ಜಿಂಬಾಬ್ವೆ: ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಮುಗಾಬೆ ನಕಾರ
ಹರಾರೆ, ನವೆಂಬರ್ 20: ಜಿಂಬಾಬ್ವೆಯ ಆಡಳಿತಾರೂಢ ಪಕ್ಷ 'ಜಿಂಬಾಬ್ವೆ ಆಫ್ರಿಕನ್ ನ್ಯಾಷನಲ್ ಯೂನಿಯನ್-ಪೆಟ್ರಿಯಾಟಿಕ್ ಫ್ರಂಟ್' ಮುಖ್ಯಸ್ಥ ಸ್ಥಾನದಿಂದ ಅಧ್ಯಕ್ಷ ರಾಬರ್ಟ್ ಮುಗಾಬೆಯನ್ನು ಪದಚ್ಯುತಿಗೊಳಿಸಲಾಗಿದೆ.
ಹೀಗಿದ್ದೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಗಾಬೆ ನಿರಾಕರಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷ ಹಾಗೂ ಸೇನೆ ಪ್ರಬಲ ಒತ್ತಡ ಹೇರುತ್ತಿವೆ. ಹೀಗಿದ್ದೂ ಮುಗಾಬೆ ಪಟ್ಟು ಹಿಡಿದು ಕೂತಿದ್ದಾರೆ. ಇದರಿಂದ ಜಿಂಬಾಬ್ವೆಯ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಿದೆ.

ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ದೇಶದ ಮಾಜಿ ಉಪಾಧ್ಯಕ್ಷ ಎಮ್ಮರ್ಸನ್ ನಂಗಾಗ್ವಾರನ್ನು ನೇಮಕ ಮಾಡಲಾಗಿದೆ.
ಕೆಲವು ದಿನಗಳ ಹಿಂದೆ ಕ್ಷಿಪ್ರ ಬೆಳವಣಿಗೆಯೊಂದರಲ್ಲಿ ದೇಶದ ಆಡಳಿತ ಚುಕ್ಕಾಣಿಯನ್ನು ಸೇನೆ ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಅಧ್ಯಕ್ಷರನ್ನು ಅದು ಗೃಹ ಬಂಧನಕ್ಕೆ ತಳ್ಳಿತ್ತು. ಇದೀಗ ಸೇನೆ ಜತೆ ಆಪ್ತ ಬಾಂಧವ್ಯ ಹೊಂದಿರುವ ಎಮ್ಮರ್ಸನ್ ನಂಗಾಗ್ವಾರನ್ನು ಪಕ್ಷಾಧ್ಯಕರನ್ನಾಗಿ ನೇಮಿಸಲಾಗಿದೆ.
ಆದರೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸಿರುವ 93 ವರ್ಷದ ಮುಗಾಬೆ, "ಮುಂದಿನ ತಿಂಗಳು ಆಡಳಿತ ಪಕ್ಷದ ಅಧ್ಯಕ್ಷತೆ ವಹಿಸಲಿದ್ದೇನೆ," ಎಂದು ದೇಶದ ಜನತೆಗೆ ಹೇಳಿದ್ದಾರೆ.
ಸೇನೆಯೆ ಗೃಹ ಬಂಧನದಿಂದ ಹೊರ ಬಂದು ಮಾತನಾಡಿರುವ ಅವರು ದೇಶ ಮತ್ತು ಸಹಜ ಸ್ಥತಿಗೆ ಬರಬೇಕಾಗಿದೆ ಎಂದು ಪ್ರತಿಪಾದಿಸಿದ್ದು ರಾಜೀನಾಮೆ ಒತ್ತಡವನ್ನು ಸಾರಸಗಟಾಗಿ ತಳ್ಳಿ ಹಾಕಿದ್ದಾರೆ.











Click it and Unblock the Notifications