಲಾಗಿದೆ. [ಆರೆಸ್ಸೆಸ್-ಬಿಜೆಪಿಯನ್ನು ನಿಷೇಧಿಸುವೆ : ಲಾಲು]
ಅಮಿತ್ ಶಾ ಪ್ರತಿಕ್ರಿಯೆ : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕೇರಳ ಪ್ರವಾಸದಲ್ಲಿರುವಾಗಲೇ ಈ ಕೊಲೆ ನಡೆದಿದೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಸಿಪಿಎಂ ಪಕ್ಷದ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ. ಉತ್ತರ ಕೇರಳದ ಸಿಪಿಎಂ ಮುಖಂಡರು ಸುಮಾರು 250ಕ್ಕೂ ಅಧಿಕ ಕಾರ್ಯಕರ್ತರನ್ನು ಕೊಲೆಗೈದಿದ್ದಾರೆ. ನಾವು ನಮ್ಮ ಹೋರಾಟವನ್ನು ಕಾನೂನು ಬದ್ಧವಾಗಿ ನ್ಯಾಯಾಲಯದಲ್ಲಿ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಕೇರಳದಲ್ಲಿ ಸಿಪಿಎಂ ಪಕ್ಷ ಪ್ರಬಲವಾಗಿದ್ದು, ಬಿಜೆಪಿ ಮತ್ತು ಸಿಪಿಎಂ ಪಕ್ಷಗಳ ಕಾರ್ಯಕರ್ತರ ನಡುವೆ ಆಗಾಗ ಘರ್ಷಣೆಗಳು ಸಂಭವಿಸುತ್ತಿರುತ್ತವೆ. ಪ್ರಸ್ತುತ ಪ್ರಕರಣದಲ್ಲಿಯೂ ಕೂಡ ಕಾರ್ಯಕರ್ತರನ್ನು ಪಕ್ಷಕ್ಕೆ ಸೆಳೆಯುವ ಸಂಬಂಧ ಉಂಟಾಗಿದ್ದ ಘರ್ಷಣೆ ತಾರಕ್ಕೇರಿ ಆರ್‌ಎಸ್‌ಎಸ್ ಮುಖಂಡ ಮನೋಜ್ ಹತ್ಯೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.











Click it and Unblock the Notifications