
2002ರಲ್ಲಿ ಗುಜರಾತ್ ಗಲಭೆಕೋರರಿಗೆ ಪಾಠ ಕಲಿಸಲಾಯಿತು: ಮತ್ತೆ ಕೋಮು ಧ್ರುವೀಕರಣದ ಆಸರೆಗೆ ಕೈಚಾಚಿದ ಅಮಿತ್ ಶಾ
ಅಹಮದಾಬಾದ್, ನವೆಂಬರ್: ಕಾಂಗ್ರೆಸ್ ಬೆಂಬಲಿಸಿದ್ದರಿಂದ ಸಮಾಜ ವಿರೋಧಿ ಶಕ್ತಿಗಳು ಗುಜರಾತ್‌ನಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದರು. ಆದರೆ, 2002 ರಲ್ಲಿ ಗಲಭೆಕೋರರಿಗೆ ಪಾಠ ಕಲಿಸಲಾಯಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಈ ಮೂಲಕ, ಗುಜರಾತ್ ಚುನಾವಣೆಗೂ ಮುನ್ನ ಮತ್ತೆ ಕೋಮು ಧ್ರುವೀಕರಣದ ಆಸರೆಗೆ ಶಾ ಕೈಚಾಚಿದರು.
ದೇಶದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಗುಜರಾತ್ ವಿಧಾನಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಕೇಂದ್ರ ಗೃಹ ಸಚಿವರು ಮಾತನಾಡಿದರು.
ಗುಜರಾತ್‌ನಲ್ಲಿ ಹಿಂಸೆಯಲ್ಲಿ ತೊಡಗಿದವರಿಗೆ ಕಾಂಗ್ರೆಸ್ ಬೆಂಬಲವಿತ್ತು. ಗಲಭೆಕೋರರಿಗೆ 2002 ರಲ್ಲಿ ಪಾಠ ಕಲಿಸಲಾಯಿತು. ಸಮಾಜಘಾತುಕ ಚಟುವಟಿಕೆಗಳನ್ನು ನಿಲ್ಲಿಸಲಾಯಿತು. ರಾಜ್ಯದಲ್ಲಿ ಶಾಶ್ವತ ಶಾಂತಿ ನೆಲಸಿತು ಎಂದು ಅಮಿತ್ ಶಾ ಪ್ರತಿಪಾದಿಸಿದರು.
2002ರ ಫೆಬ್ರವರಿಯಲ್ಲಿ ಗೋಧ್ರಾ ರೈಲು ಸುಟ್ಟ ಘಟನೆಯ ನಂತರ ಗುಜರಾತ್‌ನಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ನಡೆದಿತ್ತು. ಈ ಘಟನಾವಳಿಗಳನ್ನು ಶಾ ಪರೋಕ್ಷವಾಗಿ ಸ್ಮರಿಸಿದರು.

ಕಾಂಗ್ರೆಸ್ ಆಳ್ವಿಕೆಯಲ್ಲಿ ಹೆಚ್ಚಾಗಿದ್ದ ಕೋಮು ಗಲಭೆಗಳು
ಗುಜರಾತ್‌ನ ಖೇಡಾ ಜಿಲ್ಲೆಯ ಮಹುಧಾ ಪಟ್ಟಣದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿದ ಮಾತನಾಡಿದ ಶಾ, 'ಗುಜರಾತ್‌ನಲ್ಲಿ (1995 ರ ಮೊದಲು) ಕಾಂಗ್ರೆಸ್ ಆಳ್ವಿಕೆಯಲ್ಲಿ ಕೋಮು ಗಲಭೆಗಳು ಹೆಚ್ಚಾಗಿದ್ದವು. ಕಾಂಗ್ರೆಸ್ ಜನರನ್ನು ಪ್ರಚೋದಿಸುತ್ತಿತ್ತು. ಸಮುದಾಯಗಳು ಮತ್ತು ಜಾತಿಗಳು ಪರಸ್ಪರ ಸಂಘರ್ಷಕ್ಕೆ ಇಳಿಯುತ್ತಿದ್ದವು. ಇಂತಹ ಗಲಭೆಗಳ ಮೂಲಕ ಕಾಂಗ್ರೆಸ್ ತನ್ನ ಮತ ಬ್ಯಾಂಕ್ ಅನ್ನು ಬಲಪಡಿಸಿಕೊಂಡಿತ್ತು. ಸಮಾಜದ ಬಹುಸಂಖ್ಯಾತ ವರ್ಗಕ್ಕೆ ಇದರಿಂದ ಅನ್ಯಾಯವಾಗಿತ್ತು' ಎಂದು ತಿಳಿಸಿದರು.
2002 ರಲ್ಲಿ ಗುಜರಾತ್ ಗಲಭೆಗಳಿಗೆ ಸಾಕ್ಷಿಯಾಯಿತು. ಏಕೆಂದರೆ ದುಷ್ಕರ್ಮಿಗಳು ಹಿಂಸಾಚಾರದಲ್ಲಿ ತೊಡಗಿಸಿಕೊಳ್ಳುವ ಅಭ್ಯಾಸವನ್ನು ಹೊಂದಿದ್ದರು. ಅವರು ಕಾಂಗ್ರೆಸ್‌ನಿಂದ ದೀರ್ಘಾವಧಿಯ ಬೆಂಬಲವನ್ನು ಪಡೆದಿದ್ದರು ಎಂದು ಹೇಳಿದರು.
2002 ರಲ್ಲಿಯೇ ಅವರಿಗೆ ತಕ್ಕ ಪಾಠ ಕಲಿಸಲಾಯಿತು. ಅವರು ಹಿಂಸಾಚಾರದಲ್ಲಿ ತೊಡಗುವುದನ್ನು ನಿಲ್ಲಿಸಿದರು. ಗಲಭೆಕೋರರ ವಿರುದ್ಧ ಬಿಜೆಪಿ ಕಠಿಣ ಕ್ರಮ ಕೈಗೊಂಡಿತು. ಗುಜರಾತ್‌ನಲ್ಲಿ ಶಾಶ್ವತ ಶಾಂತಿ ನೆಲೆಸಿತು ಎಂದು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಮಿತ್ ಶಾ ಧನ್ಯವಾದ ಹೇಳಿದರು. ಕಾಂಗ್ರೆಸ್ ತನ್ನ 'ವೋಟ್ ಬ್ಯಾಂಕ್' ಕಾರಣದಿಂದಾಗಿ ಇದರ ವಿರುದ್ಧವಾಗಿದೆ ಎಂದು ಆರೋಪಿಸಿದರು.

2002ರ ಕೋಮುಗಲಭೆಯಲ್ಲಿ ಸಾವಿರಾರು ಜನರ ಹತ್ಯೆ
2002ರಲ್ಲಿ ಗುಜರಾತ್‌ನಲ್ಲಿ ಹಿಂದೂ ಹಾಗೂ ಮುಸ್ಲಿಮರ ನಡುವೆ ಸಂಘರ್ಷಗಳು ನಡೆದಿದ್ದವು. ಈ ಹಿಂಸಾಚಾರದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದರು. ಆ ಸಮಯದಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು.

ಡಿಸೆಂಬರ್ 8ರಂದು ಗುಜರಾತ್ ಫಲಿತಾಂಶ
ಗುಜರಾತ್‌ನಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 01 ಹಾಗೂ 05 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾದ ಗುಜರಾತ್ ಬಿಜೆಪಿಗೆ ಪ್ರತಿಷ್ಠೆಯ ರಾಜ್ಯವಾಗಿದೆ.

ಗುಜರಾತ್ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ
ಈ ಸಾರಿಯ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇರುತ್ತಿತ್ತು. ಈ ಬಾರಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಗುಜರಾತ್‌ನಲ್ಲಿ ನೆಲೆ ಕಂಡುಕೊಳ್ಳಲು ಯತ್ನ ನಡೆಸಿದೆ. ಹೀಗಾಗಿ, ಗುಜರಾತ್ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಿವೆ. ಕಾಂಗ್ರೆಸ್ ಮಾತ್ರ ಕೆಳ ಹಂತರ ಪ್ರಚಾರಕ್ಕೆ ಮೊರೆ ಹೋಗಿದೆ.