ಚುನಾವಣೆ ಬಳಿಕ ರಾಮ ಮಂದಿರ ವಿಚಾರ ಕೆದಕಿದ ಆರೆಸ್ಸೆಸ್
ನವದೆಹಲಿ, ಮೇ 27: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮರಳಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ರಾಮ ಮಂದಿರ ವಿಚಾರವನ್ನು ಕೆದಕಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣ ಮಾಡುವುದು ಶತಃಸಿದ್ಧ ಎಂದರು.
ಶ್ರೀರಾಮನ ಕೆಲಸ ನಡೆಯಬೇಕಿದೆ. ಅದು ನಡೆದೇ ನಡೆಯುತ್ತದೆ. ಈ ಕಾರ್ಯವನ್ನು ಮುಗಿಸಲು ಎಲ್ಲರೂ ಜತೆಗೂಡಿ ಬರಬೇಕು ಎಂದು ಹೇಳಿದರು.

ಇದು ನಮ್ಮ ಕೆಲಸ. ಹೀಗಾಗಿ ಇದನ್ನು ನಾವೇ ಮಾಡಬೇಕು. ನಾವು ಕೆಲವರಿಗೆ ಇದರ ಜವಾಬ್ದಾರಿಯನ್ನು ನೀಡಿದ್ದೇವೆ. ಆದರೆ, ಅದರ ಮೇಲೆ ನಾವು ಕಣ್ಣಿಟ್ಟಿರಬೇಕು ಎಂದರು.
ಶತಮಾನಗಳಿಂದ ಈ ದೇಶ ರಾಮನ ಹೆಸರು ಪಠಿಸುತ್ತಿದೆ. ರಾಮನ ಕೆಲಸವನ್ನೂ ಮಾಡಲೇಬೇಕು ಎಂಬಂತಹ ಸಂದರ್ಭದೊಳಗೆ ದೇಶ ಇಂದು ಸಾಗುತ್ತಿದೆ. ಯುವಜನರ ಕೈಗಳಲ್ಲಿ ರಾಮನ ಹೆಸರು ನೋಡಿದಾಗ ನನಗೆ ಸಂತೋಷವಾಗುತ್ತದೆ ಎಂದು ಹೇಳಿದರು.
ಚುನಾವಣೆ ಫಲಿತಾಂಶ ಹೊರಬಂದ ಕೆಲವೇ ದಿನಗಳಲ್ಲಿ ಮೋಹನ್ ಭಾಗವತ್ ಈ ಹೇಳಿಕೆ ನೀಡಿದ್ದಾರೆ. ಅಯೋಧ್ಯಾ ವಿವಾದವು ಇನ್ನೂ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ.
ಚುನಾವಣಾ ಪ್ರಚಾರದುದ್ದಕ್ಕೂ ಬಿಜೆಪಿ ನಾಯಕರು ರಾಮ ಮಂದಿರವನ್ನು ರಾಜಕೀಯ ಭಾಷಣಗಳಲ್ಲಿ ಪ್ರಸ್ತಾಪಿಸಿರಲಿಲ್ಲ. ಬಿಜೆಪಿ ಯಾವುದೇ ಚುನಾವಣಾ ಪ್ರಣಾಳಿಕೆ ಮತ್ತು ರಾಜಕೀಯ ಸಮಾವೇಶಗಳಲ್ಲಿ ರಾಮ ಮಂದಿರ ವಿಚಾರವನ್ನು ಪ್ರಸ್ತಾಪಿಸಿದೆ ಇರುವುದು ಇದೇ ಮೊದಲು.












Click it and Unblock the Notifications